ರಾಜ್ಯ

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರಿಯತಮೆಯ ಪತಿಯ ಹತ್ಯೆ – 9 ಮಂದಿಯ ಬಂಧನ

ಬೆಂಗಳೂರು : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರಿಯತಮೆಯ ಪತಿಯನ್ನು ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಧಿಸಿದಂತೆ 9 ಮಂದಿಯನ್ನು ಚಂದ್ರಾಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಚಂದ್ರಾಲೇಔಟ್‌ ನಿವಾಸಿಗಳಾದ ನದೀಂ ಅಹಮದ್‌ (23), ಶಬ್ಬೀರ್‌ ಹುಸೇನ್‌ (23), ಮೊಹಮ್ಮದ್‌ ಶಫೀ (23), ತಬ್ರೇಜ್‌ ಪಾಷಾ (23), ತನ್ವೀರ್‌ ಪಾಷಾ (21), ಹನನ್‌ ಪಾಷಾ (20), ಮೊಹಮ್ಮದ್‌ ಮುಬಾರಕ್‌ (21) ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದವರರು ಎಂದು ಗುರುತಿಸಲಾಗಿದೆ.

ಮೇ 2ರಂದು ಆರೋಪಿಗಳು ಜೋಹೆಬ್‌ ಅಬ್ರಾಹಂ ಎಂಬಾತನನ್ನು ಅಪಹರಿಸಿ, ಮುಖಕ್ಕೆ ಟೇಪ್‌ ಸುತ್ತಿ ಕೊಲೆಗೈದಿದ್ದಾರೆ.

ಇನ್ನು ಕೊಲೆಯಾದ ಜೋಹೆಬ್‌ ಅಬ್ರಾಹಂ ಐದು ವರ್ಷಗಳ ಹಿಂದೆ ಶಬ್ರೀನ್‌ ಎಂಬಾಕೆಯನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಶಬ್ರೀನ್‌ ಹಾಗೂ ಆರೋಪಿಗಳ ಪೈಕಿ ನದೀಂ ಅಹಮದ್‌ ಕಾಲೇಜು ದಿನಗಳಿಂದ ಸ್ನೇಹಿತರಾಗಿದ್ದು, ಆಗಾಗ್ಗೆ ಫೋನ್‌ನಲ್ಲಿ ಮತ್ತು ನೇರವಾಗಿ ಭೇಟಿಯಾಗಿ ಮಾತನಾಡುತ್ತಿದ್ದರು. ಅದನ್ನು ಗಮನಿಸಿದ ಅಬ್ರಾಹಂ, ನದೀಂಗೆ ಎರಡ್ಮೂರು ಬಾರಿ ಎಚ್ಚರಿಕೆ ನೀಡಿದ್ದರು. ಅದರಿಂದ ಆಕ್ರೋಶಗೊಂಡ ನದೀಂ ತನ್ನ ಸ್ನೇಹಿತರು ಮತ್ತು ಸಂಬಂಧಿಕರ ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ.

ಒಂದು ದಿನ ಅಬ್ರಾಹಂ ಮನೆಯಿಂದ ಹೊರಗಡೆ ಬಂದಿದ್ದಾಗ ಅದೇ ವೇಳೆ ಆರೋಪಿಗಳು ಕಾರೊಂದರಲ್ಲಿ ಬಂದು ಅಬ್ರಾಹಂನನ್ನು ಅಪಹರಿಸಿ ಬಳಿಕ ಮುಖಕ್ಕೆ ಟೇಪ್‌ ಸುತ್ತಿದ್ದು, ಆರ್‌.ಆರ್‌. ನಗರ, ಬಾಪೂಜಿನಗರ ಸೇರಿ ಎಲ್ಲೆಡೆ ಸುತ್ತಾಡಿದ್ದಾರೆ. ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ಅಬ್ರಾಹಂ ಉಸಿರುಗಟ್ಟಿ ಮೃತಪಟ್ಟಿದ್ದು, ಆರೋಪಿಗಳು ಮೃತದೇಹವನ್ನು ಗಂಗೊಂಡಹಳ್ಳಿ ಮುಖ್ಯರಸ್ತೆಯಲ್ಲಿ ಮಲಗಿಸಿ ಪರಾರಿಯಾಗಿದ್ದರು.

ಇನ್ನು ಪತಿ ನಾಪತ್ತೆ ಬಗ್ಗೆ ಪತ್ನಿ ಮೇ 1ರಂದು ಚಂದ್ರಾಲೇಔಟ್‌ ಠಾಣೆಯಲ್ಲಿ ದೂರು ನೀಡಿದ್ದು, ಮೇ 2ರಂದು ಮೃತನ ತಾಯಿ, ಪುತ್ರನ ಮೇಲೆ ಹಲ್ಲೆ ನಡೆಸಿ ಅಪಹರಿಸಿದ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಮತ್ತೊಂದು ದೂರು ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಚಂದ್ರಾಲೇಔಟ್‌ ಠಾಣೆಯ ಇನ್‌ಸ್ಪೆಕ್ಟರ್‌ ಮನೋಜ್‌ ಮತ್ತು ತಂಡ ಸಿಸಿ ಕ್ಯಾಮೆರಾ ಹಾಗೂ ಇತರೆ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!