ಮೇ.14 – ಕಾಪುದ ಪಿಲಿಕೋಲ
ಕಾಪು : ಕಾಪುವಿನಲ್ಲಿ ವಾರ್ಷಿಕವಾಗಿ ನಡೆಯುವ ಕಾಪುದ ಪಿಲಿಕೋಲ ಈ ಬಾರಿ ಮೇ.14
ರಂದು ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಕಾಪುದ ಪಿಲಿಕೋಲಕ್ಕೆ ಪೂರ್ವಭಾವಿಯಾಗಿ ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ನಿನ್ನೆ ಪ್ರಾರ್ಥನೆಯೊಂದಿಗೆ ಅಭಯ ಪ್ರಸಾದ ಪಡೆಯಲಾಯಿತು. ಪಿಲಿಕೋಲದ ಸಿದ್ಧತೆಯಲ್ಲಿರುವ ಕಾಪುವಿನ ಶ್ರೀ ಬ್ರಹ್ಮಮುಗ್ಗೆರ್ಕಳ ಹುಲಿಚಂಡಿ ದೈವಸ್ಥಾನದ ಆಡಳಿತ ಮಂಡಳಿ, ಕಾಣಿಕೆ
ಮನೆತನದವರು, ಗುರಿಕಾರರು ಮತ್ತು ಹತ್ತು ಸಮಸ್ತರು ಜೊತೆಗೂಡಿ ಮಂಗಳವಾರ ಕಾಪು ಹಳೇ
ಮಾರಿಗುಡಿ, ಹೊಸ ಮಾರಿಗುಡಿ ಮತ್ತು 3ನೇ ಮಾರಿಗುಡಿಗೆ ತೆರಳಿ ಮಾರಿಯಮ್ಮ ದೇವಿಯ ಬಳಿ
ಪ್ರಾರ್ಥನೆ ಸಲ್ಲಿಸಿದರು.
ಈ ಬಗ್ಗೆ ಮಾಹಿತಿ ನೀಡಿರುವ ದೊರೆಕಳಗುತ್ತು ಬಾಲಕೃಷ್ಣ ಶೆಟ್ಟಿ ಅವರು, ಕಾಪುವಿನಲ್ಲಿ
ದೈವಾರ್ಷಿಕವಾಗಿ ನಡೆಯುವ ಪಿಲಿಕೋಲವು ಧಾರ್ಮಿಕ ಮತ್ತು ಜನಪದ ಆಚರಣೆಗಳ ಜೀವಂತ
ಉದಾಹರಣೆಯಾಗಿದೆ. ಪಿಲಿ ಕೋಲದ ಮೂಲಕವಾಗಿ ತುಳುನಾಡಿನ ಸಂಸ್ಕೃತಿ, ಸಂಪ್ರದಾಯ, ನಂಬಿಕೆ, ನಡವಳಿಕೆ ಸಹಿತವಾಗಿ ಸತ್ಯದ ಅನಾವರಣಗೊಳ್ಳುತ್ತದೆ. ಅದಕ್ಕೆ ಪೂರ್ವದಲ್ಲಿ ಮೂರೂ ಮಾರಿಗುಡಿಗೂ ತೆರಳಿ ಪಿಲಿಕೋಲ ಸುಸೂತ್ರವಾಗಿ ನಡೆಯುವಂತಾಗಲು ಉತ್ತಮ ಪ್ರಸಾದ ನೀಡುವಂತೆ ಪ್ರಾರ್ಥಿಸುವುದಕ್ಕಾಗಿ ಮಾರಿಯಮ್ಮನ ಸನ್ನಿಧಿಗೆ ಆಗಮಿಸಿದ್ದೇವೆ. ಇಲ್ಲಿ ಒಳ್ಳೆಯ ಪ್ರಸಾದ ಸಿಕ್ಕಿದೆ. ಐದು ದಿನಗಳ ಜಾತ್ರೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಡುವುದಾಗಿ ಮಾರಿಯಮ್ಮ
ದೇವಿಯ ಅಭಯ ದೊರಕಿದೆ ಎಂದು ತಿಳಿಸಿದ್ದಾರೆ.
ಇತಿಹಾಸ ಪ್ರಸಿದ್ಧವಾಗಿರುವ ಕಾಪುವಿನ ಪಿಲಿಕೋಲದಲ್ಲಿ ಭೂತ ನರ್ತಕ (ಪಿಲಿ ವೇಷಧಾರಿ) ಯಾರು ಎನ್ನುವುದು ಹಳೇ ಮಾರಿಯಮ್ಮ ದೇವಿಯ ಸನ್ನಿಧಿಯಲ್ಲಿ ನಿರ್ಧಾರವಾಗುತ್ತದೆ. ಪಿಲಿಕೋಲ ನಡೆಯುವ ಮುಂಚಿನ ಮಂಗಳವಾರ ಮೂರೂ ಮಾರಿಗುಡಿಗಳಿಗೆ ತೆರಳಿ ಮಾರಿಯಮ್ಮನ ಅಭಯ ಪಡೆಯುವ ಸಂಪ್ರದಾಯವಿದೆ. ಮೂರೂ ಮಾರಿಗುಡಿಗಳಲ್ಲೂ ಪ್ರಾರ್ಥನೆ ಸಲ್ಲಿಸಿದ ಬಳಿಕ, ಪಿಲಿ ಭೂತದ ನರ್ತಕನಿಗೆ ಮಾರಿಯಮ್ಮ ದೇವಿಯ ದರ್ಶನ ಪಾತ್ರಿಯು ಪಿಲಿ ಕೋಲ ಸುಸೂತ್ರವಾಗಿ ನಡೆಯಲಿ ಎಂಬ ಅಭಯ ಪ್ರಸಾದವನ್ನು ನೀಡಿ, ಸಂಪ್ರದಾಯ ಬದ್ಧವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವಂತೆ ಸೂಚನೆ ನೀಡಲಾಗುತ್ತದೆ.