ಕರಾವಳಿ

ಉಡುಪಿ: ನೆರೆ, ಪ್ರಕೃತಿ ವಿಕೋಪ ಸಂದರ್ಭ ಅಧಿಕಾರಿಗಳು ಉತ್ತಮವಾಗಿ ಸ್ಪಂಧಿಸಿ-ಡಿಸಿ ಕೂರ್ಮಾರಾವ್

ಉಡುಪಿ : ಮಳೆಯಿಂದ ನೆರೆ ಸೇರಿದಂತೆ ಪ್ರಕೃತಿ ವಿಕೋಪಗಳು ಉಂಟಾದಾಗ, ಸ್ಥಳಿಯ ಸಿಬ್ಬಂದಿಗಳು ತಕ್ಷಣದಲ್ಲಿ ಉತ್ತಮವಾಗಿ ಸ್ಪಂದಿಸಿದಾಗ ಹೆಚ್ಚಿನ ಅನಾಹುತಗಳಾಗುವುದನ್ನು ತಪ್ಪಿಸುವ ಜೊತೆಗೆ ಪರಹಾರ ಕಾರ್ಯಗಳನ್ನು ತಕ್ಷಣ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.

ಅವರು ಇಂದು ರಜತಾದ್ರಿಯ ಜಿ.ಪಂ ಸಭಾಂಗಣದಲ್ಲಿ, ಮುಂಗಾರು ಮಳೆ ಮತ್ತು ಕೃಷಿ ಚಟುವಟಿಕೆ ಪ್ರಾರಂಭ ಹಿನ್ನಲೆ ಕೈಗೊಳ್ಳಬೇಕಾದ ಮುಂಜಗ್ರತಾ ಕ್ರಮಗಳ ಕುರಿತ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೆಚ್ಚಿನ ಮಳೆ ಗಾಳಿ ಸೇರಿದಂತೆ ಮತ್ತಿತರ ಪ್ರಕೃತಿ ವಿಕೋಪದ ಮುನ್ಸೂಚನೆಗಳು ಈಗಾಗಲೇ ದೊರೆಯುತ್ತಿದ್ದು, ಅದಕ್ಕೆ ಅನುಗುಣವಾಗಿ ಪೂರ್ವ ತಯಾರಿಗಳನ್ನು ಮಾಡಿಕೊಳ್ಳುವುದರ ಜೊತೆಗೆ, ಕಳೆದ ವರ್ಷಗಳಲ್ಲಿ ಸಂಭವಿಸಿರುವ ನೆರೆ ಪ್ರದೇಶಗಳನ್ನು ಗುರುತಿಸಿ ಅಗತ್ಯವಿರುವ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ, ವಿಕೋಪಗಳನ್ನು ನಿರಾಯಾಸವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎಂದರು.

ಪ್ರತೀ ತಾಲೂಕಿನಲ್ಲಿಯೂ ಪ್ರಕೃತಿ ವಿಕೋಪಗಳನ್ನು ಯಾವ ರೀತಿಯಲ್ಲಿ ತಂಡಗಳು ಎದುರಿಸಬೇಕು ಎಂಬ ಬಗ್ಗೆ ಅಣುಕು ಪ್ರದರ್ಶನ ಅಭ್ಯಾಸಗಳನ್ನು ಕೈಗೊಳ್ಳುವುದರಿಂದ, ವಿಕೋಪ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ಅನುಕೂಲವಾಗುವುದರ ಜೊತೆಗೆ ತಮಗೆ ಅಗತ್ಯವಿರುವ ಸುರಕ್ಷಿತಾ ಪರಿಕರಗಳ ಉಪಯೋಗದ ಬಗ್ಗೆಯೂ ಸಹ ಅನುಭವ ದೊರೆಯಲಿದೆ ಎಂದರು.

ಪ್ರಕೃತಿ ವಿಕೋಪಗಳಿಂದ ಉಂಟಾಗುವ ಪ್ರಾಣ ಹಾನಿಗೆ 24 ಗಂಟೆಯೊಳಗೆ ಪರಿಹಾರವನ್ನು ಒದಗಿಸಬೇಕು, ಮನೆ ಹಾಗೂ ಬೆಳೆ ಹಾನಿಗಳ ಅಂದಾಜು ಮೊತ್ತವನ್ನು 48 ಗಂಟೆಯ ಒಳಗಾಗಿ ವರದಿಯನ್ನು ನೀಡುವುದರ ಜೊತೆಗೆ ಪರಿಹಾರ ಮೊತ್ತವನ್ನು ಸಾಧ್ಯವಾದಷ್ಟು ಶೀಘ್ರದಲ್ಲಿ ವಿತರಿಸುವ ಕಾರ್ಯಗಳು ಆಗಬೇಕು ಎಂದರು.

ತಾಲೂಕು ಮಟ್ಟದಲ್ಲಿ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಪ್ರಕೃತಿ ವಿಕೋಪ ನಿರ್ವಹಣಾ ಸಮಿತಿ ಸಭೆಗಳನ್ನು ಮಾಡುವುದುರ ಜೊತೆಗೆ ಸಕಲ ಪೂರ್ವ ಸಿದ್ದತೆಗಳನ್ನು ಮಾಡಿಕೊಂಡು, ತೊಂದರೆಗೊಳಗಾದವರಿಗೆ ತಕ್ಷಣದಲ್ಲಿ ಸ್ಪಂದಿಸಲು ಮುಂದಾಗಬೇಕು ಎಂದು ಸೂಚನೆ ನೀಡಿದರು.

ವಿಕೋಪಗಳಿಂದ ತೊಂದರೆ ಉಂಟಾದವರು ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಉಚಿತ ಸಹಾಯವಾಣಿ ಸಂಖ್ಯೆ 1077, ಮೆಸ್ಕಾಂ ಗೆ ಸಂಬಂದಪಟ್ಟ ಸಮಸ್ಯೆಗಳಿಗೆ ಸಹಾಯವಾಣಿ ಸಂಖ್ಯೆ 1912 ಅಲ್ಲದೇ ರಕ್ಷಣೆಗೆ ಸಂಬಂಧಿಸಿದಂತೆ ಸಹಾಯವಾಣಿ ಸಂಖ್ಯೆ 112 ಕ್ಕೆ ಸಾರ್ವಜನಿಕರು ಕರೆ ಮಾಡಬಹುದಾಗಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!