ವಿಶೇಷ ಚೇತನ ಮಗುವಿಗೆ ಬೋರ್ಡಿಂಗ್ ನಿರಾಕರಣೆ-ಇಂಡಿಗೋ ಸಂಸ್ಥೆಗೆ 5 ಲಕ್ಷ ರೂ. ದಂಡ.!
ದೆಹಲಿ : ವಿಶೇಷ ಸಾಮರ್ಥ್ಯವುಳ್ಳ ಮಗುವಿಗೆ ಬೋರ್ಡಿಂಗ್ ನಿರಾಕರಿಸಿದ್ದಕ್ಕಾಗಿ ಇಂಡಿಗೋ ವಿಮಾನಯಾನ ಸಂಸ್ಥೆಯು ಇದೀಗ 5 ಲಕ್ಷ ರೂ. ದಂಡ ತೆರಬೇಕಾಗಿ ಬಂದಿದೆ.
ಮೇ 7 ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ವಿಶೇಷ ಸಾಮರ್ಥ್ಯವುಳ್ಳ ಮಗುವಿಗೆ ಸಂಸ್ಥೆಯು ಬೋರ್ಡಿಂಗ್ ನಿರಾಕರಿಸಿತ್ತು. ಬಾಲಕ ವಿಮಾನ ಹತ್ತುವ ಮುನ್ನ ಭಯಗೊಂಡಿದ್ದ ಕಾರಣಕ್ಕಾಗಿ ಆತನಿಗೆ ಪ್ರಯಾಣ ನಿರ್ಬಂಧಿಸಲಾಗಿದೆ ಎಂದು ಇಂಡಿಗೋ ತಿಳಿಸಿತ್ತು. ಆದರೆ ಘಟನೆ ಕುರಿತು ತನಿಖೆ ನಡೆಸಲು ಮೂವರು ಸದಸ್ಯರ ತಂಡವನ್ನು ಡಿಜಿಸಿಎ ರಚಿಸಿತ್ತು. ಈ ತಂಡವು ವರದಿ ನೀಡಿದ್ದು, ಸುಲಭವಾಗಿ ಪರಿಹರಿಸಬಹುದಾಗಿದ್ದ ಸಮಸ್ಯೆಯನ್ನು ವಿಮಾನಯಾನವನ್ನೇ ನಿರ್ಬಂಧಿಸುವ ಮೂಲಕ ಸಂಸ್ಥೆ ತಪ್ಪೆಸಗಿದೆ ಎಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಸಂಸ್ಥೆಗೆ ಐದು ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ವಿಮಾನಯಾನ ನಿಯಂತ್ರಕ ಸಂಸ್ಥೆ ಶನಿವಾರ ತಿಳಿಸಿದೆ.
ಮಗುವಿಗೆ ವಿಮಾನಯಾನಕ್ಕೆ ಅವಕಾಶ ಕಲ್ಪಿಸಿದ್ದರೆ ಸಮಸ್ಯೆಯೇ ಸೃಷ್ಟಿಯಾಗುತ್ತಿರಲಿಲ್ಲ. ಕೆಲವು ಸಂದರ್ಭಗಳಲ್ಲಿ ಸಹಾನುಭೂತಿ ಇರಬೇಕು. ಆಗ ಕೆಲಸವೂ ಸುಗಮವಾಗುತ್ತದೆ. ಆದರೆ ಈ ಸಂದರ್ಭವನ್ನು ನಿಭಾಯಿಸಲು ಏರ್‌ಲೈನ್ ಸಿಬಂದಿ ವಿಫಲರಾಗಿದ್ದಾರೆ. ಹೀಗಾಗಿ ಡಿಜಿಸಿಎಯಲ್ಲಿನ ಸಕ್ಷಮ ಪ್ರಾಧಿಕಾರವು ಏರ್‌ಕ್ರಾಫ್ಟ್ ನಿಯಮಗಳ ನಿಬಂಧನೆಗಳ ಅಡಿಯಲ್ಲಿ ದಂಡ ವಿಧಿಸಿದೆ ಎಂದು ಸಂಸ್ಥೆ ತಿಳಿಸಿದೆ.