ಕೆ.ಎಂ.ಸಿ ಆಸ್ಪತ್ರೆ – ಮೆದುಳಿನ ಗಡ್ಡೆ ಕಾಯಿಲೆಯ ಜಾಗೃತಿ
ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ
ಕಾಲೇಜು ಮತ್ತು ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಆಶ್ರಯದಲ್ಲಿ ಮೆದುಳಿನ ಗೆಡ್ಡೆ ಜಾಗೃತಿ ಕಾರ್ಯಕ್ರಮ ನಡೆಯಿತು. ಪ್ರತಿವರ್ಷ ಜೂನ್ 8 ವಿಶ್ವ ಮೆದುಳಿನ ಗೆಡ್ಡೆ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷದ ಘೋಷ ವಾಕ್ಯ “ಒಟ್ಟಿಗೆ ನಾವು ಬಲಶಾಲಿಗಳು” ಇದು
ಮೆದುಳಿನ ಗೆಡ್ಡೆಗಳ ಕಾರಣಗಳು, ಲಕ್ಷಣಗಳು ಮತ್ತು
ಚಿಕಿತ್ಸೆಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸಲು ಮತ್ತು ಜನರಿಗೆ ಶಿಕ್ಷಣ ನೀಡುವ ವಾರ್ಷಿಕ ಕಾರ್ಯಕ್ರಮವಾಗಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕೆಎಂಸಿ
ಮಣಿಪಾಲದ ಡೀನ್ ಡಾ.ಶರತ್ ಕುಮಾರ್ ರಾವ್ ಅವರು ಮೆದುಳಿನ ಗೆಡ್ಡೆಗೆ ಸಂಬಂಧಿಸಿದ ಜಾಗೃತಿ ಮತ್ತು ಮಾಹಿತಿ ಕಿಟ್ ಅನ್ನು ಬಿಡುಗಡೆ ಮಾಡಿ ಮಾತನಾಡಿ, ಜನರು ಬೈನ್ ಟ್ಯೂಮರ್ ಇದೆ ಎಂದು ಗೊತ್ತಾದ ಕ್ಷಣ ತಮ್ಮ ಜೀವನದ ಅಂತ್ಯ ಎಂದು ಭಾವಿಸಿ ಭಯಭೀತರಾಗುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಷವಾಗಿ ನರಶಸ್ತ್ರಚಿಕಿತ್ಸಾ ವಿಭಾಗದಲ್ಲಿನ ಚಿಕಿತ್ಸಾ ಕ್ರಮದಲ್ಲಿನ ಪ್ರಗತಿಯಿಂದಾಗಿ ಮೆದುಳಿನ ಗೆಡ್ಡೆಗಳಿಗೆ ನೀಡುವ ಚಿಕಿತ್ಸಾ ಕ್ರಮದಲ್ಲಿ ಮಹತ್ತರ ಬದಲಾವಣೆಯಾಗಿದೆ. ಬೈನ್ ಟ್ಯೂಮರ್ ದಿನವನ್ನು ಆಯೋಜಿಸುವ ಮುಖ್ಯ ಉದ್ದೇಶವೆಂದರೆ ಮೆದುಳಿನ ಗೆಡ್ಡೆಗಳು ಮತ್ತು ಅದರ ಚಿಕಿತ್ಸೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು
ಶಿಕ್ಷಣ ನೀಡುವುದು. ಆರಂಭಿಕ ಪತ್ತೆ ರೋಗನಿರ್ಣಯ ಮತ್ತು ಸಮಯೋಚಿತ ಚಿಕಿತ್ಸೆಯ ಮೂಲಕ ಮೆದುಳಿನ ಗೆಡ್ಡೆಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅವರು, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಕಳೆದ 6 ದಶಕಗಳಿಂದ ಕರ್ನಾಟಕದ 12ರಿಂದ 15
ಜಿಲ್ಲೆಗಳ ಮತ್ತು ನೆರೆ ರಾಜ್ಯಗಳ ರೋಗಿಗಳಿಗೆ ಚಿಕಿತ್ಸೆ
ನೀಡುತ್ತಿದೆ. ನಮ್ಮಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ, ವಿವಿಧ ರೋಗಗಳು ಮತ್ತು ಮಾರಣಾಂತಿಕ ಕಾಯಿಲೆಗಳ ಬಗ್ಗೆ ಜನರಿಗೆ ಅರಿವು ಮತ್ತು ಜಾಗೃತಿ ಶಿಕ್ಷಣವನ್ನು ನೀಡುತ್ತಿದ್ದೇವೆ ಎಂದರು.
ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಗಿರೀಶ್ ಮೆನನ್ ಮೆದುಳಿನ ಗೆಡ್ಡೆ ಕಾಯಿಲೆ ಕುರಿತು ಅವಲೋಕನ ನೀಡುತ್ತಾ, ವಿಶ್ವದ ಶ್ರೇಣೀಕೃತ ಕಾಯಿಲೆಗಳಲ್ಲಿ ಬೈನ್ ಟ್ಯೂಮರ್ ಪ್ರಮುಖವಾಗಿದೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕಳೆದ 10 ವರ್ಷಗಳಲ್ಲಿ ನಾವು ಸುಮಾರು 1700 ಬ್ರೈನ್ ಟ್ಯೂಮರ್ ಪ್ರಕರಣಗಳ ಶಸ್ತ್ರಚಿಕಿತ್ಸೆ
ನಡೆಸಿದ್ದೇವೆ, ಇದು ಆತಂಕಕಾರಿ ಸಂಖ್ಯೆಯಾಗಿದೆ ಎಂದರು. ನರಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ. ರಾಘವೇಂದ್ರ ನಾಯಕ್ ವಂದಿಸಿದರು.