ಕರಾವಳಿ

ಬಾಲ ಕಾರ್ಮಿಕ ಪದ್ದತಿ ಸಂಪೂರ್ಣವಾಗಿ ನಿರ್ಮೂಲವಾಗಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ: ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ
ಮಕ್ಕಳನ್ನು ಪತ್ತೆ ಹಚ್ಚಿ, ಅವರನ್ನು ದುಡಿಮೆಯಿಂದ
ಮುಕ್ತಗೊಳಿಸಿ ಸೂಕ್ತ ಪುರ್ನವಸತಿ ಕಲ್ಪಿಸಿ
ವಿದ್ಯಾಭ್ಯಾಸಕ್ಕೆ ಸಕಲ ವ್ಯವಸ್ಥೆಗಳನ್ನು ಒದಗಿಸುವ
ಮೂಲಕ ಬಾಲ ಕಾರ್ಮಿಕ ಪದ್ಧತಿಯನ್ನು
ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.

ಅವರು ಇಂದು ರಜತಾದ್ರಿಯ ಅಟಲ್ ಬಿಹಾರಿ
ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ
ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು,

ಜಿಲ್ಲೆಯಲ್ಲಿ ಇತ್ತೀಚಿನ ಎಸ್.ಎಸ್.ಎಲ್.ಸಿ
ಫಲಿತಾಂಶವನ್ನು ಪರಿಶೀಲಿಸಿದಾಗ ಹಲವು ಮಕ್ಕಳು
ತಮ್ಮ ಕುಟುಂಬ ನಿರ್ವಹಣೆಗೆ ಕೆಲಸ ಮಾಡುವುದರ
ಜೊತೆಗೆ ವಿದ್ಯಾಭ್ಯಾಸದಲ್ಲಿ ಅಸಾಧಾರಣ ಸಾಧನೆ
ತೋರಿರುವುದನ್ನು ಕಾಣಬಹುದಾಗಿದೆ. ಪೋಷಕರು
ತಮ್ಮಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿಸದೇ ಅವರ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು. ಅವರ ಬಾಲ್ಯದ ಹಕ್ಕುಗಳನ್ನು ರಕ್ಷಿಸಿ, ಅವರ ಕಣ್ಣುಗಳಲ್ಲಿ ಬಾಲ್ಯದ ಮುಗ್ಧತೆ ಮೂಡಿಸಬೇಕು. ಸಮಾಜದ ಬಗ್ಗೆ ಇರುವ ಭಯದ ವಾತಾವರಣವನ್ನು ಹೋಗಲಾಡಿಸಿ ಅವರಲ್ಲಿ ನಂಬಿಕೆ ಮೂಡಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು, ಜಿಲ್ಲೆಯ ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು ಹಾಗೂ ಸರಕಾರಿ ಇಲಾಖೆಗಳು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಹಕರಿಸಬೇಕು ಎಂದರು.

ಜಿಲ್ಲೆಯಲ್ಲಿ ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲು
ಕಾರ್ಮಿಕ ಇಲಾಖೆಯ ವತಿಯಿಂದ ಸಮೀಕ್ಷೆಯನ್ನು
ನಡೆಸಲಾಗುತ್ತಿದ್ದು, ಬಾಲ ಕಾರ್ಮಿಕರು ಪತ್ತೆಯಾದಲ್ಲಿ
ಅವರಿಗೆ ಸೂಕ್ತ ಪುರ್ನವಸತಿ ಮತ್ತು ವಿದ್ಯಾಭ್ಯಾಸ
ನೀಡಲಾಗುವುದು. ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ಬಾಲ ಕಾರ್ಮಿಕರು ಕಂಡುಬಂದಲ್ಲಿ, ಸಾರ್ವಜನಿಕರು ಉಚಿತ ಸಹಾಯವಾಣಿ ಸಂಖ್ಯೆ 1098ಗೆ ತಕ್ಷಣ ಮಾಹಿತಿ ನೀಡುವಂತೆ ತಿಳಿಸಿದರು.

ಬಾಲ ಕಾರ್ಮಿಕ ಪದ್ಧತಿ ವಿರೋಧ ಕುರಿತಂತೆ ಪ್ರತಿಜ್ಞಾ
ವಿಧಿ ಭೋಧಿಸಿ ಮಾತನಾಡಿದ ಹಿರಿಯ ಸಿವಿಲ್
ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವಾ
ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಇದಕ್ಕಾಗಿ 20,000 ರಿಂದ 50,000 ಗಳ ವರೆಗೆ ದಂಡ,6 ತಿಂಗಳಿನಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಈ ಎರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು
ರತ್ನಾಕರ ಹೆಗ್ಡೆ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ
ಜಿಲ್ಲೆಯಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಇಲ್ಲವಾಗಿದ್ದು
ಜಿಲ್ಲೆಗೆ ಉದ್ಯೋಗ ನಿಮಿತ್ತ ಆಗಮಿಸುವ ವಲಸೆ
ಕಾರ್ಮಿಕರ ಮಕ್ಕಳು ಈ ಪದ್ಧತಿಗೆ ಬಲಿಯಾಗುತ್ತಿದ್ದು ಈ ಮಕ್ಕಳನ್ನು ಗುರುತಿಸಿ ಸೂಕ್ತ ಪುರ್ನವಸತಿ ಮತ್ತು
ಸರಕಾರದ ವಿವಿಧ ಯೋಜನೆಗಳ ಪ್ರಯೋಜನವನ್ನು
ಒದಗಿಸಿ ಅವರನ್ನು ಸುಶಿಕ್ಷಿತರನ್ನಾಗಿ ಮಾಡಬೇಕು
ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ
ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಮಾತನಾಡಿ,
ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ಮಕ್ಕಳು, ಕೊಳಚೆ
ಪ್ರದೇಶದಲ್ಲಿರುವ ಮಕ್ಕಳು ಹಾಗೂ ಭಿಕ್ಷಾಟನೆಯಲ್ಲಿ
ತೊಡಗಿರುವ ಮಕ್ಕಳು ಬಾಲ ಕಾರ್ಮಿಕರಾಗಿ
ದುಡಿಯುತ್ತಿದ್ದು ಅವರನ್ನು ಗುರುತಿಸಿ ವಿದ್ಯಾಭ್ಯಾಸ
ಮತ್ತು ಪುರ್ನವಸತಿ ಒದಗಿಸುವುದು ಪ್ರಜ್ಞಾವಂತ
ನಾಗರಿಕರ ಕರ್ತವ್ಯವಾಗಿದ್ದು, ಇಂತಹ ಮಕ್ಕಳು ಕಂಡು ಬಂದಲ್ಲಿ ಕೂಡಲೇ ಮಾಹಿತಿ ನೀಡುವುದರ ಮೂಲಕ ಈ ಪದ್ಧತಿಯ ನಿರ್ಮೂಲನೆಗೆ ಸಹಕರಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ
ನಿರ್ದೇಶಕಿ ಪೀಣಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ ನಾಯಕ್ ಉಪಸ್ಥಿತರಿದ್ದರು.

ಈ ಹಿಂದೆ ಬಾಲ ಕಾರ್ಮಿಕರಾಗಿ ಪತ್ತೆಯಾಗಿ ಪ್ರಸ್ತುತ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಶೈಕ್ಷಣಿಕ ಪರೀಕ ಗಳನ್ನು  ಹಸ್ತಾಂತರಿಸಲಾಯಿತು. ಬಾಲ ಕಾರ್ಮಿಕ ಕಿಶೋರ ಕಾರ್ಮಿಕ  ಪದ್ಧತಿ ನಿರ್ಮೂಲನೆ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕಾರ್ಯಕ್ರಮ   ಮತ್ತು ಎಂ ಎಸ್ ಡಬ್ಲ್ಯೂ ಕಾಲೇಜ್ ವಿದ್ಯಾರ್ಥಿಗಳಿಂದ ಮೂಕಾಭಿನಯ ಪ್ರದರ್ಶನ ನಡೆಯಿತು‌‌.

ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಸ್ವಾಗತಿಸಿದರು ಕಾರ್ಮಿಕ ನಿರೀಕ್ಷಕ ರಾಜಶೇಖರ್ ರೆಡ್ಡಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!