ಕರಾವಳಿ

ಎಲ್ಲಾ ಕಚೇರಿಗಳಲ್ಲಿ ಪ್ರತಿಶತಃ ನೂರರಷ್ಟು ಕನ್ನಡ ಅನುಷ್ಠಾನ ಆಗಬೇಕು: ಡಾ. ಟಿ.ಎಸ್. ನಾಗಾಭರಣ

ಉಡುಪಿ: ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಪ್ರತಿಶತಃ ನೂರರಷ್ಟು ಕನ್ನಡದ ಬಳಕೆ ಆಗುವ ಕುರಿತಂತೆ ಎಲ್ಲಾ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ನೀಡಲಾಗುವುದು
ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಡಾ.ಟಿ.ಎಸ್.ನಾಗಾಭರಣ ಹೇಳಿದರು.

ಅವರು  ರಜತಾದ್ರಿಯ ಜಿಲ್ಲಾ ಪಂಚಾಯತ್
ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಸರ್ಕಾರಿ ಕಚೇರಿಯಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸುವುವಾಗ
ಇಲಾಖೆಗಳ ಮಧ್ಯೆ ಆಗುವ ಪ್ರತಿಯೊಂದು ಪತ್ರ
ವ್ಯವಹಾರಗಳು ಕನ್ನಡದಲ್ಲಿಯೇ ಇರಬೇಕು. ಒಂದೊಮ್ಮೆ ಅಂಗ್ಲಭಾಷೆಯಲ್ಲಿ ಇದ್ದಲ್ಲಿ ಸಂಬಂಧಪಟ್ಟ ಇಲಾಖೆಗೆ ಎಚ್ಚರಿಸುವ ಕೆಲಸವನ್ನು ಮಗದೊಂದು ಇಲಾಖೆ ಮಾಡುವುದರೊಂದಿಗೆ ಸಮನ್ವಯ ಸಾಧಿಸಬೇಕು ಎಂದರು.

ಸಾರ್ವಜನಿಕರು ತಮ್ಮ ದೈನಂದಿನ ಆರ್ಥಿಕ
ಚಟುವಟಿಕೆಗಳನ್ನು ನಡೆಸಿ, ಅಗತ್ಯ ಸೇವೆಗಳನ್ನು ಪಡೆಯಲು ಬ್ಯಾಂಕ್‌ಗಳಿಗೆ ಭೇಟಿ ನೀಡಿದಾಗ, ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕು. ಒಂದೊಮ್ಮೆ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ಕನ್ನಡದ ಭಾಷಾ ಸಮಸ್ಯೆ ಇದ್ದಲ್ಲಿ ಅವರಿಗೆ ಆಗಿಂದಾಗ್ಗೆ ಕನ್ನಡ ಕಲಿಕೆ ತರಬೇತಿಯನ್ನು ಕೊಡುವ ಕಾರ್ಯ ಅಗ್ರಗಣ್ಯ ಬ್ಯಾಂಕ್‌ಗಳಿಂದ ಆಗಬೇಕು ಎಂದು ಸೂಚನೆ ನೀಡಿದರು.

ಪ್ರಸ್ತುತ ಜಿಲ್ಲೆಯ ಬ್ಯಾಂಕ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡ ಹಾಗೂ ಕನ್ನಡೇತರ ಸಿಬ್ಬಂದಿಗಳ ಬಗ್ಗೆ ಹಾಗೂ ಅವರುಗಳಿಗೆ ಕನ್ನಡ ಓದಲು, ಬರೆಯಲು ಹಾಗೂ ಮಾತನಾಡುವ ಬಗ್ಗೆ ವಿವರಗಳನ್ನು ಪ್ರಾಧಿಕಾರಕ್ಕೆ ನೀಡಬೇಕು
ಎಂದ ಅವರು, ನೇಮಕಾತಿ ಸಂದರ್ಭದಲ್ಲಿ ಹೆಚ್ಚಿನ
ಕನ್ನಡಿಗರೇ ಬ್ಯಾಂಕ್ ಉದ್ಯೋಗದಲ್ಲಿ ಸೇರುವಂತೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಎಟಿಎಂ ಯಂತ್ರದ ಡಿಸ್ ಪ್ಲೇ ಗಳಲ್ಲಿ ಕನ್ನಡದ ಬಳಕೆ ಕಡ್ಡಾಯವಾಗಿ ಇರುವಂತೆ ಎಚ್ಚರವಹಿಸಬೇಕು ಎಂದರು.

ಜಿಲ್ಲೆಯ ಎಲ್ಲಾ ಕೈಗಾರಿಕೆಗಳಲ್ಲಿ ಅಪಾಯದ ಎಚ್ಚರಿಕ
ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ ಮಾಡಿದ್ದಲ್ಲಿ ಸ್ಥಳಿಯ ಜನರಿಗೆ ಅದರ ಎಚ್ಚರಿಕೆ ಗೊತ್ತಾಗಿ ಅಪಘಾತ ಸಂಭವಿಸುವುದು ತಪ್ಪುತ್ತದೆ. ಕೈಗಾರಿಕೆಗಳಲ್ಲಿ ಕೌಶಲ್ಯ ಹಾಗೂ ಅಕೌಶಲ್ಯ ಕೆಲಸಗಳಿಗೆ ಸ್ಥಳೀಯರಿಗೆ ಉದ್ಯೋಗ ನೀಡಬೇಕು
ಎಂದ ಅವರು ಪ್ರತಿಯೊಂದು ಉದ್ಯೋಗ ಘಟಕಗಳಲ್ಲಿ ಕನ್ನಡ ಸೆಲ್‌ಗಳನ್ನು ತೆರೆಯಬೇಕು ಅದರಲ್ಲಿ ಸಿಬ್ಬಂದಿ ವರ್ಗದವರು ಹೆಚ್ಚು ಇರುವುದು ಅಗತ್ಯ ಎಂದರು. ಗೊಬ್ಬರ, ಕೀಟನಾಶಕ ಮತ್ತು ಔಷಧಿಗಳ ಮೇಲೆ ಅವುಗಳ ಬಳಕೆ ಹಾಗೂ ಅದರಲ್ಲಿನ ಅಂಶಗಳ ಕುರಿತು ಕನ್ನಡದಲ್ಲಿ
ಸ್ಪಷ್ಟವಾಗಿ ನಮೂದಿಸಬೇಕು. ಒಂದೊಮ್ಮೆ ನಮೂದಿಸದೇ ಇರುವುದು ಕಂಡು ಬಂದಲ್ಲಿ ಅಂತಹ ಕಂಪೆನಿಗಳಿಗೆ ಪತ್ರ ಬರೆದು ನಮೂದಿಸುವಂತೆ ಎಚ್ಚರಿಸಬೇಕು. ವೈದ್ಯರುಗಳು ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಪರೀಕ್ಷಾ ವರದಿ ಅಥವಾ ರೋಗದ ಬಗ್ಗೆ ರೋಗಿಗಳಿಗೆ ಅಥವಾ ಅವರ
ಸಂಬಂಧಿಕರಿಗೆ ಕನ್ನಡದಲ್ಲಿಯೇ ಸ್ಪಷ್ಟವಾಗಿ ಅರ್ಥವಾಗುವಂತೆ ತಿಳಿಸಬೇಕು, ಆರೋಗ್ಯ ಅಧಿಕಾರಿಗಳು, ಪೊಲೀಸ್ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಿಗೆ ವರದಿಗಳನ್ನು ಕಳುಹಿಸುವಾಗ ಅವು ಕನ್ನಡದಲ್ಲಿಯೇ ಇರಬೇಕು ಎಂದರು.

ಸಾಮಾನ್ಯವಾಗಿ ಎಲ್ಲಾ ಆಂಗ್ಲಪದಗಳಿಗೆ ಪರ್ಯಾಯವಾಗಿ ಕನ್ನಡ ಬಳಕೆಗೆ ಅನುಕೂಲವಾಗುವಂತೆ ವಿವಿಧ
ವಿಷಯಗಳಿಗೆ ಸಂಬಂಧಧಪಟ್ಟಂತೆ 86 ವಿವಿಧ
ಶಬ್ದಕೋಶಗಳು ಲಭ್ಯವಿದ್ದು, ಇವುಗಳ ಸದ್ಬಳಕೆ
ಮಾಡಿಕೊಳ್ಳಬಹುದು ಎಂದ ಅವರು, ಆಡಳಿತದಲ್ಲಿ
ಮಿಂಚಂಚೆಗಳನ್ನು ಕಳುಹಿಸುವಾಗ ವಿಳಾಸಗಳನ್ನು ಕನ್ನಡದ ಪದ ಬಳಕೆ ಪ್ರಾರಂಭವಾಗಿದ್ದು, ಇದರ ಬಳಕೆಯಾಗಬೇಕು ಎಂದರು.

ಕನ್ನಡ ಕಲಿಕಾ ಅಧಿನಿಯಮ 2017 ರ ಅನ್ವಯ ಎಲ್ಲಾ ಶಾಲೆಗಳು, ಮದರಸಗಳೂ ಸೇರಿದಂತೆ, ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಒಂದು ಭಾಷೆಯಾಗಿ ಇರಬೇಕು. ಸಿ.ಬಿ.ಎಸ್.ಸಿ. ಹಾಗೂ ಕೇಂದ್ರೀಯ ವಿದ್ಯಾಲಯದಲ್ಲಿ 1 ರಿಂದ 9 ರ ವರೆಗೆ ಸ್ಥಳೀಯ
ಭಾಷೆಯನ್ನು ಒಂದು ವಿಷಯವಾಗಿ ಕಲಿಸಿದರೂ 10 ನೇ ತರಗತಿಯಲ್ಲಿ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಈ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಶಿಕ್ಷಣಾಧಿಕಾರಿಗಳಿಗೆ
ಸೂಚನೆ ನೀಡಿದರು.

ಜಾಹೀರಾತು ಫಲಕಗಳಲ್ಲಿ ಕನ್ನಡದ ಬಳಕೆ ಅಲ್ಪ ಪ್ರಮಾಣದಲ್ಲಿ ಇರುವಂತಹ ಪ್ರಕಟಣೆಗಳಿಗೆ ಕಡಿವಾಣ ಹಾಕಬೇಕು. ಅಂಗಡಿ ನಾಮಫಲಕಗಳು ಕನ್ನಡದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು ಎಂದರು. ಇಲಾಖೆಗಳಲ್ಲಿ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಮತ್ತಿತರ ಟೆಂಡರ್‌ ಕರೆಯುವಾಗ ಅರ್ಜಿ ನಮೂನೆಗಳು ಪ್ರತಿಯೊಂದು ಕನ್ನಡದಲ್ಲಿಯೇ ಇರಬೇಕು.

ಉದ್ಯಾನವನಗಳು, ಸರಕಾರಿ ಕಟ್ಟಡಗಳಲ್ಲಿ ಕನ್ನಡದ
ಕವಿಗಳು ಸಮಾಜಕ್ಕೆ ನೀಡಿರುವ ಹಿತ ಸಂದೇಶಗಳನ್ನು ಪ್ರಚಾರಪಡಿಸಬೇಕು. ಕನ್ನಡ ಎಲ್ಲೆಡೆ ಕಾಣಬೇಕು, ಕನ್ನಡ ಎಲ್ಲೆಡೆ ಕೇಳಬೇಕು ಎಂದ ಅವರು ಉಡುಪಿ ಜಿಲ್ಲೆಯು ಕನ್ನಡ ಅನುಷ್ಠಾನಗೊಳಿಸುವಲ್ಲಿ ಮಾದರಿ ಜಿಲ್ಲೆಯಾಗಬೇಕು
ಎಂದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಜಿಲ್ಲೆಯನ್ನು ಎಲ್ಲರ ಸಹಭಾಗಿತ್ವದೊಂದಿಗೆಕನ್ನಡಮಯವಾಗಿಸಬಹುದಾಗಿದ್ದು, ಇದಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದ ಅವರು ಇಂದಿನ ಸಭೆಯಲ್ಲಿ ನೀಡಿರುವ ಸಲಹೆ ಹಾಗೂ ಮಾರ್ಗದರ್ಶನಗಳು ಕನ್ನಡ ಅನುಷ್ಠಾನಕ್ಕೆ ಹೆಚ್ಚಿನ ಸಹಕಾರಿಯಾಗಲಿವೆ ಎಂದರು.

ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ
ಡಾ.ರಮೇಶ್ ಗುಬ್ಬಿಗೂಡು, ಕಾರ್ಯದರ್ಶಿಗಳಾದ
ಡಾ.ಸಂತೋಷ್ ಹಾನಗಲ್, ಮಹೇಶ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಅಪರ ಜಿಲ್ಲಾಧಿಕಾರಿ ವೀಣಾ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜಿಲ್ಲಾ ಮಟ್ಟದ ವಿವಿಧ ಅನುಷ್ಠಾನಾಧಿಕಾರಿಗಳು, ಜಿಲ್ಲೆಯ ವಿವಿಧ
ಸಾಹಿತಿಗಳು, ವಿವಿಧ ಕನ್ನಡಪರ ಸಂಘಟನೆಗಳ
ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!