ಕಾರ್ಕಳ :16 ವರ್ಷಗಳ ಹಿಂದಿನ ಕೊಲೆ ಬೆದರಿಕೆ ಪ್ರಕರಣದ ಆರೋಪಿಯ ಬಂಧನ.
ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಕೇಬಲ್ ವ್ಯವಹಾರಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವರಿಗೆ ಜೀವ ಬೆದರಿಕೆ ಒಡ್ಡಿದ ಪ್ರಕರಣದ ಆರೋಪಿ 16 ವರ್ಷದಿಂದ ತಲೆಮರೆಸಿಕೊಂಡಿದ್ದ ಬೆಳ್ತಂಗಡಿ ತಾಲೂಕು ಕಾಶಿಬೆಟ್ಟು ನಿವಾಸಿ ವೇಲು ಎಂಬಾತನನ್ನು ಕಾರ್ಕಳ ಪೊಲೀಸರು ಬೆಳ್ತಂಗಡಿ ಪೊಲೀಸರ ಸಹಕಾರದಿಂದ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಈತ ಕಾರ್ಕಳದಲ್ಲಿ ಕೇಬಲ್ ವ್ಯಾಪಾರ ನಡೆಸುತ್ತಿದ್ದ ಕುಕ್ಕುಂದೂರು ಹುಡ್ಕೊ ನಿವಾಸಿ ಪ್ರಶಾಂತ್ ನಾಯಕ್ ಅವರಿಗೆ 2006ರಲ್ಲಿ ಚೂರಿ ತೋರಿಸಿ ಬೆದರಿಕೆ ಒಡ್ಡಿದ ಪ್ರಕರಣದ ಆರೋಪಿಯಾಗಿದ್ದ. ಬಳಿಕ ತಲೆಮರೆಸಿಕೊಂಡಿದ್ದ. ಕಾರ್ಕಳದ ನ್ಯಾಯಾಲಯವು ಆರೋಪಿಯ ದಸ್ತಗಿರಿಗಾಗಿ ಬಂಧನ ವಾರಂಟ್ ಹೊರಡಿಸಿತ್ತು ಎನ್ನಲಾಗಿದೆ.
ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ವೇಲು ಜೂ. 13ರಂದು ಬೆಳ್ತಂಗಡಿಗೆ ಬಂದಿರುವ ಮಾಹಿತಿ ಪಡೆದ ಕಾರ್ಕಳ ಪೊಲೀಸರು ವಶಕ್ಕೆ ಪಡೆದರು. ಆರೋಪಿಯನ್ನು ಜೂ. 14ರಂದು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಇದೇ ಪ್ರಕರಣದ ಇನ್ನಿಬ್ಬರು ಆರೋಪಿಗಳನ್ನು ಈ ಹಿಂದೆಯೇ ದಸ್ತಗಿರಿ ಮಾಡಲಾಗಿದೆ. ಡಿವೈಎಸ್ಪಿ ವಿಜಯಪ್ರಸಾದ್, ಸರ್ಕಲ್ ಇನ್‌ಸ್ಪೆಕ್ಟರ್ ಸಂಪತ್‌ಕುಮಾರ್ ಮಾರ್ಗದರ್ಶನದಲ್ಲಿ ನಗರ ಠಾಣೆ ಎಸ್‌ಐ ಪ್ರಸನ್ನಕುಮಾರ್, ಅಪರಾಧ ವಿಭಾಗದ ಎಸ್‌ಐ ದಾಮೋದರ್, ಎಎಸ್‌ಐ ರಾಜೇಶ್ ಪಿ. ಎಚ್‌ಸಿ ಪ್ರಸನ್ನ ಹೆಗ್ಡೆ, ಸಿದ್ದರಾಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಯಲಾಗಿದೆ.