ಕೆ.ಎಂ.ಸಿ ಮಣಿಪಾಲ – ವಿಶ್ವ ರಕ್ತದಾನಿಗಳ ದಿನಾಚರಣೆ
ಮಣಿಪಾಲ: ವಿಶ್ವ ರಕ್ತದಾನಿಗಳ ದಿನವನ್ನು ಜೂನ್ 14 ರಂದು “ಸುರಕ್ಷಿತ ರಕ್ತ ಮತ್ತು ವರ್ಗಾವಣೆಗಾಗಿ ರಕ್ತದ ಉತ್ಪನ್ನಗಳ” ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ರಕ್ತ ಸಂಬಂಧಿತ ಉತ್ಪನ್ನಗಳು ಜಗತ್ತಿನಾದ್ಯಂತ ಸಾರ್ವಜನಿಕ ಆರೋಗ್ಯಕ್ಕೆ ನಿರ್ಣಾಯಕವಾಗಿವೆ. ಈ ದಿನವು ಸ್ವಯಂಸೇವಕರು ಮತ್ತು ರಕ್ತದಾನಿಗಳಿಗೆ ಅವರ ಕೊಡುಗೆಗಳಿಗಾಗಿ ಧನ್ಯವಾದ ಹೇಳುವ ಅವಕಾಶವನ್ನು
ಸೂಚಿಸುತ್ತದೆ. 2022 ರ, ಘೋಷವಾಕ್ಯ “ರಕ್ತದಾನವು ಒಗ್ಗಟ್ಟಿನ ಕಾರ್ಯವಾಗಿದೆ. ಒಟ್ಟಾಗಿ ಕೈ ಜೋಡಿಸಿ ಮತ್ತು ಜೀವಗಳನ್ನು ಉಳಿಸಿ”. ವಿಶ್ವ ಅರೋಗ್ಯ ಸಂಸ್ಥೆಯ ಪ್ರಕಾರ, ಪ್ರಪಂಚದಾದ್ಯಂತ ಪ್ರತಿ ವರ್ಷ ಜೀವಗಳನ್ನು ಉಳಿಸುವಲ್ಲಿ
ಸ್ವಯಂಪ್ರೇರಿತ ರಕ್ತದಾನವು ವಹಿಸುವ ಪಾತ್ರಗಳ ಮೇಲೆ ಈ ಥೀಮ್ ಬೆಳಕು ಚೆಲ್ಲುತ್ತದೆ.
ಈ ಸಂದರ್ಭದಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರವು ಸ್ವಯಂಪ್ರೇರಿತ ರಕ್ತದಾನಿಗಳ ಪ್ರೇರಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಮಾಂಡರ್ (ಡಾ) ಅನಿಲ್ ರಾಣಾ, ನಿರ್ದೇಶಕರು, ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು ಮತ್ತು ಡಾ. ಶರತ್ ಕೆ ರಾವ್, ಡೀನ್, ಕೆಎಂಸಿ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಸ್ತೂರ್ಬಾ ಆಸ್ಪತ್ರೆಯ ಸಿಒಒ ಸಿ ಜಿ ಮುತ್ತಣ್ಣ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮತ್ತು ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರದ ಮುಖ್ಯಸ್ಥೆ ಡಾ. ಶಮ್ಮಿ ಶಾಸ್ತ್ರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಮಾಂಡರ್ (ಡಾ) ಅನಿಲ್ ರಾಣಾ ಅವರು ರಕ್ತದ ದಾನಿ ಮತ್ತು ಉದಾತ್ತ ಉದ್ದೇಶಕ್ಕಾಗಿ ಪ್ರೇರೇಪಿಸುವವರನ್ನು ಅಭಿನಂದಿಸಿದರು ಮತ್ತು ನೀವು ಮಾಡುತ್ತಿರುವುದು ಶ್ರೇಷ್ಠ ಕೆಲಸ, ದಯವಿಟ್ಟು ಇದನ್ನು ಮುಂದುವರಿಸಿ, ಈ ಮೂಲಕ ನೀವು ಅನೇಕ ಜೀವಗಳನ್ನು
ಉಳಿಸಬಹುದು’ ಎಂದರು. ಅಧ್ಯಕ್ಷೀಯ ಭಾಷಣದಲ್ಲಿ ಡಾ.ಶರತ್ ಕೆ ರಾವ್, ರಕ್ತಕ್ಕೆ ಬೇರೆ ಪರ್ಯಾಯವಿಲ್ಲ, ಅದನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ರಕ್ತದಾನ
ಮಾಡುವುದೊಂದೇ ರಕ್ತಕ್ಕೆ ಪರ್ಯಾಯವಾಗಿದೆ. ಒಬ್ಬ ವ್ಯಕ್ತಿಯು ರಕ್ತದಾನದ ಮೂಲಕ ಮೂರು ಜೀವಗಳನ್ನು ಉಳಿಸಬಹುದು ಎಂದು ಹೇಳಿದರು.
ಡಾ. ಶಮ್ಮಿ ಶಾಸ್ತ್ರಿ ಸ್ವಾಗತಿಸಿ ವಿಶ್ವ ರಕ್ತದಾನಿಗಳ ದಿನದ ಕುರಿತು ಅವಲೋಕನ ನೀಡಿದರು. ಡಾ. ಅವಿನಾಶ್ ಶೆಟ್ಟಿ ವಂದಿಸಿದರು. ಕೆ. ಸತೀಶ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಿತ ಅತ್ಯುತ್ತಮ ಸಿಬ್ಬಂದಿ ಪ್ರಶಸ್ತಿ ಮತ್ತು 3D ಆರ್ಟ್ ಆಬೈಕ್ ಮೇಕಿಂಗ್ ಸ್ಪರ್ಧೆಯಲ್ಲಿ ವಿಜೇತರಿಗೆ
ಬಹುಮಾನಗಳನ್ನು ನೀಡಲಾಯಿತು.