ಜೂ.18 ರಾಜ್ಯ ಮಟ್ಟದ ‘ಜನಪ್ರತಿನಿಧಿ ಸಮಾವೇಶ’; ಜೂ.21 ಜಿಲ್ಲಾ ಮಟ್ಟದ ‘ವಿಶ್ವ ಯೋಗ ದಿನಾಚರಣೆ’ ಯಶಸ್ವಿಗೊಳಿಸಲು ಕುಯಿಲಾಡಿ ಸುರೇಶ್ ನಾಯಕ್ ಕರೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಜನಪರ ಆಡಳಿತದ ಯಶಸ್ವಿ ಎಂಟು ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಾದ್ಯಂತ ಮೇ 30ರಿಂದ ಜೂನ್ 14ರ ವರೆಗೆ ಹಮ್ಮಿಕೊಂಡಿರುವ ‘ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ’ ಅಭಿಯಾನವು ಮಂಡಲವಾರು ಗರಿಷ್ಠ ಕಾರ್ಯಕ್ರಮಗಳೊಂದಿಗೆ ಯಶಸ್ವಿಯಾಗಿ ಕಾರ್ಯಗತಗೊಂಡಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರು ಮಾರ್ಗದರ್ಶನ ಮಾಡಲಿರುವ ರಾಜ್ಯ ಮಟ್ಟದ ‘ಜನಪ್ರತಿನಿಧಿ ಸಮಾವೇಶ’ವು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಿತ ರಾಜ್ಯದ ನಾಯಕರುಗಳು ಉಪಸ್ಥಿತಿಯಲ್ಲಿ ಜೂನ್ 18ರಂದು ಚಿತ್ರದುರ್ಗದ ಮುರುಘರಾಜೇಂದ್ರ ಮಠದ ‘ಅನುಭವ ಮಂಟಪ’ದಲ್ಲಿ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು.
ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ‘ಜನಪ್ರತಿನಿಧಿ ಸಮಾವೇಶ’ ಮತ್ತು ‘ವಿಶ್ವ ಯೋಗ ದಿನಾಚರಣೆ’ಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೂನ್ 18ರ ರಾಜ್ಯ ಮಟ್ಟದ ‘ಜನಪ್ರತಿನಿಧಿ ಸಮಾವೇಶ’ಕ್ಕೆ ಉಡುಪಿ ಜಿಲ್ಲೆಯಿಂದ ಅಪೇಕ್ಷಿತರಾದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್ ಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ನಗರಸಭೆ ಮತ್ತು ಪುರಸಭೆಗಳ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಸಮಾವೇಶದ ಯಶಸ್ಸಿಗೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
‘ಜನಪ್ರತಿನಿಧಿ ಸಮಾವೇಶ’ಕ್ಕೆ ಅಪೇಕ್ಷಿತ ಜನಪ್ರತಿನಿಧಿಗಳ ಭಾಗವಹಿಸುವಿಕೆಯ ಪೂರ್ವ ಸಿದ್ಧತೆಗಳ ಬಗ್ಗೆ ಜಿಲ್ಲಾ ಸಂಚಾಲಕರಾದ ಪ್ರಭಾಕರ ಪೂಜಾರಿ, ಭಾಲಕೃಷ್ಣ ಶೆಟ್ಟಿ, ರಾಜೀವ್ ಕುಲಾಲ್ ಹಾಗೂ ಮಂಡಲಗಳ ಅಧ್ಯಕ್ಷರು ಮಾಹಿತಿ ನೀಡಿದರು.
ಜೂ.21ರಂದು ‘ವಿಶ್ವ ಯೋಗ ದಿನಾಚರಣೆ‘: ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಜೂ.21ರಂದು ಉಡುಪಿಯಲ್ಲಿ ನಡೆಯಲಿರುವ ‘ವಿಶ್ವ ಯೋಗ ದಿನಾಚರಣೆ’ಯಲ್ಲಿ ಪಕ್ಷದ ಪ್ರಮುಖರು ಹಾಗೂ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲಗಳ ಸಹಿತ ಎಲ್ಲಾ ಸ್ತರದ ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಕುಯಿಲಾಡಿ ತಿಳಿಸಿದರು.
‘ವಿಶ್ವ ಯೋಗ ದಿನಾಚರಣೆ’ ಆಯೋಜನೆ ಬಗ್ಗೆ ಜಿಲ್ಲಾ ಸಂಚಾಲಕ ಮಹೇಶ್ ಠಾಕೂರ್ ಮಾಹಿತಿ ನೀಡಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ಜೂ.21ರಂದು ಸಂಜೆ ಗಂಟೆ 5.00 ರಿಂದ 7.00ರ ವರೆಗೆ ಉಡುಪಿಯಲ್ಲಿ ನಡೆಯಲಿರುವ ‘ವಿಶ್ವ ಯೋಗ ದಿನಾಚರಣೆ’ಯಲ್ಲಿ ಡಾ! ತನ್ಮಯ್ ಗೋಸ್ವಾಮಿ ‘ಯೋಗ ಮತ್ತು ಶಿಸ್ತುಬದ್ಧ ಜೀವನ’ದ ಬಗ್ಗೆ ಮಾರ್ಗದರ್ಶನ ಮಾಡಲಿದ್ದು, ಯೋಗ ಶಿಕ್ಷಕಿ ಶೋಭಾ ಶೆಟ್ಟಿ ಇಂದ್ರಾಳಿ ಯೋಗಾಭ್ಯಾಸ ತರಗತಿಯನ್ನು ನಡೆಸಿಕೊಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ಸದಾನಂದ ಉಪ್ಪಿನಕುದ್ರು, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರೇಶ್ಮಾ ಶೆಟ್ಟಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಪ್ರಕೋಷ್ಠಗಳ ಸಂಚಾಲಕರು ಉಪಸ್ಥಿತರಿದ್ದರು.