ಅಧಿಕಾರದ ಲಾಲಸೆಯಿಂದ ಇಂದಿರಾ ಗಾಂಧಿ ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿ ನಿಜಕ್ಕೂ ಅಮಾನವೀಯ: ಕುಯಿಲಾಡಿ ಸುರೇಶ್ ನಾಯಕ್

ಅಂದು ದೇಶದಲ್ಲಿ ಯಾವುದೇ ಅರಾಜಕತೆ, ಯುದ್ಧ, ನೆರೆ ಹಾವಳಿ ಅಥವಾ ಬರ ಪರಿಸ್ಥಿತಿ ಇಲ್ಲದೇ ಇದ್ದರೂ ಇಂದಿರಾ ಗಾಂಧಿ ಕೇವಲ ರಾಜಕೀಯ ಲಾಭಕ್ಕಾಗಿ, ಅಧಿಕಾರದ ಲಾಲಸೆಯಿಂದ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿಕೆ ಮಾಡಿರುವುದು ನಿಜಕ್ಕೂ ಸರ್ವಕಾಲಿಕ ಅಮಾನವೀಯ ಕೃತ್ಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಜೂ.25ರಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆದ ‘ಕಾಂಗ್ರೆಸ್ ಸರ್ವಾಧಿಕಾರ ಹೇರಿದ ತುರ್ತುಪರಿಸ್ಥಿತಿಯ ಕರಾಳ ದಿನಕ್ಕೆ 45 ವರ್ಷಗಳು’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂದು ಅಧಿಕಾರ ಉಳಿಸಿಕೊಳ್ಳಲು ಇಂದಿರಾ ಗಾಂಧಿ ಪ್ರಜಾತಂತ್ರ ವ್ಯವಸ್ಥೆಯ ಕತ್ತು ಹಿಸುಕಿ ತುರ್ತು ಪರಿಸ್ಥಿತಿ ಹೇರಿದ್ದರೆ, ಇಂದು ಕಾಂಗ್ರೆಸ್ ವರಿಷ್ಠರಿಗೆ ಇ.ಡಿ. ವಿಚಾರಣೆಗೆ ನೋಟಿಸ್ ನೀಡಿದರೆ ಡಿಕೆಶಿ, ಸಿದ್ದರಾಮಯ್ಯ ಸಹಿತ ಕಾಂಗ್ರೆಸಿಗರು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಬೊಬ್ಬಿರಿದು ಬೀದಿಗಿಳಿದು ಗಲಭೆ ಮಾಡುತ್ತಿರುವುದು ವಿಪರ್ಯಾಸ. ದೇಶದಲ್ಲಿ ಒಳ್ಳೆಯ ವಿಚಾರವನ್ನು ಕಾಂಗ್ರೆಸ್ ಎಂದಿಗೂ ಸಹಿಸಿಕೊಳ್ಳುವುದಿಲ್ಲ. ದೇಶದ ಸ್ವಾತಂತ್ರ್ಯಾನಂತರ ಸುದೀರ್ಘ ಅವಧಿಗೆ ದುರಾಡಳಿತ ನಡೆಸಿ ಒಂದೇ ಕುಟುಂಬದ ಉದ್ಧಾರಕ್ಕಾಗಿ ದೇಶದ ಹಿತವನ್ನು ಬಲಿಕೊಟ್ಟು ಸಂವಿಧಾನ ಮತ್ತು ಕಾನೂನನ್ನು ತಮಗೆ ಬೇಕಾದಂತೆ ದುರ್ಬಳಕೆ ಮಾಡಿರುವ ಕಾಂಗ್ರೆಸ್ ನಿರಂತರವಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಕುಯಿಲಾಡಿ ಹೇಳಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, 1947ರಲ್ಲಿ ಹೋರಾಟಗಳ ಮೂಲಕ ಪಡೆದ ಸ್ವಾತಂತ್ರ್ಯವನ್ನು 1975ರಲ್ಲಿ ಇಂದಿರಾ ಗಾಂಧಿಯವರು ತಮ್ಮ ರಾಜಕೀಯ ದುರಾಸೆಗೋಸ್ಕರ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ದೇಶವಾಸಿಗಳ ಬದುಕನ್ನು ದುಸ್ತರಗೊಳಿಸಿ ವ್ಯಕ್ಯಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಪತ್ತಿಕಾ ಸ್ವಾತಂತ್ರ್ಯ ಹರಣ ಮಾಡಿದರು ಎಂದರು.
ಇಂದಿನ ಯುವ ಪೀಳಿಗೆಗೆ ತುರ್ತು ಪರಿಸ್ಥಿತಿಯ ಬಗ್ಗೆ ಅರಿವು ಮೂಡಿಸುವುದು ಜವಾಬ್ದಾರಿಯುತ ಸ್ಥಾನದಲ್ಲಿರುವ ಬಿಜೆಪಿ ಪಕ್ಷದ ಕರ್ತವ್ಯವಾಗಿದೆ. ಅಂದು ಜನಸಂಘದ ಹಿರಿಯರನ್ನು ಅಧಿಕಾರ ದುರುಪಯೋಗ ಪಡಿಸಿಕೊಂಡು ಜೈಲಿಗೆ ಅಟ್ಟಲಾಯಿತು. 21 ತಿಂಗಳ ಕಾಲ ಹೇರಿದ್ದ ತುರ್ತು ಪರಿಸ್ಥಿತಿಯ ವಿರುದ್ದ ಧ್ವನಿ ಎತ್ತಿದವರನ್ನು ಬಂಧಿಸಿ ಹಿಂಸಿಸಲಾಯಿತು. ಈ ವಿಷಯಗಳನ್ನು ನಮ್ಮ ಹಿರಿಯರು ನಮಗೆ ತಿಳಿಸಿದ್ದಾರೆ. ನಾವು ಅದನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಭಾರತೀಯ ಜನಸಂಘದ ಸಕ್ರಿಯ ಸದಸ್ಯರಾಗಿದ್ದು ತುರ್ತು ಪರಿಸ್ಥಿತಿಯ ಹೋರಾಟಗಳಲ್ಲಿ ಭಾಗವಹಿಸಿ, ಪ್ರಸಕ್ತ ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾಗಿರುವ ರಮಾಕಾಂತ್ ದೇವಾಡಿಗ ರವರನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮನೋಹರ್ ಎಸ್. ಕಲ್ಮಾಡಿ, ಸದಾನಂದ ಉಪ್ಪಿನಕುದ್ರು ಹಾಗೂ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲಗಳ ಪದಾಧಿಕಾರಿಗಳು, ನಗರಸಭಾ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ತುರ್ತುಪರಿಸ್ಥಿತಿಯ ಕರಾಳ ದಿನಾಚರಣೆ ಕಾರ್ಯಕ್ರಮದ ಜಿಲ್ಲಾ ಸಂಚಾಲಕಿ ರೇಶ್ಮಾ ಉದಯ ಶೆಟ್ಟಿ ಸ್ವಾಗತಿಸಿ, ಜಿಲ್ಲಾ ಸಹ ಸಂಚಾಲಕ ಶಿವಕುಮಾರ್ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ವಂದಿಸಿದರು.