ಕರಾವಳಿ

ಕಾರು ಹಾಗೂ ಅದರೊಳಗಿದ್ದ ವ್ಯಕ್ತಿ ಸುಟ್ಟು ಕರಕಲಾದ ಪ್ರಕರಣ : ಹತ್ಯೆ ‌ ನಾಲ್ವರನ್ನು ಬಂಧಿಸಿದ್ದ ಪೊಲೀಸರು..!

ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಒತ್ತಿನೆಣೆ ಸಮೀಪದ ಹೇನಬೇರು ರಸ್ತೆಯಲ್ಲಿ ಕಾರು ಹಾಗೂ ಅದರೊಳಗಿದ್ದ ವ್ಯಕ್ತಿ ಸುಟ್ಟು ಕರಕಲಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.ಆತ್ಮಹತ್ಯೆ ಡ್ರಾಮ‌ ಮಾಡಲು ಮುಂದಾದ ವ್ಯಕ್ತಿಯೋರ್ವನ ಸಂಚಿಗೆ ಅಮಾಯಕ ವ್ಯಕ್ತಿ ಬಲಿಯಾಗಿದ್ದಾ‌ರೆ ಎಂದು ತಿಳಿದು ಬಂದಿದೆ.

ಕೊಲೆಯಾದ ವ್ಯಕ್ತಿ ಆನಂದ ದೇವಾಡಿಗ ಎಂದು ತಿಳಿಯಲಾಗಿದೆ.

ಕಾರ್ಕಳ ಮೂಲದ ಆನಂದ ದೇವಾಡಿಗ (62) ಕೊಲೆಯಾದ ವ್ಯಕ್ತಿ. ಕಾರ್ಕಳದ ಮಾಳ ನಿವಾಸಿ ಸದಾನಂದ ಶೇರಿಗಾರ್ (52), ಹಿರ್ಗಾನ ಶಿವನಗರದ ಶಿಲ್ಪಾ ಸಾಲ್ಯಾನ್ (30) ಕೊಲೆ ಮಾಡಿ ಸುಟ್ಟವರು. ಕಾರ್ಕಳ ಪಚ್ಚಲಾಡಿ ಸೂಡ ನಿವಾಸಿಗಳಾದ ಸತೀಶ್ ದೇವಾಡಿಗ (49), ನಿತಿನ್ ದೇವಾಡಿಗ (40) ಕೊಲೆ ಆರೋಪಿಗಳಿಬ್ಬರು ಪರಾರಿಯಾಗಲು ಸಹಕರಿಸಿದ್ದು ಸದ್ಯ ನಾಲ್ವರು ಪೊಲೀಸರ ಅತಿಥಿಯಾಗಿದ್ದಾರೆ ಎನ್ನಲಾಗಿದೆ.

ಹಳೆ ಕೇಸೊಂದರಲ್ಲಿ ತನಗೆ ಶಿಕ್ಷೆಯಾಗುವ ಭಯದಲ್ಲಿದ್ದ ಸದಾನಂದ ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಿ‌ ದಾಖಲೆಗಳನ್ನು ನೀಡಿ ಆ ಕೇಸಿನಿಂದ ಬಚಾವ್ ಆಗುವ ಮಾಸ್ಟರ್ ಫ್ಲಾನ್ ಮಾಡಿದ್ದ. ಅದಕ್ಕಾಗಿ ಆನಂದ ದೇವಾಡಿಗನಿಗೆ ಮದ್ಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ಪ್ರಜ್ಞೆ ತಪ್ಪಿಸಿ ಕಾರಿನಲ್ಲಿ ಕರೆತಂದು 5 ಲೀಟರಿಗೂ ಅಧಿಕ ಪೆಟ್ರೋಲ್ ಕಾರಿಗೆ ಸುರಿದು, ಕಾರು ಮತ್ತು‌ ಮೃತದೇಹ ಸುಟ್ಟುಹಾಕಿದ್ದಾರೆ. ಆರೋಪಿ ಸದಾನಂದ ಮೊದಲು ಖಾಸಗಿ‌ ಸರ್ವೇಯರ್ ಆಗಿದ್ದ. ಇದೀಗಾ ಕಲ್ಲು‌ಕ್ವಾರಿ ನಡೆಸುತ್ತಿದ್ದಾನೆ.‌ ಆರೋಪಿ‌ ವಿವಾಹಿತನಾಗಿದ್ದು ಇಬ್ಬರು ಪುತ್ರಿಯರಿದ್ದಾರೆ. ಇನ್ನೋರ್ವ ಆರೋಪಿ ಶಿಲ್ಪಾ ಕೂಡ ವಿವಾಹಿತಳು.‌ ಕೃತ್ಯದ ಬಳಿಕ ಪರಾರಿಗೆ ಸಹಕರಿಸಿದ ಸತೀಶ್ ಟೈಲರಿಂಗ್ ವೃತ್ತಿ ಮಾಡುತ್ತಿದ್ದು ನಿತೀಶ್ ಫೋಟೋಗ್ರಾಫರ್.

ಎರಡು ತಂಡಗಳೊಂದಿಗೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆಬೀಸಿದ್ದು ಕಾರ್ಕಳಕ್ಕೂ ಪೊಲೀಸರು ತೆರಳಿದ್ದರು. ಗುರುವಾರ ಬೆಳಿಗ್ಗೆ ಮೂಡುಬಿದಿರೆ ಹುಲ್ಕೇರಿ ಕ್ರಾಸ್ ಬಳಿ ಕೊಲೆ ಮಾಡಿ ಸುಟ್ಟ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಬಳಿಕ ಸಹಕರಿಸಿದ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಉಡುಪಿ‌ ಎಸ್ಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ನಿರ್ದೇಶನದಲ್ಲಿ ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಬೈಂದೂರು ಪಿಎಸ್ಐ ಪವನ್ ನಾಯಕ್, ಗಂಗೊಳ್ಳಿ ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಸಿಬ್ಬಂದಿಯವರಾದ ಮೋಹನ ಪೂಜಾರಿ , ನಾಗೇಂದ್ರ, ಕೃಷ್ಣ ದೇವಾಡಿಗ, ಶಾಂತರಾಮ ಶೆಟ್ಟಿ, ಅಣ್ಣಪ್ಪ ಪೂಜಾರಿ, ಚಂದ್ರಶೇಖರ, ಸುಜಿತ್‌, ಶ್ರೀಧರ, ಪ್ರಿನ್ಸ್, ಚಾಲಕರಾದ ಚಂದ್ರಶೇಖರ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!