ರಾಜ್ಯ

ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಬರುವ ಭಕ್ತಾದಿಗಳ ಗಮನಕ್ಕೆ ; ಶಿರಾಡಿ ಘಾಟ್ ಹಾಗೂ ಮಡಿಕೇರಿ ಘಾಟ್ ಸಂಪೂರ್ಣ ಬಂದ್

ನಾಲ್ಕು ವರ್ಷಗಳಿಂದ ಯಾವುದೇ ಸಮಸ್ಯೆ ಇಲ್ಲದ ಶಿರಾಡಿ ಘಾಟಿ ಹೆದ್ದಾರಿ ಸಂಚಾರ ಮತ್ತೆ ಸ್ತಬ್ಧಗೊಂಡಿದೆ. ಹಾಸನ ಜಿಲ್ಲಾ ವ್ಯಾಪ್ತಿಯ ದೋಣಿಗಲ್‌ನಲ್ಲಿ ಭೂಕುಸಿತವಾದ ಬಳಿಕ ಅಲ್ಲಿನ ಜಿಲ್ಲಾಡಳಿತ ಹೊರಡಿಸಿದ ಆದೇಶದ ಪ್ರಕಾರ ಶಿರಾಡಿ ಘಾಟಿಯಲ್ಲಿ ಸಂಪೂರ್ಣವಾಗಿ ವಾಹನ ಸಂಚಾರ ತಡೆಹಿಡಿಯಲಾಗಿದೆ.

2018ರ ಬೇಸಿಗೆಯಲ್ಲಿ ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಶಿರಾಡಿ ಘಾಟಿ ಹೆದ್ದಾರಿಯ ಕಾಂಕ್ರಿಟೀಕರಣ ಕಾಮಗಾರಿ ನಡೆಯುತ್ತಿದ್ದಾಗ 6 ತಿಂಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಅದೇ ವರ್ಷದ ಜುಲೈನಲ್ಲಿ ಸಂಚಾರ ಪುನಾರಂಭಗೊಂಡಿತ್ತು. ಇದಾದ ಬಳಿಕ ಸಮಸ್ಯೆ ಇರಲಿಲ್ಲ. 3 ದಿನಗಳ ಹಿಂದೆ ಹಾಸನ ಜಿಲ್ಲಾ ವ್ಯಾಪ್ತಿಯ ದೋಣಿಗಲ್‌ ಬಳಿ ಕುಸಿತ ಉಂಟಾದ ಕಾರಣ ಮೊದಲು ಭಾಗಶಃ ನಿರ್ಬಂಧ ಹೇರಿದ್ದ ಹಾಸನ ಜಿಲ್ಲಾಡಳಿತ, ಶುಕ್ರವಾರದಿಂದ ಸಂಪೂರ್ಣ ನಿರ್ಬಂಧ ವಿಧಿಸಿದೆ.

ಗುಂಡ್ಯ ಚೆಕ್‌ಪೋಸ್ಟ್‌ನಲ್ಲೇ ಎಲ್ಲ ವಾಹನಗಳನ್ನು ತಡೆದು ಶಿರಾಡಿ ಘಾಟಿ ಸಂಚಾರ ಸ್ಥಗಿತಗೊಂಡಿರುವ ಮಾಹಿತಿಯನ್ನು ಚಾಲಕರಿಗೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆಯಿಂದ ಶಿರಾಡಿ ಘಾಟಿ ಸಂಪೂರ್ಣ ಸ್ತಬ್ಧಗೊಂಡಿದೆ. ಆದರೆ ಮಾಹಿತಿ ಇಲ್ಲದ ವಾಹನಗಳು ಗುಂಡ್ಯ ಚೆಕ್‌ಪೋಸ್ಟ್‌ವರೆಗೆ ಹೋಗಿ ಮರಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಮಡಿಕೇರಿ ಬಳಿ ತಡೆಗೋಡೆ ಕುಸಿಯುವ ಆತಂಕ ಎದುರಾದ ಹಿನ್ನೆಲೆ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ನ್ನು ನಿನ್ನೆ ರಾತ್ರಿಯಿಂದಲೇ ಸಂಪೂರ್ಣ ಬಂದ್ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಡಿಕೇರಿ ಟೋಲ್ ಗೇಟ್ ಬಳಿಯೇ ಹೆದ್ದಾರಿ ಬಂದ್ ಮಾಡಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಪರಿಣಾಮ ಮಡಿಕೇರಿ ಮತ್ತು ಮಂಗಳೂರು ನಡುವಿನ ಸಂಚಾರ ಸಂಪೂರ್ಣ ಕಡಿತಗೊಂಡಿದೆ. ವಾಹನ ಸವಾರರು ಮಡಿಕೇರಿಯ ಮೇಕೇರಿ ರಸ್ತೆಯ ಮೂಲಕ ತೆರಳಲು ಪೊಲೀಸರು ವ್ಯವಸ್ಥೆ ಕಲ್ಪಿಸಲಾಗಿದೆ. ಮೇಕೇರಿ ರಸ್ತೆ ಕಿರಿದಾಗಿದ್ದು, ಬೃಹತ್ ವಾಹನಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ.ಮಳೆಗಾಲ ಮುಗಿಯುವ ತನಕ ನಿಮ್ಮ ಪ್ರಯಾಣವನ್ನು ಮುಂದೂಡುವುದು ಒಳಿತು .

Related Articles

Leave a Reply

Your email address will not be published. Required fields are marked *

Back to top button
error: Content is protected !!