ಕರಾವಳಿ

ಚಿಂತಕ ಹಾಗೂ ಸಾಮಾಜಿಕ ಮತ್ತು ಮಾನವ ಹಕ್ಕು ಹೋರಾಟಗಾರ ಜಿ.ರಾಜಶೇಖರ ಇನ್ನಿಲ್ಲಾ

ಉಡುಪಿ : ಚಿಂತಕ ಹಾಗೂ ಸಾಮಾಜಿಕ ಹೋರಾಟಗಾರ ಜಿ.ರಾಜಶೇಖರ ಬುಧವಾರ ನಗರದ ಆದರ್ಶ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಜಿ.ರಾಜಶೇಖರ ಅವರಿಗೆ ಹಲವು ದಿನಗಳಿಂದ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ದಿನದಿಂದ ದಿನಕ್ಕೆ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಲೇ ಇತ್ತು. ಕೊನೆಗೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಇಂದು ರಾತ್ರಿ 11 ಗಂಟೆಯ ಸುಮಾರಿಗೆ ಅವರು ಮೃತಪಟ್ಟರುವುದಾಗಿ ವೈದ್ಯರು ಘೋಷಿಸಿದರು.

ಪ್ರಮುಖ ಸಾಮಾಜಿಕ ಹೋರಾಟಗಾರರು ಹಾಗೂ ಚಿಂತಕರಾಗಿದ್ದ ಜಿ.ರಾಜಶೇಖರ ಜನಪರ ಚಳವಳಿಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿದ್ದರು. ಕರಾವಳಿಯ ಕೋಮುವಾದದ ವಿರುದ್ಧ ಗಟ್ಟಿಯಾಗಿ ಧನಿ ಎತ್ತುತ್ತಿದ್ದರು.

ನೇರ ನಡೆ ನುಡಿಗೆ ಹೆಸರಾಗಿದ್ದ ಅವರು ಜೀವನದುದ್ದಕ್ಕೂ ಸರಳ ವ್ಯಕ್ತಿತ್ವ ಹಾಗೂ ಆಡಂಬರವಿಲ್ಲದ ಜೀವನ ಶೈಲಿ ಪಾಲಿಸಿದವರು.

ತನ್ನ ಬಹುವಚನ ಭಾರತ ಕೃತಿಗೆ ಅಕಾಡಮಿಯ ಪ್ರಶಸ್ತಿ ಘೋಷಣೆಯಾದಾಗ ಭಾರತದಲ್ಲಿ ಸಹಿಷ್ಣುವಿಕೆಗೆ ಬೆಲೆ ಇಲ್ಲವಾಗಿರುವುದರಿಂದ ತಾನು ಪ್ರಶಸ್ತಿ ಮತ್ತು ಅದರ ಜೊತೆ ಸಿಗುವ ಬಹುಮಾನದ ಧನವನ್ನೂ ಸ್ವೀಕರಿಸಲಾರೆ ಎಂದು ಗಟ್ಟಿಯಾಗಿ ಘೋಷಿಸಿ ತಿರಸ್ಕರಿಸಿದ್ದರು.

ಜಿ.ರಾಜಶೇಖರ 2019ರಲ್ಲಿ ಬಿದ್ದು ತಲೆಗೆ ಗಂಭೀರ ಪೆಟ್ಟುಬಿದ್ದಿತ್ತು ಆ ಬಳಿಕ ರೀಕ್ಷೆಗೊಳಪಡಿಸಿದಾಗ ಅವರಿಗೆ ಪ್ರೊಗ್ರೆಸಿವ್ ಸುಪ್ರ ನ್ಯೂಕ್ಲಿಯರ್ ಪಾಲ್ಸಿ ಎಂಬ ಅಪರೂಪದ ಪಾರ್ಕಿನ್‌ಸನ್ಸ್‌ ಕಾಯಿಲೆ ಇರುವುದು ದೃಢಪಟ್ಟಿತ್ತು. ಮಿದುಳಿಗೆ ಸಂಬಂಧಪಟ್ಟ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹಂತ ಹಂತವಾಗಿ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದರು. ದೇಹದ ಭಾಗಗಳು ಸ್ವನಿಯಂತ್ರಣ ಕಳೆದುಕೊಂಡಿದ್ದವು.

ಮಾತನಾಡಲು ಹಾಗೂ ನಡೆದಾಡಲು ಸಾದ್ಯವಾಗದ ಸ್ಥಿತಿ ತಲುಪಿದ ಬಳಿಕ ಸಾರ್ವಜನಿಕ ಸಭೆ, ಹೋರಾಟ ಹಾಗೂ ಪ್ರತಿಭಟನೆಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿದ್ದರು.ಅಲ್ಲಿಯವರೆಗೂ ಅವರು ಹೋರಾಟದ ಸಂಗಾತಿಯಾಗಿದ್ದರು. ಕೊನೆಗೆ ನಡೆಯಲೂ ಸಾಧ್ಯವಾಗದೆ ಹಾಗೂ ಆಹಾರವನ್ನೂ ನುಂಗಲಾಗದೆ ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿ ಇಂದು ಕೊನೆಯುಸಿರೆಳೆದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!