ಒಡೆದು ಹೋಗಿರುವ ಮನಗಳನ್ನು ಒಗ್ಗೂಡಿಸುವ ಆ್ಯಪ್ ಗಳ ಅಗತ್ಯತೆ ಹೆಚ್ಚಾಗಿದೆ: ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ
ಪ್ರೊಲಾಸ್ಕೂಲ್ ಆ್ಯಪ್ ಲೋಕಾರ್ಪಣೆ
ಬೆಂಗಳೂರು ಜುಲೈ 31: ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವಾರು ಆವಿಷ್ಕಾರಗಳು ಆಗುತ್ತಿವೆ. ಹಲವಾರು ಆ್ಯಪ್ ಗಳ ರಚಿಸಲಾಗುತ್ತಿದೆ. ಒಡೆದು ಹೋಗಿರುವ ಮನಸ್ಸುಗಳನ್ನು ಸೇರಿಸುವಂತಹ ಒಂದೆರಡು ಆ್ಯಪ್‌ಗಳು ಬಂದರೆ ಒಡೆದು ಹೋಗುತ್ತಿರುವ ಬದುಕನ್ನ ಸುಲಭವಾಗಿ ಸರಿಪಡಿಸಬಹುದಾಗಿತ್ತು ಎಂದು *ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ, ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಡಿಜಿಟಲ್ ಕಲಿಕೆಯ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ರೂಪಿಸಲಾಗಿರುವ ಪ್ರೋಲಾ ಟೆಕ್ ನ ಪ್ರೋಲಾಸ್ಕೂಲ್ ಆ್ಯಪ್ ನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಹಿಂದಿನ ಕಾಲದಲ್ಲಿ ಗುರುವಿನ ಪಾದದಲ್ಲಿ ಕುಳಿತು ಜ್ಞಾನಾರ್ಜನೆಯನ್ನು ಪಡೆದುಕೊಳ್ಳಲಾಗುತ್ತಿತ್ತು. ಆಧುನಿಕ ಆವಿಷ್ಕಾರಗಳು ಹಾಗೂ ಕರೋನಾ ಸಾಂಕ್ರಾಮಿಕ ನಮ್ಮೆದರು ತೆರೆದಿಟ್ಟ ಅನಿವಾರ್ಯತೆಯಿಂದ ನಾವಿದ್ದಲ್ಲಿಯೇ ವಿಶ್ವದ ಮೂಲೆ ಮೂಲೆಗಳಿಂದ ಜ್ಞಾನ ಹರಿದುಬರುತ್ತಿದೆ. ಅಂತಹ ಜ್ಞಾನದ ರಾಶಿಯನ್ನು ಉಪಯೋಗಿಸಿಕೊಳ್ಳುವಂತಹ ನೂತನ ಪ್ಲಾಟ್‌ಫಾರಂ ಆಗಿ ಪ್ರೋಲಾಟೆಕ್ ಪ್ರೊಲಾಸ್ಕೂಲ್ ಆ್ಯಪ್ ನ್ನು ಸಿದ್ದಗೊಳಿಸಿದ್ದು, ಭಾರತದಲ್ಲೇ ತಯಾರಾದ ಅತ್ಯುತ್ತಮ ತಂತ್ರಜ್ಞಾನ ಇದಾಗಿದೆ. ಪ್ರೋಲಾಸ್ಕೂಲ್ ಅಂತರ್ಜಾಲದ ಸಂಪರ್ಕವಿಲ್ಲದೆಯೂ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಮುಂದುವರೆಸಲು ಅವಕಾಶ ನೀಡುವ ಹಾಗೂ ಸಂಸ್ಥೆಗಳಿಗೆ ಮತ್ತು ಕೋಚಿಂಗ್ ಸೆಂಟರ್‌ಗಳಿಗೆ ಅಗತ್ಯವಿರುವ ಡಿಜಿಟಲ್ ವೇದಿಕೆಯನ್ನು ಒದಗಿಸುವ ದೇಶದ ಪ್ರಮುಖ ಡಿಜಿಟಲ್ ಪ್ಲಾಟ್‌ಫಾರಂಗಳಲ್ಲಿ ಒಂದಾಗಿದೆ. ಅಲ್ಲದೇ, ಕಾರ್ಪೋರೇಟ್ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ತರಬೇತಿ ನೀಡಲು ಈ ಆ್ಯಪ್ ನ್ನು ಬಳಸಿಕೊಳ್ಳಬಹುದಾಗಿದೆ. ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಅಂತರ್ಜಾಲದ ಸಮಸ್ಯೆ ಇರುವ ಕಡೆಗಳಲ್ಲಿ ವಿದ್ಯಾರ್ಥಿಗಳು ಆಫ್‌ಲೈನ್ ಮೂಲಕ ತಮ್ಮ ಕಲಿಕೆಯನ್ನು ಮುಂದುವರೆಸಲು ಅನುವು ಮಾಡುವುದು ಪ್ರೋಲಾಸ್ಕೂಲ್‌ನ ಪ್ರಮುಖ ಉದ್ದೇಶ ಎಂದು ತಿಳಿದು ಸಂತಸವಾಯಿತು. ರಿಯಲ್ ಟೈಮ್ ಮಾಕ್ ಟೆಸ್ಟ್‌ಗಳನ್ನು ತಗೆದುಕೊಳ್ಳುವ, ಫಲಿತಾಂಶವನ್ನು ಪ್ರಕಟಿಸುವ ಹಾಗೂ ಕೆರಿಯರ್ ಗೈಡೆನ್ಸ್ ನೀಡುವ ಉದ್ದೇಶಕ್ಕೂ ಇದನ್ನು ಬಳಸಿಕೊಳ್ಳುವಂತೆ ರಚಿಸಲಾಗಿರುವುದು ಬಹಳ ವಿಶೇಷ ಎಂದರು.
ಕರೋನಾ ಸಂಕಷ್ಟದ ಕಾಲದಲ್ಲಿ ಹೊಸ ಆವಿಷ್ಕಾರಗಳು ಹಾಗೂ ತಂತ್ರಜ್ಞಾನ ಇಲ್ಲದೇ ಇದ್ದಿದ್ದರೆ ಬಹಳ ಕಷ್ಟವಾಗುತ್ತಿತ್ತು. ವಿಜ್ಞಾನ ಹಾಗೂ ತಂತ್ರಜ್ಞಾನ ನಮಗೆ ಬಹಳ ಅಗತ್ಯ. ಆದರೆ, ಅದನ್ನು ಮಾನವನ ಉನ್ನತಿಗೆ ಬಳಸಿಕೊಳ್ಳುವ ಜ್ಞಾನವೂ ಅಗತ್ಯ. ಪ್ರತಿನಿತ್ಯ ಸಾವಿರಾರು ಆ್ಯಪ್ ಗಳು ಹೊರಬರುತ್ತವೆ. ಒಡೆದು ಹೋಗಿರುವ ಮನಸ್ಸುಗಳನ್ನು ಒಗ್ಗೂಡಿಸುವಂತಹ ಓಂದೆರಡು ಆ್ಯಪ್ ಗಳು ಇದ್ದಿದ್ದರೆ ಬಹಳ ಚೆನ್ನಾಗಿತ್ತು. ಇದರಿಂದ ಒಡೆದು ಹೋಗುತ್ತಿರುವ ಬಹಳಷ್ಟು ಬದುಕುಗಳನ್ನು ಸರಿಪಡಿಸಬಹುದಾಗಿತ್ತು ಎಂದು ಅಭಿಪ್ರಾಯಪಟ್ಟರು.
ಮಕ್ಕಳು ಸರಳವಾಗಿ ಉಪಯೋಗಿಸಬಹುದಾದಂತಹ ಕಲಿಕಾ ತಂತ್ರಜ್ಞಾನಗಳು ಹೆಚ್ಚಾಗಬೇಕು. ನಮ್ಮ ಮಾನಸಿಕ ವಿಕಾಸಕ್ಕೆ ಧಕ್ಕೆ ಬರದ ಹಾಗೆ ನೂತನ ಆವಿಷ್ಕಾರಗಳನ್ನು ಬಳಸಿಕೊಳ್ಳಬೇಕಾಗಿದೆ. ನಮ್ಮ ಬದುಕಿನಲ್ಲಿ ಸಮಸ್ಯೆಗಳ ಬಂದಾಗ ಯಂತ್ರಗಳು ಉಪಯೋಗಕ್ಕೆ ಬರುವುದಿಲ್ಲ. ಬದುಕಿಗೆ ಬಂದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವ ಪ್ರಜ್ಞೆಯನ್ನು ಎತ್ತರಿಸುವ ಆಧ್ಯಾತ್ಮಿಕಕ್ಕೆ ಇರುವ ಶಕ್ತಿ ವಿಜ್ಞಾನಕ್ಕೆ ಬಂದರೆ ಸಂತಸ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಸಿಎಂಆರ್ ಸಂಸ್ಥೆಗಳ ಮುಖ್ಯಸ್ಥ ಕೆ.ಸಿ. ರಾಮಮೂರ್ತಿ, ಮೇಲಾ ವೆಂಚರ್ಸ್ ನ ಮ್ಯಾನೇಜಿಂಗ್ ಪಾರ್ಟನರ್ ಹಾಗೂ ಮೈಂಡ್ ಟ್ರೀ ಲಿ. ಮಾಜಿ ಸಹ ಸಂಸ್ಥಾಪಕ ಪಾರ್ಥಸಾರಥಿ ಎನ್.ಎಸ್., ಸಿಂಗಾಪುರ ಮೊಸಾಯಿಕ್ ಪ್ರೈ.ಲಿ.ನ ಸಂಸ್ಥಾಪಕ ಸಿಇಒ ಹೈರೊ ಇಶಿದಾ, ಕರ್ನಾಟಕ ಮುಕ್ತ ವಿವಿಯ ಕುಲಪತಿ ವಿದ್ಯಾಶಂಕರ್, ಕೆಬಿಎಡಿಎ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ. ಸೋಮಶೇಖರ್, ಕೆಎನ್ಆರ್ ಕನ್ಟ್ಸಕ್ಷನ್ ಲಿ.ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೆ.ಜಲಂಧರ್ ರೆಡ್ಡಿ ಉಪಸ್ಥಿತರಿದ್ದರು.