ಕರಾವಳಿ ಹೊರಗಿನ ದೈವಾರಾಧನೆ ವಿರುದ್ದ ಸಿಡಿದೆದ್ದ ದೈವಾರಾಧಕರು ಕುತ್ತಾರು ಆದಿತಳ ಕೊರಗಜ್ಜನ ಕಟ್ಟೆಯಲ್ಲಿ ಪ್ರಾರ್ಥನೆ

ಕುತ್ತಾರು: ದೈವಗಳ ಹೆಸರಲ್ಲಿ ದಂಧೆಗೆ ಇಳಿದವರ ವಿರುದ್ದ ಕುತ್ತಾರು ಆದಿತಳ ಕೊರಗಜ್ಜನ ಕಟ್ಟೆಯ ಮೊರೆ ಹೋಗಿದ್ದಾರೆ. ಇಂದು ಬೆಳಿಗ್ಗೆ ದೈವಾರಾಧಕರು ಹೆಚ್ಚಿನ ಸಂಖ್ಯೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.
ಹಲವು ಸಂಘಟನೆಗಳ ನೇತೃತ್ವದಲ್ಲಿ ಕೊರಗಜ್ಜ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ತುಳುನಾಡ ದೈವಾರಾಧನ ಸಂರಕ್ಷಣಾ ಯುವವೇದಿಕೆ, ದೈವಾರಾಧನ ಸಮಿತಿ ಬೆಳ್ತಂಗಡಿ, ಹಿಂದೂ ಸಂರಕ್ಷಣಾ ಸಮಿತಿ ಮಂಗಳೂರು ಹಾಗೂ ಸಮಸ್ತ ದೈವಾರಾಧಕರಿಂದ ಪ್ರಾರ್ಥನೆ ಸಲ್ಲಿಸಲಾಯಿತು.
ಮೈಸೂರು, ಬೆಂಗಳೂರಿನಲ್ಲಿ ಕೊರಗಜ್ಜ ದೈವದ ಹೆಸರಲ್ಲಿ ದಂಧೆ ನಡೆಸಲಾಗುತ್ತಿದೆ. ದೈವದ ಕೋಲ, ಸೇವೆಯ ಹೆಸರಿನಲ್ಲಿ ಲಕ್ಷಾಂತರ ರೂ. ಲೂಟಿ ಮಾಡಲಾಗುತ್ತಿದೆ. ದೈವ ನಿಂದನೆ ಮಾಡಿ ದಂಧೆ ಮಾಡುವವರ ವಿರುದ್ದ ಕಾನೂನು ಹೋರಾಟಕ್ಕೆ ನಿರ್ಧರಿಸಲಾಗಿದೆ.
ಆದಿ ಸ್ಥಳ ಮತ್ತು ತುಳುನಾಡು ಹೊರತು ಪಡಿಸಿ ಕೊರಗಜ್ಜನ ಪ್ರತಿಷ್ಠೆಗೆ ಅವಕಾಶ ಇಲ್ಲ. ಹೀಗಿದ್ದರೂ ರಾಜ್ಯದ ಕೆಲವೆಡೆ ಕೊರಗಜ್ಜನ ಹೆಸರಲ್ಲಿ ದಂಧೆ ನಡೆಸಲಾಗುತ್ತಿದೆ. ಮೈಸೂರು ಮೂಲದ ವ್ಯಕ್ತಿಯೂ ದೈವಾರಾಧಕರ ಜೊತೆಗೆ ಕೈಜೋಡಿಸಿರುವುದು ವಿಶೇಷವಾಗಿದೆ.
ಕೊರಗಜ್ಜ ಆದಿಸ್ಥಳ ಬಿಟ್ಟು ಬೇರೆ ಕಡೆ ಆರಾಧನೆ ವ್ಯವಹಾರದ ಉದ್ದೇಶವನ್ನು ಹೊಂದಿದಂತಿದೆ.
ಇದನ್ನು ತಡೆದ ಮೈಸೂರಿನ ಕೆಲವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಸಿನಿಮಾ ಮತ್ತು ಸಾಮಾಜಿಕ ತಾಣಗಳ ಕಾರಣದಿಂದ ಈ ದಂಧೆ ನಡೀತಾ ಇದೆ.ಇದನ್ನ ನಿಲ್ಲಿಸದೇ ಇದ್ದರೆ ಉಗ್ರ ಹೋರಾಟವನ್ನು ಮಾಡಲಾಗುವುದು ಅನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ. ಈ ವೇಳೆ ತುಳುನಾಡು ದೈವಾರಾಧನೆ ಸಂರಕ್ಷಣಾ ವೇದಿಕೆ, ಮಂಗಳೂರು ದೈವಾರಾಧನಾ ಸಮಿತಿ, ಬೆಳ್ತಂಗಡಿ
ಹಿಂದೂ ಸಂರಕ್ಷಣಾ ಸಮಿತಿ, ಮಂಗಳೂರು, ಸೂರಜ್ ಕೆ. ಬಲ್ಳಾಲ್ ಬಾಗ್, ಪ್ರಭಾಕರ ಓಡಿಲ್ನಾಳ ದೈವಾರಾಧನಾ ಸಮಿತಿ ಬೆಳ್ತಂಗಡಿ, ನಿಮಿಷ್ ರಾಜ್ ಮೈಸೂರು, ಭರತ್ ಬಳ್ಳಾಲ್ ಬಾಗ್ ತುಳುನಾಡು ದೈವಾರಾಧನೆ ಸಂರಕ್ಷಣಾ ವೇದಿಕೆ ಮಂಗಳೂರು, ಕೆ. ಆರ್. ಶೆಟ್ಟಿ ಅಡ್ಯಾರ್ ಪದವು ಹಿಂದೂ ಸಂರಕ್ಷಣಾ ಸಮಿತಿ, ಮಂಗಳೂರು, ಚರಿತ್ ಪೂಜಾರಿ ರೋಶನ್ ರೊನಾಲ್ಡ್ ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.
ದೂರಿನಲ್ಲಿ ಈ ರೀತಿಯಾಗಿ ಹೇಳಲಾಗಿದೆ.
ರಿಂದ
ದೈವ ಭಕ್ತರು, ತುಳುನಾಡು
ರಿಗೆ
ಠಾಣಾಧಿಕಾರಿ
ಪಾಂಡೇಶ್ವರ ಪೊಲೀಸ್ ಠಾಣೆ, ಮಂಗಳೂರು
ವಿಷಯ – ದೈವಗಳನ್ನು ವಿಡಂಬಣೆ ಮಾಡುವವರ ವಿರುದ್ಧ ದೂರು
ಮಾನ್ಯರೇ
ಇತ್ತೀಚಿನ ದಿನಗಳಲ್ಲಿ ನಾಡಿನಾದ್ಯಂತ ನಮ್ಮ ಶ್ರದ್ಧೆಯ ಭಾಗವಾಗಿರುವ ದೈವ ನಂಬಿಕೆಗಳನ್ನು ವಿಡಂಬಣೆ ಮಾಡುವ ಕಾರ್ಯ ಎಗ್ಗಿಲ್ಲದೆ ನಡೆಯುತ್ತಿದೆ. ತುಳುನಾಡಿನಲ್ಲಿ ನಮ್ಮ ನಂಬಿಕೆಯ ಪ್ರಕಾರ ನಿರ್ದಿಷ್ಟವಾದ ಜಾತಿ ಜನಾಂಗದವರು ಮಾತ್ರ ದೈವದ ಪಾತ್ರಿಗಳಾಗಲು ಅರ್ಹತೆ ಪಡೆದಿದ್ದಾರೆ. ಈ ನಂಬಿಕೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ನಂಬಿಕೆಗೆ ಘಾಸಿಯಾಗುವಂತೆ ಹಣ ಗಳಿಸುವ ಉದ್ದೇಶದಿಂದ ತಲೆತಲಾಂತರದಿಂದ ಆಚರಿಸಿಕೊಂಡು ಬಂದಿದ್ದ ಪದ್ಧತಿಯನ್ನು ಮುರಿಯುತ್ತಿದ್ದಾರೆ.
ದೈವ ಭಕ್ತ ತುಳುವರು ಈ ಹಿಂದೆಯೂ ದೈವಗಳನ್ನು ಬೀದಿಬದಿಯಲ್ಲಿ, ಸಾರ್ವಜನಿಕ ಮೆರವಣಿಗೆಯಲ್ಲಿ ಟ್ಯಾಬ್ಲೋ ರೂಪತ ತೋರಿಸುವುದು, ದೈವದ ಅನುಕರಣೆ ಮಾಡಿ ಮನೋರಂಜನಾ ಕಾರ್ಯಕ್ರಮ ಮಾಡುವುದು, ಯಕ್ಷಗಾನ(ಹಾಸ್ಯದ ರೂಪಕ್ಕೆ ಬಳಸುವುದು, ಒಂದು ದೈವವನ್ನು ಇನ್ನೊಂದು ದೈವ ಸೋಲಿಸುವುದು, ದೈವಗಳಲ್ಲೂ ಬಲಾಡ್ಯ ಪ್ರಯೋಜನವಿಲ್ಲದ ದೈವ ಎಂದು ಬಿಂಬಿಸುವುದು), ನಾಟಕಗಳಲ್ಲಿ ದೈವದ ವೇಷಭೂಷಣ ತೊಟ್ಟು ಅಬ್ಬರಿಸುವುದು, ಸಿನೇಮಾಗಳಲ್ಲಿಯಥಾವತ್ತಾಗಿ ಅನುಕರಣೆ ಮಾಡುವುದನ್ನು ವಿರೋಧಿಸುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ಶಿವದೂತೆ ಗುಳಿಗೆ ನಾಟಕ, ಕಾಂತಾರ ಸಿನೇಮಾ ಮತ್ತು ಮುಂದೆ ಸೆಟ್ಟೇರಲಿರುವ ಸಿನೇಮಾದಲ್ಲಿ ದೈವ ಭಕ್ತರ ನಂಬಿಕೆಗೆ ನೋವುಂಟು ಮಾಡುವ ರೀತಿಯಲ್ಲಿ ದೈವವನ್ನು ಪ್ರದರ್ಶನ ಮಾಡುತ್ತಿದ್ದಾರೆ. ಇದೆಲ್ಲವನ್ನೂ ನೋಡುತ್ತಿರುವ ಅಸಂಖ್ಯ ದೈವಭಕ್ತರಲ್ಲಿ ಆಕ್ರೋಶ ಹುಟ್ಟುಹಾಕಿದೆ.
ನಂಬಿಕೆಗೆ ಪೂರಕವಾಗಿ ಕಾಂತಾರ ಸಿನೇಮಾ ಮಾಡಿದ್ದೇವೆ ಎಂದು ನಾಯಕ ನಟ ರಿಷಬ್ ಶೆಟ್ಟಿ ಹೇಳುತ್ತಲೇ, ದೈವ ನಂಬಿಕೆಯನ್ನು ಅಣಕಿಸುವ ಟ್ಯಾಬ್ಲೋ, ಛದ್ಮವೇಷ, ದೈವವನ್ನು ಚಿತ್ರನಟನ ರೂಪದಲ್ಲಿ ಚಿತ್ರಿಸುವುದು, ವೇದಿಕೆಯಲ್ಲಿ ಪ್ರದರ್ಶನ ಮುಂತಾದವುಗಳಿಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರೋತ್ಸಾಹಿಸುತ್ತಾ ದೈವ ನಂಬಿಕೆಗೆ ಇನ್ನಷ್ಟು ಅಪಚಾರವಾಗುವಂತೆ ಮಾಡುತ್ತಿದ್ದಾರೆ. ಶಿವದೂತೆ ಗುಳಿಗೆ ಎಂಬ ಸಾಮಾಜಿಕ ತುಳು ನಾಟಕದಲ್ಲಿ ದೈವವನ್ನು ಯಥಾವತ್ತಾಗಿ ತೋರಿಸಿ, ವಿಚಿತ್ರವಾಗಿ ಅಲಂಕರಿಸಿ, ನಂಬಿಕೆಯ ಭಾಗವಾಗಬೇಕಿದ್ದ ದೈವಕ್ಕೆ ಚಪ್ಪಾಳೆ, ಶಿಳ್ಳೆ ಬೀಳುವಂತೆ ಮಾಡುತ್ತಿದ್ದಾರೆ. ಕಾಂತಾರಾ ಸಿನೇಮಾ ಯಶಸ್ಸಿನ ಬೆನ್ನಿಗೆ ಕರಿ ಅಜ್ಜ ಕರಿ ಹೈದ ಎನ್ನುವ ಸಿನೇಮಾವು ಸೆಟ್ಟೇರುತ್ತಿದೆ. ಇಲ್ಲೂ ದೈವವನ್ನು ಅಣಕಿಸುವ ರೀತಿಯಲ್ಲಿ ಪ್ರದರ್ಶನ ಮಾಡುತ್ತಿದ್ದಾರೆ. ಕಾಂತಾರಾ ಸಿನೇಮಾದ ಪ್ರೇರಣೆಯಿಂದ ಬೀದರ್ ಪೊಲೀಸ್ ಅಧಿಕಾರಿಯೊಬ್ಬರು ದೈವದ ವೇಷಭೂಷಣ ತೊಟ್ಟು ಮನೋಮಜನಾ ಕಾರ್ಯಕ್ರಮ ನೀಡಿದ್ದಾರೆ. ಇದೆಲ್ಲವನ್ನೂ ನಾವು ಬಲವಾಗಿ ಖಂಡಿಸುತ್ತಿದ್ದೇವೆ.
ಮುಂದೆ ಯಾರೂ ದೈವನಂಬಿಕೆಯನ್ನು ಅಪಹಾಸ್ಯ ಮಾಡದಂತೆ ತಡೆಯಲು ಪ್ರಮುಖ ವ್ಯಕ್ತಿಗಳ ವಿರುದ್ಧ ನಾವು ದೂರು ದಾಖಲಿಸಲು ನಿರ್ಧರಿಸಿದ್ದೇವೆ.
ಕಾಂತಾರ ಸಿನೇಮಾದ ನಾಯಕ ನಟ ರಿಷಬ್ ಶೆಟ್ಟಿ, ಸಹನಟ ಮತ್ತು ಶಿವದೂತೆ ಗುಳಿಗೆ ನಾಟಕದಲ್ಲಿ ದೈವದ ಪಾತ್ರ ನಿರ್ವಹಿಸುವ ಸೌರಜ್ ಶೆಟ್ಟಿ, ಶಿವದೂತೆ ಗುಳಿಗೆ ನಾಟಕದ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಕರಿ ಹೈದ ಸಿನೇಮಾದಲ್ಲಿ ದೈವದ ಪಾತ್ರ ನಿರ್ವಹಿಸುವ ಪ್ರಶಾಂತ್ (ಸಿಕೆ) ಮತ್ತು ಬೀದರ್‌ನಲ್ಲಿ ದೈವದ ವೇಷದಲ್ಲಿ ಮನೋರಂಜನಾ ಕಾರ್ಯಕ್ರಮ ನೀಡಿದ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಬೇಕಾಗಿ ತಮ್ಮಲ್ಲಿ ಆಗ್ರಹಪೂರ್ವಕ ವಿನಂತಿ ಮಾಡುತ್ತಿದ್ದೇವೆ.
ನಾವು ಹಿಂದೂಗಳಿಗೆ ದೈವನಂಬಿಕೆಯೇ ಅಂತಿಮ. ವ್ಯಕ್ತಿಗಳು ದೈವಕ್ಕೆ ಮಿಗಿಲಾದವರಲ್ಲ ಎಂಬುದನ್ನು ನಾವು ನಂಬಿಕೊಂಡು ಬಂದಿದ್ದೇವೆ. ದೈವಕ್ಕೆ ಅವಮಾನ ಮಾಡುವುದು ಹಿಂದೂ ಧರ್ಮಕ್ಕೆ ಅವಮಾನ ಮಾಡಿದಂತೆ. ಹಿಂದೂ ಧರ್ಮದ ಪರಿಶಿಷ್ಟ ಜಾತಿಯ ನಿರ್ದಿಷ್ಟ ಸಮುದಾಯ ಮಾತ್ರ ದೈವಚಾಕಿರಿ ಮಾಡಲು ಅಧಿಕೃತ ಅಧಿಕಾರ ಹೊಂದಿದ್ದಾರೆ. ದೈವಕ್ಕೆ ಅಪಮಾನ ಮೂಡುವ ಮೂಲಕ ಪರಿಶಿಷ್ಟ ಜಾತಿಗೆ ಅವಮಾನ ಮಾಡುತ್ತಿದ್ದಾರೆ. ಹೀಗಾಗಿ ಮೇಲೆ ಕಾಣಿಸಿದ ಎಲ್ಲಾ ವ್ಯಕ್ತಿಗಳ ವಿರುದ್ಧ ದಲಿತ ದೌರ್ಜನ್ಯ ನಿಯಮದಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸುತ್ತಿದ್ದೇವೆ.
ಮೇಲೆ ಸೂಚಿಸಲಾಸ ವ್ಯಕ್ತಿಗಳು ದೈವಕ್ಕೆ ನಿಂದನೆ ಮಾಡಿರುವುದಕ್ಕೆ ಫೋಟೋ, ವಿಡಿಯೋಲಗತ್ತಿಸಲಾಗಿದೆ.
ತುಳುನಾಡು ದೈವಾರಾಧನೆ ಸಂರಕ್ಷಣಾ ವೇದಿಕೆ, ಮಂಗಳೂರು
ದೈವಾರಾಧನಾ ಸಮಿತಿ, ಬೆಳ್ತಂಗಡಿ
ಹಿಂದೂ ಸಂರಕ್ಷಣಾ ಸಮಿತಿ, ಮಂಗಳೂರು
ಸಮಸ್ತ ದೈವಾರಾಧಕರು, ದಕ್ಷಿಣ ಕನ್ನಡ ಜಿಲ್ಲೆ