ಉಡುಪಿ: ತಾಂತ್ರಿಕ ದೋಷವಿದ್ದ ಮಿಕ್ಸಿ ಮಾರಾಟ- ಪರಿಹಾರಕ್ಕೆ ಆದೇಶ
ಉಡುಪಿ : ತಾಂತ್ರಿಕ ದೋಷವಿದ್ದ ಮಿಕ್ಸರ್ ಡ್ರೈಂಡರ್ ಮಾರಾಟ ಮಾಡಿ ಹೊಸ ಉಪಕರಣ ಬದಲಿಸಲು ಒಪ್ಪದೇ ಇದ್ದ ಕಾರಣಕ್ಕಾಗಿ ಗ್ರಾಹಕರಿಗೆ ಪರಿಹಾರ ನೀಡುವಂತೆ ಉಡುಪಿಯ ಪೈ ಇಂಟರ್
ನ್ಯಾಶನಲ್ ಹಾಗೂ ಪ್ರೀತಿ ಕಿಚನ್ ಅಪ್ಲೈಯನ್ಸ್ ಪ್ರೈ.ಲಿಮಿಟೆಡ್ ಗೆ ಉಡುಪಿ ಜಿಲ್ಲಾ ಗ್ರಾಹಕರ
ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ.
ಉಪನ್ಯಾಸಕಿ ಅನಿತಾ ಎಂಬವರು ಮಿಕ್ಸಿ ಖರೀದಿಯಲ್ಲಿ ತಮಗಾದ ಅನ್ಯಾಯದ ಬಗ್ಗೆ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ದೂರನ್ನು ಪರಿಶೀಲಿಸಿ ಉಪನ್ಯಾಸಕಿಯ ಪರ ತೀರ್ಪು ನೀಡಿದ ಆಯೋಗ , ಗ್ರಾಹಕರು ಖರೀದಿಸಿದ್ದ ಮಿಕ್ಸಿಯ ದರ, ಅದರ ಬಡ್ಡಿಯ ಮೊತ್ತ ಅವರ ಕೆಲಸದಲ್ಲಾದ ತೊಂದರೆ, ಮಾನಸಿಕ ಮತ್ತು ದೈಹಿಕ ಶ್ರಮ, ಓಡಾಟದ ಖರ್ಚು ಕೋರ್ಟ್ ವ್ಯವಹಾರದ ಖರ್ಚು ಹೀಗೆ ಒಟ್ಟು 20,189 ರೂ. ನೀಡಬೇಕೆಂದು ಆಯೋಗದ ಅಧ್ಯಕ್ಷ ಸುನೀಲ ಮಾಸರೆಡ್ಡಿ ಆದೇಶ ಹೊರಡಿಸಿದ್ದಾರೆ.
ಈ ಪ್ರಕರಣ ದಾಖಲಿಸಲು ಉಪನ್ಯಾಸಕಿ ಸುಜಾತಾ ಸುಧೀರ್, ನ್ಯಾಯವಾದಿಗಳಾದ ವಿದ್ಯಾ ಭಟ್,
ಅಂಜಲಿನ್, ಜಯಶ್ರೀ ಶೆಟ್ಟಿ ಹಾಗೂ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಿಬಂದಿ
ಸಹಕರಿಸಿದ್ದಾರೆ.
ಉಪನ್ಯಾಸಕಿ ಅನಿತಾ ಎರಡು ವರ್ಷಗಳ ಹಿಂದೆ ಉಡುಪಿ, ಇಂಟರ್ ನ್ಯಾಶನಲ್‌ನಲ್ಲಿ 4,239ರೂ.
ಗಳನ್ನು ನೀಡಿ ಪ್ರೀತಿ ಮಿಕ್ಸರ್ ಗೈಂಡರ್ ಖರೀದಿಸಿದ್ದರು. ಆದರೆ ಮೂರೇ ತಿಂಗಳಲ್ಲಿ ಅದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಮಿಕ್ಸಿಗೆ ಎರಡು ವರ್ಷಗಳ ಗ್ಯಾರಂಟಿ ಮತ್ತು 5 ವರ್ಷಗಳ ವಾರೆಂಟಿ
ಇರುವುದರಿಂದ ಹೊಸ ಮಿಕ್ಸಿ ಕೊಡುವಂತೆ ಗ್ರಾಹಕಿ ಮನವಿ ಮಾಡಿದ್ದರು. ಆದರೆ ಪೈ ಇಂಟರ್
ನ್ಯಾಷನಲ್ ನವರು ಬದಲಿ ಮಿಕ್ಸಿಯನ್ನು ಕೊಡಲು ಒಪ್ಪದೇ ಅದೇ ಮಿಕ್ಸಿಯನ್ನು ಸರಿಪಡಿಸಿ ಕೊಟ್ಟಿದ್ದರು
ಅದರ ಅನಂತರವೂ ಮೂರು ತಿಂಗಳಿಗೊಮ್ಮೆ ಮಿಕ್ಸಿಯಲ್ಲಿ ತಾಂತ್ರಿಕ ತೊಂದರೆಗಳು
ಕಾಣಿಸಿಕೊಂಡಿದ್ದವು. ಬದಲಿ ಮಿಕ್ಸಿ ಕೊಡಲು ಒಪ್ಪದಿದ್ದಾಗ ಗ್ರಾಹಕಿ ಅನಿತಾ,ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪೈ ಇಂಟರ್ ನ್ಯಾಶನಲ್ ಹಾಗೂ ಪ್ರೀತಿ ಕಿಚನ್ ವಿರುದ್ಧ ದಾವೆ ಹೂಡಿದ್ದರು.