ಅಕ್ರಮ ಜಾನುವಾರು ಸಾಗಾಟ : ಇಬ್ಬರ ಬಂಧನ

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಸಮೀಪ ಪುಣಚ ಗ್ರಾಮದ ಕೊಲ್ಲಪದವು ಸಾರ್ವಜನಿಕ ಬಸ್ಸು ನಿಲ್ದಾಣದ ಬಳಿ ವಿಟ್ಲ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದಾಗ ಅಕ್ರಮ ದನ ಸಾಗಾಟ ಪತ್ತೆಯಾದ ಘಟನೆ ನಡೆದಿದೆ.
ಆಮ್ನಿ ಕಾರಿನಲ್ಲಿ ಹಿಂಸಾತ್ಮಕವಾಗಿ ಗಂಡು ಕರುವನ್ನು ಸಾಗಿಸುತ್ತಿದ್ದ ಆರೋಪಿಗಳಾದ ನಾರಾಯಣ ನಾಯ್ಕ ಮತ್ತು ಸಂತೋಷ ಕುಮಾರ್‌ನನ್ನು ವಿಟ್ಲ ಪೊಲೀಸರು ಬಂಧಿಸಿದ್ದು, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗ್ಗೆ ಗಂಟೆ 5.15ಕ್ಕೆ ಶರವು ಕಡೆಯಿಂದ ಸಾರಡ್ಕ ಕಡೆಗೆ ಜಾನು ವಾರುಗಳನ್ನು ಕಾರಿನಲ್ಲಿ ತುಂಬಿಸಿ ಅದರ ಕುತ್ತಿಗೆಗೆ ಮತ್ತು ಕಾಲುಗಳಿಗೆ ಹಗ್ಗದಿಂದ ಹಿಂಸಾತ್ಮಕ ರೀತಿಯಲ್ಲಿ ಬಿಗಿದು ಕಟ್ಟಿ ಮಾಂಸ ಮಾಡುವ ಉದ್ದೇಶಕ್ಕಾಗಿ ಕೇರಳ ಕಡೆಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಪೊಲೀಸರಾದ ಪ್ರಸನ್ನ ಕುಮಾರ್ ಮತ್ತು ಇಲಾಖಾ ಜೀಪು ಚಾಲಕ ಸಂತೋಷ ಕುಮಾರ್ ಅವರೊಂದಿಗೆ ವಿಟ್ಲ ಪೇಟೆ, ಚಂದಳಿಕೆ, ಮಂಗಳಪದವು ಸಾಲೆತ್ತೂರು, ಉಕ್ಕುಡ, ಕುದ್ದುಪದವು ಕಡೆಗಳಲ್ಲಿ ರಾತ್ರಿ ರೌಂಡ್ಸ್ ನಲ್ಲಿದ್ದಾಗ ಈ ಪ್ರಕರಣ ಬಯಲಾಗಿದೆ.
ವಶಪಡಿಸಿಕೊಂಡಿರುವ ಸೊತ್ತುಗಳ ಅಂದಾಜು ಮೌಲ್ಯ 1,52,000 ರೂ. ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪೊಲೀಸರು ಬಂಧಿತ ಆರೋಪಿಗಳ ವಿಚಾರಣೆ ನಡೆಸಿದ್ದಾರೆ.