ಕರಾವಳಿ

ನಾರಾಯಣ ಗುರುಗಳ ತತ್ವದರ್ಶ ಪಾಲಿಸಿ, ವಿಶ್ವಶಾಂತಿಗೆ ಮುಂದಡಿಯಿಡಬೇಕು : ಸಚಿವ ಸುನಿಲ್ ಕುಮಾರ್

ಉಡುಪಿ: ಎಲ್ಲಾ ಧರ್ಮಗಳು ಮನುಷ್ಯನ ಒಳಿತನ್ನೇ
ಬಯಸುತ್ತವೆ ಎಂಬ ನಾರಾಯಣಗುರುಗಳ ಸಂದೇಶ ಅರಿಯುವ ಮೂಲಕ ವಿಶ್ವದಾದ್ಯಂತ ವಿವಿಧ ಧರ್ಮಗಳ ನಡುವೆ ನಡೆಯುತ್ತಿರುವ ವಾದವನ್ನು ಕೊನೆಗಾಣಿಸಿ, ವಿಶ್ವಶಾಂತಿ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಅವರು ಬನ್ನಂಜೆಯ ನಾರಾಯಣಗುರು ಸಭಾಭವನದಲ್ಲಿ,
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು
ಸಂಸ್ಕೃತಿ ಇಲಾಖೆ ಮತ್ತು ಬಿಲ್ಲವರ ಸೇವಾ ಸಂಘ (ರಿ) ಬನ್ನಂಜೆ ಅವರ ಸಹಯೋಗದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮತನಾಡಿದರು.

ಧರ್ಮಗಳ ಮೂಲ ಉದ್ದೇಶ ಮನುಷ್ಯನಿಗೆ ಒಳಿತನ್ನು ಮಾಡುವ ಮೂಲಕ ವಿಶ್ವಶಾಂತಿ ಮೂಡಿಸುವುದು ಮಾತ್ರವಾಗಿದ್ದು, ಧರ್ಮಗಳ ನಡುವೆ ವಾದ ಸೃಷ್ಟಿಸಲು ಅಥವಾ ವಿಜಯ ಸಾಧಿಸುವುದಲ್ಲ ಎಂಬ ನಾರಾಯಣ ಗುರುಗಳ ಸಂದೇಶವನ್ನು ಅರ್ಥಮಾಡಿಕೊಂಡು ಆ ಧರ್ಮದ ನೆಲೆಯಲ್ಲಿ ಎಲ್ಲರೂ ನಡೆಯುವುದು ಇಂದಿನ ಪ್ರಸ್ತುತ ಅತ್ಯಗತ್ಯವಾಗಿದೆ. ಶಿಕ್ಷಣದ ಮೂಲಕ ಬಲಯುತವಾಗಿ ಎಂಬ ಅವರ ಸಂದೇಶದಂತೆ ಎಲ್ಲರೂ
ಉತ್ತಮ ಶಿಕ್ಷಣ ಪಡೆಯಬೇಕು ಎಂದರು.

ನಾರಾಯಣ ಗುರುಗಳು ಸಮಾನತೆಯಿಂದ ಕೂಡಿದ ಸಮಾಜ ನಿರ್ಮಾಣ ಮಾಡಲು ತನ್ನ ಆದರ್ಶಗಳ ಮೂಲಕ ಸಮಾಜದಲ್ಲಿ ಅತ್ಯಂತ ದೊಡ್ಡ ಬದಲಾವಣೆಯನ್ನು ಮಾಡಿದ್ದರು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯದ ಎಲ್ಲಾ ದಾರ್ಶನಿಕರ ಮತ್ತು ಮಹನೀಯರ ರಾಜ್ಯಮಟ್ಟದ ಜಯಂತಿಗಳನ್ನು ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸದೇ, ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಈ ಬಾರಿಯ ನಾರಾಯಣ ಗುರು ಜಯಂತಿಯ ರಾಜ್ಯಮಟ್ಟದ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ನಡೆಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ನಾರಾಯಣ ಗುರುಗಳ ಸಂದೇಶ ಮತ್ತು ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು ಸಮಾಜದಲ್ಲಿ ಸಮಾನತೆಯ ನಿರ್ಮಾಣಕ್ಕೆ ಅತ್ಯಂತ ಅಗತ್ಯವಾಗಿದೆ. ವ್ಯಕ್ತಿಯನ್ನು ಯಾವುದೇ ಜಾತಿಯಿಂದ ಅಳೆಯದೇ ಆತನ ವ್ಯಕ್ತಿತ್ವದಿಂದ ಗುರುತಿಸಬೇಕು, ಒಂದೇ ಜಾತಿ ಒಂದೇ ಮತ ಎಂಬ ಸಂದೇಶವನ್ನು ಎಲ್ಲರೂ ಪಾಲಿಸಬೇಕು ಎಂದರು.

ನಾರಾಯಣ ಗುರುಗಳ ಕುರಿತು ಉಪನ್ಯಾಸ ನೀಡಿದ ಹಿರಿಯಡ್ಕ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ನಳಿನಾದೇವಿ ಮಾತನಾಡಿ, ಮಹಾ ಮಾನವತಾವಾದಿ, ದಾರ್ಶನಿಕ, ಆಧ್ಯಾತ್ಮಿಕ ಸಾಧಕರಾಗಿದ್ದ ನಾರಾಯಣ ಗುರುಗಳು ಸಮಾಜದಲ್ಲಿ ಸಮಾನತೆ ನಿರ್ಮಾಣಕ್ಕಾಗಿ, ಕೆಳವರ್ಗದ ಜನರಿಗಾಗಿ ದೇವಾಲಯಗಳನ್ನು ನಿರ್ಮಿಸಿದ್ದರು. ವಿದ್ಯೆಯಿಂದ ವ್ಯಕ್ತಿಯ ಬದುಕು ಶ್ರೀಮಂತವಾಗಲಿದೆ ಎಂದು ಸಮಾಜದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು.

ಸರಳ ವಿವಾಹ, ವಿಧವಾ ವಿವಾಹಗಳನ್ನು ಪ್ರೋತ್ಸಾಹಿಸಿದ್ದ ಅವರು ಬಾಲ್ಯ ವಿವಾಹ, ಮದ್ಯಪಾನವನ್ನು ವಿರೋಧಿಸಿದ್ದರು. ಇವರ ತತ್ವ ಆದರ್ಶಗಳನ್ನು ತಿಳಿದ ಮಹಾತ್ಮ ಗಾಂಧೀಜಿ ಮತ್ತು ಅಚಾರ್ಯ ವಿನೋಬಾ ಭಾವೆ ಇವರನ್ನು ಭೇಟಿ ಮಾಡಿ ಚರ್ಚಿಸಿದ್ದರು ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭಾ ಸದಸ್ಯೆ ಸವಿತಾ ಹರೀಶ್ ರಾಮ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಉಡುಪಿ ತಹಸೀಲ್ದಾರ್‌ ಶ್ರೀನಿವಾಸಮೂರ್ತಿ, ಬಿಲ್ಲವರ ಸೇವಾ ಸಂಘ (ರಿ) ಬನ್ನಂಜೆಯ ಅಧ್ಯಕ್ಷ ಆನಂದ ಪೂಜಾರಿ ಕಿದಿಯೂರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಅಮಿತಾಂಜಲಿ ನಿರೂಪಿಸಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!