ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನ ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದ ಮೂವರು ವಿಧ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ!

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನಿಂದ ನಾಪತ್ತೆಯಾಗಿದ್ದ ಮೂವರು ವಿಧ್ಯಾರ್ಥಿನಿಯರು ಸೆ.23ರಂದು ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ. ಚೆನ್ನೈನಲ್ಲಿ ಪತ್ತೆಯಾದ ಮೂವರು ವಿದ್ಯಾರ್ಥಿನಿಯರನ್ನು ಪೊಲೀಸರು ಮಂಗಳೂರಿಗೆ ಕರೆತಂದಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕಮಿಷನರ್, ಚಿತ್ರದುರ್ಗದ ಒಬ್ಬರು ಮತ್ತು ಬೆಂಗಳೂರಿನ ಇಬ್ಬರು ಮೂವರು ಹುಡುಗಿಯರು ಸೆಪ್ಟೆಂಬರ್ 21 ರಂದು ತಮ್ಮ ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದು ಸಿಸಿಟಿವಿ ಫೂಟೇಜ್‌ನಲ್ಲಿ ಮೂವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದ್ದು, ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು.
ಈ ಮೂವರು ವಿದ್ಯಾರ್ಥಿನಿಯರು ಕಾಲೇಜು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಅಸಮಾಧಾನಗೊಂಡಿದ್ದು,ಕಳೆದ ಬುಧವಾರ ಬೆಳಗ್ಗಿನ ಹೊತ್ತು ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದರು.ಅವರು ಹಾಸ್ಟೆಲ್‌ನಿಂದ ಹೊರಟು ಮಂಗಳೂರು ರೈಲ್ವೇ ಸ್ಟೇಷನ್‌ವರೆಗೆ ತೆರಳಿದ್ದ ಮಾಹಿತಿ ಲಭ್ಯವಾಗಿದ್ದು,ಮಂಗಳೂರಿನಿಂದ ರೈಲಿನ ಮೂಲಕ ಕೊಯಂಬತ್ತೂರು ತೆರಳಿದ್ದರು. ಕೊಯಂಬತ್ತೂರಿನಿಂದ ಬಸ್ ಮೂಲಕ ಪಾಂಡಿಚೇರಿಗೆ ಪ್ರಯಾಣ ಬೆಳಸಿ, ಮತ್ತೆ ಪಾಂಡಿಚೇರಿಯಿಂದ ವಾಪಸ್ ಚೆನೈಗೆ ಬಂದಿದ್ದರು.
ಮಾಹಿತಿ ಮೇರೆಗೆ ಪೊಲೀಸ್ ಅಧಿಕಾರಿಗಳು ಕಾಲೇಜು ಆಡಳಿತ ಮಂಡಳಿ ಹಾಗೂ ಪೋಷಕರ ಜತೆ ಮಾತುಕತೆ ನಡೆಸಿ ಮಕ್ಕಳ ಹುಡುಕಾಟ ನಡೆಸಿದ್ದು, ಇದೀಗ ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ.ಪೋಷಕರು ತಮಗೆ ಖರ್ಚಿಗೆ ನೀಡಿದ್ದ ಹಣವನ್ನೇ ತಮ್ಮ ಪ್ರಯಾಣಕ್ಕೆ ಬಳಸಿಕೊಂಡಿದ್ದಾರೆ ಎಂದರು.
ಪಿಯು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ನಿಗಾ ಇಡುವಂತೆ ನಾನು ಶಿಕ್ಷಕರು ಮತ್ತು ಪೋಷಕರಲ್ಲಿ ಕೇಳಿಕೊಳ್ಳುತ್ತೇನೆ. 3 ತಿಂಗಳಿಗಿಂತ ಹೆಚ್ಚು ಕಾಲ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಪೋಷಕರಿಗೆ ಅನುಮತಿ ನೀಡದ ಕೆಲವು ಸಂಸ್ಥೆ ಇದೆ. ಹಾಗಾಗಿ ಅಂತಹ ಸಂಸ್ಥೆಗಳು ಪೋಷಕರು ತಮ್ಮ ಮಕ್ಕಳನ್ನು ತಿಂಗಳಿಗೊಮ್ಮೆ ಭೇಟಿಯಾಗಲು ಅನುಮತಿ ನೀಡಬೇಕು ಎಂದು ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.