ಗಾಂಜಾ ಮಾರಾಟ ಪ್ರಕರಣ : ಆರೋಪಿಗೆ 50 ಸಾವಿರ ರೂ. ದಂಡ 3 ವರ್ಷ ಶಿಕ್ಷೆ !

ಉಡುಪಿ: ಗಾಂಜಾ ಮಾರಾಟ ಪ್ರಕರಣದ ಬಂಧಿತ ಆರೋಪಿಗೆ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಅಗರ್ ವಾಹಿ ಗ್ರಾಮದ ಅವಿನಾಶ್ ದಿಗಂಬರ್ ಲೋಖಂಡೆ ಶಿಕ್ಷೆಗೊಳಗಾದ ಅಪರಾಧಿ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿದ ಸೆನ್ ಅಪರಾಧ ಠಾಣೆಯ ಪೊಲೀಸರು 2020 ರ ಮಾ. 23 ರಂದು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಬಳಿಕ ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಪ್ರಧಾನ ಜಿಲ್ಲಾ ತಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಚಶಾಂತಿವೀರ ಶಿವಪ್ಪ ಅವರು ಅಪರಾಧಿಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ಹಾಗೂ ದಂಡ ವಿಧಿಸಲು ವಿಫಲಗೊಂಡಲ್ಲಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದ್ದಾರೆ.
ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಶಾಂತಿಭಾಯಿ ವಾದ ಮಂಡಿಸಿದ್ದಾರೆ.
2019 ರ ಜು. 24 ರಂದು ಉಡುಪಿಯ ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೇ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡಲು ನಿಂತಿದ್ದ ವೇಳೆ ಉಡುಪಿ ಸೆನ್ ಅಪರಾಧ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ಬಳಿ ಇದ್ದ ಸುಮಾರು 40, 000 ಮೌಲ್ಯದ 2 ಕಿಲೋ 20 ಗ್ರಾಂ ತೂಕದ ಗಾಂಜಾವನ್ನು ಮತ್ತು ಮೊಬೈಲ್ ಫೋನನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದರು.