ಕರಾವಳಿ

ಮಾಹೆ ಗಾಂಧಿಯನ್ ಸೆಂಟರಿನಲ್ಲಿ ಗಾಂಧಿ ಜಯಂತಿ ಆಚರಣೆ

ಮಣಿಪಾಲ: ಜಾತಿ, ಧರ್ಮ, ಬಣ್ಣ, ಜನಾಂಗ ಇತ್ಯಾದಿ
ತಾರತಮ್ಯದಿಂದ ಮುಕ್ತವಾದ ಮತ್ತು ಶಾಂತಿ, ಸಮಾನತೆ,
ಅಹಿಂಸೆ ಮತ್ತು ಸಹಿಷ್ಣುತೆಯ ಮೇಲೆ ಆಧರಿತವಾದ
ಗಾಂಧಿಯ ಪ್ರಾಪಂಚಿಕ ದೃಷ್ಟಿ ಮತ್ತು ಪ್ರಪಂಚ ಬೇಕು
ಎಂದು ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.
ಎಂ.ಡಿ.ವೆಂಕಟೇಶ್ ಪ್ರತಿಪಾದಿಸಿದರು.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್
ಆರ್ಟ್ಸ್ ಅಂಡ್ ಸೈನ್ಸಸ್ ಆಯೋಜಿಸಿದ್ದ ಗಾಂಧಿ ಜಯಂತಿ
ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ಮಹಾತ್ಮಾಗಾಂಧೀಜಿಯವರು ಆದರ್ಶಪ್ರಾಯವಾದ
ಜೀವನ ನಡೆಸಿದವರು ಮತ್ತು ಅವರ ಆದರ್ಶಗಳ ಒಂದು
ಭಾಗವನ್ನು ನಾವು ಅನುಸರಿಸಿದರೂ ಜಗತ್ತು
ಉತ್ತಮವಾಗಿರುತ್ತದೆ. ಅವರದ್ದು ಅತ್ಯಂತ ಸ್ಪೂರ್ತಿದಾಯಕ ನಾಯಕತ್ವ, ಅವರ ಅನುಕರಣೀಯ ಸಾಮೂಹಿಕ ಚಳುವಳಿಗಳು ಮತ್ತು ಸತ್ಯಾಗ್ರಹದಿಂದಲೇ ದೇಶದ ಸ್ವಾತಂತ್ರ್ಯವನ್ನು ಸಾಧ್ಯವಾಗಿಸಿದರು ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಮಗಧ ವಿಶ್ವವಿದ್ಯಾಲಯದ
ಪ್ರೊ.ಅಶೋಕ್ ಕುಮಾರ್ ಸಿನ್ಹಾ ಅವರು ಸಮಾನ ಮತ್ತು
ಸುಸ್ಥಿರ ಅಭಿವೃದ್ಧಿ ಆಧಾರಿತ ಗಾಂಧಿಯವರ ಅರ್ಥಶಾಸ್ತ್ರದ
ಅಗತ್ಯವನ್ನು ಒತ್ತಿ ಹೇಳಿದರು. ದುರಾಸೆ ಆಧಾರಿತ
ಆರ್ಥಿಕತೆಗಿಂತ ಅಗತ್ಯ ಆಧಾರಿತ ಆರ್ಥಿಕತೆ ರಾಷ್ಟ್ರದ
ತಾತ್ವಿಕ ಆಧಾರವಾಗಿರಬೇಕು ಎಂದು ಅವರು ಹೇಳಿದರು.

ಗಾಂಧೀಜಿ ಅವರ ತತ್ವಗಳನ್ನು ಕಲೆಯೊಂದಿಗೆ ಸಮೀಕರಿಸಿ
ಮಾತನಾಡಿದ ಇನ್ನೋರ್ವ ಅತಿಥಿ ಡಾ.ಶೋಭಾ ಕಾಮತ್,
ಕಲೆಯನ್ನು ಜೀವನದಲ್ಲಿ ಉನ್ನತ ಉದ್ದೇಶಕ್ಕಾಗಿ ಗಾಂಧಿ
ಉಪಯೋಗಿಸಿದ್ದರು. ಚಲನಚಿತ್ರ, ವರ್ಣಚಿತ್ರ, ಸಾಹಿತ್ಯ,
ರಂಗಭೂಮಿ, ಸಂಗೀತ ಮತ್ತು ನೃತ್ಯದಂತಹ ವಿವಿಧ ಕಲಾ
ಪ್ರಕಾರಗಳಲ್ಲಿ ಅವರ ತತ್ವವು ಪ್ರಕಟವಾಗುತ್ತದೆ ಮತ್ತು
ಸ್ಫೂರ್ತಿ ನೀಡುತ್ತದೆ ಎಂದರು.

ಗಾಂಧಿ ಸೆಂಟರಿನ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ
ಮಾತನಾಡಿ, ಶಿಕ್ಷಣವು 3ಎಚ್ – ಹೆಡ್, ಹಾರ್ಟ್ ಅಂಡ್
ಹ್ಯಾಂಡ್ ಗಾಂಧಿ ತತ್ವವನ್ನು ಆಧರಿಸಿರಬೇಕು. ಜಿಸಿಪಿಎಎಸ್ ಪ್ರತಿಪಾದಿಸುವ ಪರಿಸರ, ಸೌಂದರ್ಯಶಾಸ್ತ್ರ ಮತ್ತು ಶಾಂತಿಯನ್ನು ಈ 3ಎಚ್ ತತ್ವದಿಂದಲೇ ಪಡೆಯಲಾಗಿದೆ ಎಂದು ಅವರು ಉಲ್ಲೇಖಿಸಿದರು.

ಜಿಸಿಪಿಎಎಸ್ ವಿದ್ಯಾರ್ಥಿಗಳು ಸಂಗೀತ (ಶ್ರಾವ್ಯ ಬಾಸಿ), ನೃತ್ಯ (ಅಪೂರ್ವ ಕೆ.ಎಸ್., ಶಿಖಾ ರಾಣಾ), ವರ್ಣಚಿತ್ರ (ಅಪರ್ಣ ಪರಮೇಶ್ವರನ್) ಚಲನಚಿತ್ರಗಳ (ಸಂಪದ ಭಾಗವತ್) ಮೂಲಕ ಗಾಂಧಿ ವಂದನೆಯನ್ನು ಆಯೋಜಿಸಿದರು ಮತ್ತು ಶಾಂತಿಯ ವಿವಿಧ ಆಯಾಮಗಳ ಕುರಿತು ಪ್ರಬಂಧಗಳನ್ನು (ಚಿನ್ಮಯಿ ಬಾಳರ್, ವೆಲಿಕಾ, ಸುಹಾನಿ ರಜಪೂತ್, ಆಲಿಸ್ ಚೌಹಾನ್) ಮಂಡಿಸಿದರು.

ಜಿಸಿಪಿಎಎಸ್ ವಿದ್ಯಾರ್ಥಿಗಳು ನಡೆಸಿದ ಚಟುವಟಿಕೆಗಳಲ್ಲಿ
ವಿಜೇತರಾದ ಅಕಾಡೆಮಿ ಪ್ರಾಥಮಿಕ ಶಾಲೆಯ ಮಕ್ಕಳು
ಬಹುಮಾನ ಸ್ವೀಕರಿಸಿದ ಇದೇ ಸಂದರ್ಭದಲ್ಲಿ
ಜಿಸಿಪಿಎಎಸ್ ವಿದ್ಯಾರ್ಥಿ ಸಮಿತಿಗಳನ್ನು ಉದ್ಘಾಟಿಸಲಾಯಿತು. ತದನಂತರ ಮಣಿಪಾಲದ
ತಪೋವನ ಸಹಯೋಗದಲ್ಲಿ ಧಾರವಾಡದ ಗೊಂಬೆಮನೆ
ತಂಡದವರಿಂದ ಮಹಾತ್ಮಗಾಂಧೀಜಿಯವರ ಕುರಿತ
ತೊಗಲು ಬೊಂಬೆ ನಾಟಕ ಪ್ರದರ್ಶನಗೊಂಡಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!