ರಾಷ್ಟ್ರೀಯ

ಹಿಜಾಬ್ ನಿರ್ಬಂಧ:ಸುಪ್ರೀಂಕೋರ್ಟ್ ಪೀಠದಿಂದ ಭಿನ್ನತೀರ್ಪು:ಮುಖ್ಯ ನ್ಯಾಯಮೂರ್ತಿ ಪೀಠಕ್ಕೆ ವರ್ಗಾವಣೆ

ನವದೆಹಲಿ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ ದ್ವಿಸದಸ್ಯ ಪೀಠದ ನ್ಯಾಯಾಧೀಶರು ಭಿನ್ನತೀರ್ಪು ನೀಡಿರುವುದರಿಂದ ಪ್ರಕರಣವನ್ನು ಬೇರೆ ಪೀಠಕ್ಕೆ ವರ್ಗಾಯಿಸಲಾಗಿದೆ.

ಮೇಲ್ಮನವಿಯನ್ನು ನ್ಯಾಯಮೂರ್ತಿ ಹೇಮಂತ್ ಗುಪ್ತಾ
ವಜಾಗೊಳಿಸಿದರೆ, ಸುಧಾಂಶು ಧುಲಿಯಾ ಅವರು ಹಿಜಾಬ್ ನಿರ್ಬಂಧ ಕುರಿತು ಸರ್ಕಾರದ ಆದೇಶವನ್ನು ವಜಾಗೊಳಿಸಿ ತೀರ್ಪು ನೀಡಿದ್ದಾರೆ. ಧಾರ್ಮಿಕ ಹಕ್ಕು ಮತ್ತು ಆಯ್ಕೆ ಸ್ವಾತಂತ್ರ್ಯದ ವಿಷಯದಲ್ಲಿ ಹೈಕೋರ್ಟ್ ತಪ್ಪು ಅಭಿಪ್ರಾಯ ವ್ಯಕ್ತಪಡಿಸಿದೆ. ಹಿಜಾಬ್ ಎಂಬುದು ವಿದ್ಯಾರ್ಥಿನಿಯರ ಆಯ್ಕೆ ಪ್ರಶ್ನೆಯಾಗಿದೆ ಎಂದು ನ್ಯಾಯಮೂರ್ತಿ ಧುಲಿಯಾ ಹೇಳಿದರು.

ಅಗತ್ಯ ಧಾರ್ಮಿಕ ಆಚರಣೆ ಕುರಿತು ಚಿಂತಿಸುವಅಗತ್ಯವಿಲ್ಲ ಮತ್ತು ನ್ಯಾಯಾಲಯ (ಕರ್ನಾಟಕ ಹೈಕೋರ್ಟ್) ತಪ್ಪು ಹೆಜ್ಜೆ ಇರಿಸಿದೆ. ನನಗೆ ಹೆಣ್ಣು ಮಗುವಿನ ಶಿಕ್ಷಣವೇ ಉನ್ನತ ಆದ್ಯತೆಯ ವಿಚಾರ ಎಂದು ನ್ಯಾಯಮೂರ್ತಿ ಧುಲಿಯಾ ಹೇಳಿದರು.

ನಾನು ಕರ್ನಾಟಕ ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸುತ್ತಿದ್ದು (ರಾಜ್ಯ) ಸರ್ಕಾರದ ಆದೇಶವನ್ನು ರದ್ದುಗೊಳಿಸುತ್ತಿದ್ದೇನೆ ಎಂದು ಧುಲಿಯಾ ಹೇಳಿದರು.
ಆದರೆ ಮೇಲ್ಮನವಿಯನ್ನು ನ್ಯಾಯಮೂರ್ತಿ ಹೇಮಂತ್‌ಗುಪ್ತಾ ವಜಾಗೊಳಿಸುವುದಾಗಿ ಹೇಳಿ ತೀರ್ಪು ನೀಡಿದರು.

ಮಾರ್ಚ್ 15ರಂದು ಉಡುಪಿಯ ಸರ್ಕಾರಿ ಪದವಿಪೂರ್ವ
ಮಹಿಳಾ ಕಾಲೇಜಿನ ಮುಸ್ಲಿಮ್ ವಿದ್ಯಾರ್ಥಿನಿಯರು
ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು, ಅಲ್ಲದೆ ಹಿಜಾಬ್ ಇಸ್ಲಾಮಿನ ಅಗತ್ಯಭಾಗವಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಉಡುಪಿ ಸರ್ಕಾರಿ ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಹಾಗೂ ಕೆಲವು ಮುಸ್ಲಿಮ್ ಸಂಘಟನೆಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದವು.

ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು, ಈ ಪ್ರಕರಣದ ಸುದೀರ್ಘ ವಾದ ವಿವಾದವನ್ನು ಆಲಿಸಿ ತೀರ್ಪನ್ನು ಕಾಯ್ದಿರಿಸಿತ್ತು.

ಅರ್ಜಿದಾರರ ಪರವಾಗಿ ಸಂಜಯ್ ಹೆಗ್ಡೆ, ರಾಜೀವ್ ಧವನ್, ದುಶ್ಯಂತ್ ದವೆ, ಯೂಸುಫ್ ಮುಚ್ಚಲ, ಎಂ ಆರ್ ಶಂಶದ್, ಸಲ್ಮಾನ್ ಖುರ್ಷಿದ್, ನಿಜಾಂ ಪಾಷಾ, ಪ್ರಶಾಂತ್ ಭೂಷಣ್, ದೇವದತ್ ಕಾಮತ್, ಶೋಯೆಬ್ ಆಲಂ ಹಾಗೂ ವಕೀಲೆ ವಿ ಮೋಹನಾ ವಾದ ಮಂಡಿಸಿದ್ದರು.

ಕರ್ನಾಟಕ ಸರ್ಕಾರದ ಪರವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್‌ಮೆಹ್ರಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ ನಟರಾಜ್ ಹಾಗೂ ಕರ್ನಾಟಕ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!