ಸರಣಿ ಅಪಘಾತ ನಡೆಸಿ ಪರಾರಿಯಾದ ಟೆಂಪೋ ಚಾಲಕನ ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು

ಶಿರ್ವ: ಗುಜರಿ ಸಾಗಿಸುತ್ತಿದ್ದ ಟೆಂಪೋವೊಂದು ಕುತ್ಯಾರು ಸೂರ್ಯಚೈತನ್ಯ ಶಾಲೆಯ ಬಸ್ ತಂಗುದಾಣದ ಬಳಿ ಸರಣಿ ಅಪಘಾತ ನಡೆಸಿ ಬಳಿಕ ಪಲ್ಟಿಯಾದ ಘಟನೆ ಅ.23ರ ಭಾನುವಾರ ಸಂಜೆ ನಡೆದಿದೆ.
ಸರಣಿ ಅಪಘಾತ ನಡೆಸಿದ ಟೆಂಪೋ ಚಾಲಕ ಮುಲ್ಕಿ ಕೊಲ್ನಾಡು ನಿವಾಸಿ ಕಲಂದರ್ ಶಾ ಎಂದು ಗುರುತಿಸಲಾಗಿದೆ.
ಟೆಂಪೋ ಮೊದಲು ಕುತ್ಯಾರು ಉಪ್ಪರಿಗೆ ಮನೆ ತಿರುವಿನ ಬಳಿ ಹೋಂಡಾ ಆಕ್ಟೀವಾಗೆ ಢಿಕ್ಕಿ ಹೊಡೆದಿದ್ದು, ಢಿಕ್ಕಿ ಪರಿಣಾಮ ಆಕ್ಟೀವಾ ಚಾಲಕ ರಫೀಕ್ ಗಾಯಗೊಂಡಿದ್ದಾರೆ. ಸ್ವಲ್ಪ ಮುಂದೆ ಸಂಪತ್‌ಕುಮಾರ್ ಎಂಬವರ ಮನೆ ತಿರುವಿನ ಬಳಿ ಮತ್ತೊಂದು ಹೋಂಡಾ ಆಕ್ಟೀವಾಗೆ ಢಿಕ್ಕಿ ಹೊಡೆದಿದ್ದು, ಈ ವೇಳೆ ಸದಾಶಿವ ಆಚಾರ್ಯ ಎಂಬವರು ಗಾಯಗೊಂಡಿದ್ದಾರೆ. ಮತ್ತು ಅವರ ಸ್ಕೂಟರ್ ಸಂಪೂರ್ಣ ಜಖಂಗೊಂಡಿದೆ.
ಟೆಂಪೋ ಚಾಲಕ ಎರಡು ಸ್ಕೂಟರ್‌ಗಳಿಗೆ ಢಿಕ್ಕಿ ಹೊಡೆದಿದ್ದಾನಾದರೂ ಟೆಂಪೋವನ್ನು ನಿಲ್ಲಿಸದೇ ಸೀದಾ ಹೋಗಿದ್ದಾನೆ. ಆದರೆ ಕುತ್ಯಾರು ಸೂರ್ಯಚೈತನ್ಯ ಶಾಲಾ ಬಸ್ ತಂಗುದಾಣದ ಬಳಿ ಟೆಂಪೋ ಪಲ್ಟಿಯಾಗಿದೆ. ಟೆಂಪೋ ಪಲ್ಟಿಯಾದ ತಕ್ಷಣವೇ ಚಾಲಕ ಮುಲ್ಕಿ ಕೊಲ್ನಾಡು ನಿವಾಸಿ ಕಲಂದರ್ ಶಾ ಅಲ್ಲಿಂದ ಪರಾರಿಯಾಗಿದ್ದು, ಕೂಡಲೇ ಕುತ್ಯಾರು ಗ್ರಾಮಸ್ಥರು ಆತನನ್ನು ಹಿಡಿದು ಶಿರ್ವ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈತ ಪೊಲೀಸರ ಕೈಗೆ ಸಿಕ್ಕಿದ ಕೂಡಲೇ ತನ್ನ ಹೆಸರು ರಾಜೇಶ ಎಂದು ಸುಳ್ಳು ಹೇಳಿದ್ದ. ನಂತರ ಪೊಲೀಸರು ವಿಚಾರಣೆ ನಡೆಸಿದಾಗ ಹೆಸರು ಕಲಂದರ್ ಎಂಬುದಾಗಿ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ