ಡಿಪ್ಲೊಮಾ ಪದವೀಧರರಿಗೆ ಪ್ರಥಮ ಬಾರಿಗೆ ಘಟಿಕೋತ್ಸವ: ಸಚಿವ ಅಶ್ವತ್ಥನಾರಾಯಣ
ಬೆಂಗಳೂರು: ಮೈಸೂರಿನ ಅರಸರಾಗಿ ಕರ್ನಾಟಕವನ್ನು
ಪ್ರಗತಿ ಪಥದ ಮೇಲೆ ಪ್ರತಿಷ್ಠಾಪಿಸಿದ ನಾಲ್ವಡಿ ಕೃಷ್ಣರಾಜ
ಒಡೆಯರ್ ಅವರ ಹೆಸರನ್ನು ಚಿರಸ್ಥಾಯಿಗೊಳಿಸುವ
ಉದ್ದೇಶದಿಂದ ಏಳು ತಾಂತ್ರಿಕ ಶಿಕ್ಷಣ ಕಾಲೇಜುಗಳನ್ನು
ಒಳಗೊಂಡಿರುವ ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್
ಕ್ಯಾಂಪಸ್ಸಿಗೆ ಅವರ ಹೆಸರನ್ನೇ ಇಡಲಾಗುವುದು. ಜತೆಗೆ
ತಾಂತ್ರಿಕ ಶಿಕ್ಷಣ ಆಯುಕ್ತಾಲಯವನ್ನು ಅವರ ಧೈಯಾದರ್ಶ ಮತ್ತು ದೂರದೃಷ್ಟಿಗಳನ್ನು ಪ್ರತಿಬಿಂಬಿಸುವಂತೆ ರೂಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದರು.
ರಾಜ್ಯದ ತಾಂತ್ರಿಕ ಶಿಕ್ಷಣದ ಇತಿಹಾಸದಲ್ಲಿ ಇದೇ ಮೊದಲ
ಬಾರಿಗೆ ನಡೆದ ಡಿಪ್ಲೊಮಾ ಪದವೀಧರರ ಘಟಿಕೋತ್ಸವದಲ್ಲಿ ಅವರು ಬುಧವಾರ ಮಾತನಾಡಿದರು. ಈ ಘಟಿಕೋತ್ಸವಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಇಡಲಾಗಿದೆ.
ಈಗ ನಾಲ್ವಡಿಯವರ ಹೆಸರು ಪಡೆಯಲಿರುವ ಕ್ಯಾಂಪಸ್ಸಿನಲ್ಲಿ ಎಸ್.ಜೆ.ಪಾಲಿಟೆಕ್ನಿಕ್, ಮಹಿಳೆಯರ ಸರಕಾರಿ ಪಾಲಿಟೆಕ್ನಿಕ್, ಜಿಆರ್ ಐಸಿ ಪಾಲಿಟೆಕ್ನಿಕ್, ಎಸ್.ಆರ್.ಸಿ.ಐ.ಬಿ.ಎಂ, ಸರಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆ ಸರಕಾರಿ ಜವಳಿ ತಂತ್ರಜ್ಞಾನ ಸಂಸ್ಥೆ ಮತ್ತು ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಿವೆ. ಇವೆಲ್ಲವೂ ನಾಡಿಗೆ ನಾಲ್ವಡಿಯವರ ಕೊಡುಗೆಗಳಾಗಿವೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ 2022ರಲ್ಲಿ ಡಿಪ್ಲೊಮಾ ತೇರ್ಗಡೆ
ಹೊಂದಿದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ
ನೀಡಲಾಯಿತು. ಜತೆಗೆ, ವಿವಿಧ ವಿಭಾಗಗಳ ಬ್ಯಾಂಕ್
ವಿಜೇತರಿಗೆ ಚಿನ್ನ ಮತ್ತು ಬೆಳ್ಳಿ ಪದಕ ಪ್ರದಾನ ಮಾಡಿ
ಪುರಸ್ಕರಿಸಲಾಯಿತು. ಈ ಮೂಲಕ ಕರ್ನಾಟಕವು
ಡಿಪ್ಲೊಮಾ ಘಟಿಕೋತ್ಸವವನ್ನು ಆರಂಭಿಸಿದ ದೇಶದ
ಮೊಟ್ಟಮೊದಲ ರಾಜ್ಯವೆನ್ನುವ ಮೈಲಿಗಲ್ಲನ್ನು ನೆಟ್ಟಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, 1905ರಲ್ಲಿ
ಮೈಸೂರಿನಲ್ಲಿ ಮೊಟ್ಟಮೊದಲ ತಾಂತ್ರಿಕ ಶಾಲೆ ಸ್ಥಾಪಿಸಿದ
ನಾಲ್ವಡಿಯವರು ಮತ್ತು ನಂತರ ದಿವಾನರಾಗಿ ಬಂದ
ವಿಶ್ವೇಶ್ವರಯ್ಯನವರು ರಾಜ್ಯದ ತಾಂತ್ರಿಕ ಶಿಕ್ಷಣದ
ರೂವಾರಿಗಳಾಗಿದ್ದಾರೆ. ಅವರ ದೂರದೃಷ್ಟಿಯ ಫಲವಾಗಿ
ಇಂದು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ವಿದೇಶಿ
ವಿ.ವಿ.ಗಳೊಂದಿಗೆ ಅತ್ಯಧಿಕ ಒಡಂಬಡಿಕೆಗಳಾಗುತ್ತಿದ್ದು, ದೂರದ ಅಮೆರಿಕದಲ್ಲೂ ಮೆಚ್ಚುಗೆ ಗಳಿಸಿದೆ. ಹೀಗಾಗಿ
ನಾಲ್ವಡಿಯವರ ಹೆಸರಿನಲ್ಲೇ ಈ ಘಟಿಕೋತ್ಸವ ಆಚರಿಸುವ ಸಂಪ್ರದಾಯವನ್ನು ಈ ವರ್ಷದಿಂದ ಆರಂಭಿಸಲಾಗುತ್ತಿದೆ. ಇದರ ಹಿಂದೆ ದೇಶದಾದ್ಯಂತ ವಿಶ್ವಕರ್ಮ ದಿನಾಚರಣೆಯಂದೇ ಐಟಿಐ ಘಟಿಕೋತ್ಸವ ನಡೆಸಲು ಪ್ರಾರಂಭಿಸಿದ ಪ್ರಧಾನಿ ನರೇಂದ್ರ ಮೋದಿಯವರ ಪ್ರೇರಣೆಯೂ ಇದೆ ಎಂದು ಅವರು ಸ್ಮರಿಸಿದರು.
ರಾಜ್ಯದ ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಈಗ ಒಂದು ಲಕ್ಷಕ್ಕೂ
ಹೆಚ್ಚು ವಿದ್ಯಾರ್ಥಿಗಳಿದ್ದು, ಇವರಲ್ಲಿ ಶೇ.30ರಷ್ಟು
ಬಾಲಕಿಯರೇ ಇದ್ದಾರೆ. ಎನ್‌ಇಪಿಗೆ ಅನುಗುಣವಾಗಿ ತಾಂತ್ರಿಕ ಶಿಕ್ಷಣದಲ್ಲಿ ಶೇ.40ರಷ್ಟು ಬೋಧನೆ ಮತ್ತು ಶೇ.60ರಷ್ಟು ಪ್ರಾಯೋಗಿಕತೆಯನ್ನು ಅಳವಡಿಸಿಕೊಳ್ಳಲಾಗಿದ್ದು, ಇದರಿಂದ ಡಿಪ್ಲೊಮಾ ಪದವೀಧರರಿಗೆ ಕನಸಿನ ಉದ್ಯೋಗಗಳು
ಸಿಕ್ಕುತ್ತಿವೆ ಎಂದು ಅವರು ನುಡಿದರು.
ಡಿಪ್ಲೊಮಾ ಶಿಕ್ಷಣದಲ್ಲಿ ಒಟ್ಟು 45 ಕೋರ್ಸುಗಳಿವೆ. ಇವುಗಳ ಜತೆಗೆ ಹೋದ ವರ್ಷದಿಂದ ಸೈಬರ್ ಸೆಕ್ಯುರಿಟಿ, ಕ್ರೌಡ್ ಕಂಪ್ಯೂಟಿಂಗ್, ಟ್ರಾವೆಲ್ ಅಂಡ್ ಟೂರಿಸಂ, ಬಿಗ್ ಡೇಟಾ ತರಹದ ಆಧುನಿಕ ಕೋರ್ಸುಗಳನ್ನೂ ಆರಂಭಿಸಲಾಗಿದೆ. ಇದರ ಜತೆಗೆ ಏಕಕಾಲದಲ್ಲಿ ಎರಡು ವಿಷಯಗಳಲ್ಲಿ ಪದವಿ ಪಡೆಯುವ ಟ್ವಿನ್ನಿಂಗ್ ಕೋರ್ಸುಗಳನ್ನು ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್‌ನಲ್ಲಿ ಆರಂಭಿಸಲಾಗಿದ್ದು, 48 ವಿದ್ಯಾರ್ಥಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಇದಕ್ಕೆ ಈದುಲುವ ವೆಚ್ಚವನ್ನು ಸರಕಾರವೇ ಭರಿಸುತ್ತಿದೆ ಎಂದು ಅವರು ವಿವರಿಸಿದರು.
ತಾಂತ್ರಿಕ ಶಿಕ್ಷಣ ಪರೀಕ್ಷಾ ಮಂಡಳಿಗೆ ಸ್ವಾಯತ್ತತೆ ನೀಡುವ
ದಿನಗಳು ಹತ್ತಿರದಲ್ಲೇ ಇವೆ. ಡಿಪ್ಲೊಮಾ ಶಿಕ್ಷಣದಲ್ಲಿ
ಉತ್ಕೃಷ್ಟತೆ ಸಾಧಿಸಲಾಗುವುದು. ಇದರ ಜತೆಗೆ
ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವ ಪ್ರವೃತ್ತಿಗೆ ತೆರೆ
ಎಳೆಯಲಾಗಿದೆ ಎಂದು ಅವರು ಹೇಳಿದರು.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ
ಪಿ.ಪ್ರದೀಪ್ ಮಾತನಾಡಿ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ
ಇಂಗ್ಲಿಷ್‌ನಲ್ಲಿ ಬೋಧನೆ ನಡೆಯುತ್ತಿದ್ದರೂ ಕನ್ನಡ ಮತ್ತು
ಇಂಗ್ಲಿಷ್ ಎರಡರಲ್ಲೂ ಪರೀಕ್ಷೆ ಬರೆಯಲು ಅವಕಾಶ
ಕೊಡಲಾಗಿದೆ. ಇದು ವಿದ್ಯಾರ್ಥಿಗಳ ಅಭಿವ್ಯಕ್ತಿ ರೀತಿಗೆ
ಕೊಟ್ಟಿರುವ ಪುರಸ್ಕಾರವಾಗಿದ್ದು, ಇದರಿಂದ ಗ್ರಾಮೀಣ
ವಿದ್ಯಾರ್ಥಿಗಳಿಗೆ ಅಪಾರ ಪ್ರಯೋಜನವಾಗಿದೆ. ಇನ್ನು ನಾಲ್ಕು ತಿಂಗಳಲ್ಲಿ ಡಿಪ್ಲೊಮಾದ ಎಲ್ಲಾ ತರಗತಿಗಳೂ ಸ್ಮಾರ್ಟ್ ಕ್ಲಾಸ್‌ರೂಮುಗಳಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ
ಕಾರ್ಯದರ್ಶಿ ರಶ್ಮಿ ಮಹೇಶ್, ತಾಂತ್ರಿಕ ಶಿಕ್ಷಣ ಇಲಾಖೆ
ನಿರ್ದೇಶಕ ಎನ್.ರವಿಚಂದ್ರನ್, ಜಂಟಿ ನಿರ್ದೇಶಕಿ ಡಾ.ಬಿಕೆ
ಮಮತಾ, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ
ಪ್ರೊ.ಬಿ. ತಿಮ್ಮೇಗೌಡ ಉಪಸ್ಥಿತರಿದ್ದರು.
ಚಿನ್ನದ ಪದಕಕ್ಕೆ ಪಾತ್ರರಾದ 70ರ ಜ್ಞಾನವೃದ್ಧ!
2022ರ ಡಿಪ್ಲೊಮಾ ಶಿಕ್ಷಣದ ಹಲವು ವಿಭಾಗಗಳಲ್ಲಿ
ಅತ್ಯುತ್ತಮ ಸಾಧನೆ ತೋರಿರುವ ಪ್ರತಿಭಾವಂತ
ವಿದ್ಯಾರ್ಥಿಗಳಿಗೆ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಸಚಿವ
ಡಾ.ಸಿ ಎನ್ ಅಶ್ವತ್ಥನಾರಾಯಣ ಪ್ರದಾನ ಮಾಡಿದರು.
ಸಿವಿಲ್ ಡಿಪ್ಲೊಮಾದಲ್ಲಿ ಶಿರಸಿಯ 70ರ ಹಿರಿಯರಾದ ನಾರಾಯಣ ಭಟ್ ಶೇ.94.88ರಷ್ಟು ಅಂಕ ಗಳಿಸುವ ಮೂಲಕ ಪ್ರಥಮ ಬ್ಯಾಂಕ್ ಪಡೆದುಕೊಂಡು, ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದು ವಿಶೇಷವಾಗಿತ್ತು. ಈ ಮೂಲಕ ಅವರು ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎನ್ನುವುದನ್ನು ತೋರಿಸಿದರು. ಉಳಿದಂತೆ ಬ್ಯಾಂಕ್ ವಿಜೇತರಾದ ಕೆ ಎಸ್ ಸುಮಂತ ಉಪಾಧ್ಯಾಯ, ಶುಭಂಕರ್ ಚಕ್ರವರ್ತಿ, ದರ್ಶನ್,ಶಿವಾನಿ ಶ್ರೀಕಾಂತ ಕಲ್ಬುರ್ಗಿ, ಅಂಕಿತ್ ಶೆಟ್ಟಿ, ಆರ್ ಎಲ್ ಚಂದನಾ,ಕೆ ಎಚ್ ಯಶಸ್ವಿನಿ, ಡಿ ಎಸ್ ಐಶ್ವರ್ಯಾ, ಅಂಕಿತಾ, ವಿಜೇತ್, ಆರ್ ವಿಜಯ್, ಸ್ವಾತಿ ಕಾಂಬಳೆ, ಅನಿತಾ ಎರೆಸೇಮಿ, ಶರತ್ ಕುಮಾರ್, ಗೀತಾ ಹಂಗಳಕಿ, ರುಜಾರಿಯೋ ಮಿನಿನ್ ಡಿಸೋಜ, ಡಿ ಎಂ ವನುಶ್ರೀ ಸೇರಿದಂತೆ ಇನ್ನೂ ಹಲವರಿಗೆ ಸಚಿವರು ಪದಕ ಪ್ರದಾನ ಮಾಡಿ, ಗೌರವಿಸಿದರು.