ನ.7 ಕಾಪುವಿನಲ್ಲಿ ‘ಜನಸಂಕಲ್ಪ ಸಮಾವೇಶ’, ಬೈಂದೂರಿನಲ್ಲಿ ‘ಫಲಾನುಭವಿಗಳ ಸಮಾವೇಶ’; ಉಡುಪಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟದ ಬೇಡಿಕೆ: ಕುಯಿಲಾಡಿ ಸುರೇಶ್ ನಾಯಕ್
ಉಡುಪಿ : ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನ.7ರಂದು ಕಾಪು ಬಸ್ ನಿಲ್ದಾಣದ ಬಳಿ ಬೆಳಿಗ್ಗೆ ಗಂಟೆ 10.30ಕ್ಕೆ ನಡೆಯಲಿರುವ ‘ಜನಸಂಕಲ್ಪ ಸಮಾವೇಶ’ದಲ್ಲಿ 20 ಸಾವಿರ ಮಂದಿ ಹಾಗೂ ಬೈಂದೂರಿನ ಮುಳ್ಳಿಕಟ್ಟೆಯಲ್ಲಿ ಸಂಜೆ ಗಂಟೆ 4.00ಕ್ಕೆ ನಡೆಯಲಿರುವ ರೂ.1318 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ‘ಫಲಾನುಭವಿಗಳ ಸಮಾವೇಶ’ದಲ್ಲಿ 25 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಗುರುವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಈ ಎರಡೂ ಕಾರ್ಯಕ್ರಮಗಳಲ್ಲೂ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪರವರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಬೂತ್ ಮಟ್ಟದಲ್ಲೂ ಸಭೆ ನಡೆಸಲಾಗಿದ್ದು ಎಲ್ಲೆಡೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.
ಬೆಳಿಗ್ಗೆ ಕಾಪುವಿನಲ್ಲಿ ನಡೆಯುವ ‘ಜನಸಂಕಲ್ಪ ಸಮಾವೇಶ’ದ ಬಳಿಕ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಉದಯವಾಣಿಯಿಂದ ನಡೆಯುವ ‘ಹಿರಿಯ ಪತ್ರಕರ್ತರ ಶತಮಾನೋತ್ತರ ಸಂಸ್ಮರಣೆ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಜಿಲ್ಲಾ ಬಿಜೆಪಿಯಿಂದ ಮುಖ್ಯ ಮಂತ್ರಿಯವರಿಗೆ ಕೆಎಂಎಫ್ ಮಂಗಳೂರು ಒಕ್ಕೂಟವನ್ನು ಪ್ರತ್ಯೇಕಿಸಿ ಉಡುಪಿಗೆ ಪ್ರತ್ಯೇಕ ಒಕ್ಕೂಟ ರಚನೆ ಮಾಡುವಂತೆ ಆಗ್ರಹಿಸಲಿದ್ದೇವೆ. ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಕಾಲೇಜುಗಳು ಇರುವುದರಿಂದ ಹಾಗೂ ಜಿಲ್ಲೆ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವುದರಿಂದ ಜಿಲ್ಲೆಗೊಂದು ವಿಶ್ವವಿದ್ಯಾಲಯವನ್ನು ಘೋಷಣೆ ಮಾಡುವಂತೆ ಬೇಡಿಕೆ ಇಡಲಿದ್ದೇವೆ. ಡಿಸಿಸಿ ಬ್ಯಾಂಕ್‌ಗಳು ಅಪೆಕ್ಸ್ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಕೇಂದ್ರ ಸರಕಾರ ನಡೆಸುತ್ತಿರುವುದರಿಂದ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಬೇಡಿಕೆಯನ್ನು ಮಂಡಿಸುವ ಪ್ರಮೇಯ ಬರುವುದಿಲ್ಲ ಎಂದರು.
ಜನಸಂಕಲ್ಪ ಸಮಾವೇಶದಲ್ಲಿ ಪಕ್ಷಕ್ಕೆ ಹೊಸಬರ ಸೇರ್ಪಡೆಯೂ ನಡೆಯಲಿದೆ. ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿಕೊಂಡು ಬರುವವರನ್ನು ಸ್ವಾಗತಿಸುತ್ತೇವೆ. ಈಗಾಗಲೇ ಬಂದವರಿಗೆ ಪಕ್ಷದಿಂದ ಯಾವುದೇ ಅನ್ಯಾಯ ಆಗಿಲ್ಲ. ಪಕ್ಷವನ್ನು ಇನ್ನಷ್ಟು ಸದೃಢವಾಗಿ ಸಂಘಟಿಸುವ ದೃಷ್ಟಿಯಿಂದ ಹೊಸಬರ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ನ.5ರ ಬೆಳಗ್ಗೆ ಗಂಟೆ 10.30ಕ್ಕೆ ಮಣಿಪಾಲದ ಹೋಟೆಲ್ ಕಂಟ್ರಿ ಇನ್ ಸಭಾಂಗಣದಲ್ಲಿ ಬಿಜೆಪಿ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿ.ಸುನಿಲ್ ಕುಮಾರ್, ಜಿಲ್ಲೆಯ ಶಾಸಕರು ಮತ್ತು ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ ಎಂದು ಕುಯಿಲಾಡಿ ತಿಳಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಪ್ರಸಾದ್ ಶೆಟ್ಟಿ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾಕ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.