ಉಡುಪಿ:-ಸುಟ್ಟ ಸ್ಥಿತಿಯಲ್ಲಿ ಬ್ಯಾಂಕ್ ಉದ್ಯೋಗಿ ಮೃತದೇಹ ಪತ್ತೆ ; ಆತ್ಮಹತ್ಯೆ ಶಂಕೆ.!
ಉಡುಪಿ : ಖಾಸಗಿ ಬ್ಯಾಂಕ್ ನ ಲೀಗಲ್ ಆಫೀಸರ್ ಒಬ್ಬರ ಮೃತದೇಹವು ಅವರ ಮನೆಯಲ್ಲಿ ಬೆಂಕಿಯಿಂದ ಸುಟ್ಟ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದೆ.
ರಾಜ್ ಗೋಪಾಲ್ ಸಾಮಗ(42) ಮೃತಪಟ್ಟವರು,
ಉಡುಪಿ ಜಿಲ್ಲೆಯ ಕೃಷ್ಣಮಠ ಸಮೀಪದ ವಾದಿರಾಜ
ರಸ್ತೆಯಲ್ಲಿರುವ ಕೃಷ್ಣ ಸಾಮಗ ಅವರ ಮನೆಯಲ್ಲಿ ಹೊಗೆಯನ್ನು ಕಂಡು ನೆರೆ ಮನೆಯವರು ಮನೆಯವರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಅಗ್ನಿ ಶಾಮಕದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಕೋಣೆಯ ಬಾಗಿಲು ಮುರಿದು ಪರಿಶೀಲಿಸಿದಾಗ ರಾಜ ಗೋಪಾಲ್ ಸಾಮಗ ಬೆಂಕಿಯಿಂದ ಸುಟ್ಟು ಮೃತಪಟ್ಟಿರುವುದು ಕಂಡುಬಂದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ಇದೇ ಚಿಂತೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ರಾಜಗೋಪಾಲ ಕೆಲಸ ಮಾಡುತ್ತಿದ್ದಾಗ ಲ್ಯಾಪ್‌ಟಾಪ್ ಸಿಡಿದು ಅಥವಾ ಬೆಂಕಿ ಹಚ್ಚಿಕೊಂಡು ಮೃತಪಟ್ಟಿರಬಹುದೆಂದು ಮನೆಯವರು ದೂರಿದ್ದಾರೆ. ರಾಜಗೋಪಾಲ್ ಅವರ ಪತ್ನಿ ಕೆನರಾ ಬ್ಯಾಂಕ್ನ ಉದ್ಯೋಗಿಯಾಗಿದ್ದಾರೆ ಅವರಿಗೆ ಒಂದುವರೆ ವರ್ಷದ ಪುತ್ರನಿದ್ದಾನೆ.
ಲ್ಯಾಪ್‌ಟಾಪ್‌ಸಿಡಿದಿರಬಹುದೇ?
ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ನಿರೀಕ್ಷಕ ಪ್ರಮೋದ್ ಕುಮಾರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇದು ಆತ್ಮಹತ್ಯೆಯೋ? ಅಥವಾ ಲ್ಯಾಪ್‌ಟಾಪ್ ಸಿಡಿದು ಅವಘಡ ಸಂಭವಿಸಿತೇ? ಇನ್ಯಾವುದೋ ಕಾರಣವಿರಬಹುದೇ ಎನ್ನುವುದನ್ನು ಪೊಲೀಸರು ತನಿಖೆ
ನಡೆಸುತ್ತಿದ್ದಾರೆ.