ಕರಾವಳಿ

ಪ.ಜಾತಿ ಮತ್ತು ಪ.ಪಂಗಡದ ಗಂಗಾ ಕಲ್ಯಾಣ ಫಲಾನುಭವಿಗಳಿಗೆ 17000 ಕೊಳವೆ ಬಾವಿ ನಿರ್ಮಾಣಕ್ಕೆ ನೇರ ಹಣ ಪಾವತಿ : ಸಚಿವ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ : ಸಮಾಜ ಕಲ್ಯಾಣ ಇಲಾಖೆ , ಅಂಬೇಡ್ಕರ್ ಅಭಿವೃಧ್ದಿ ನಿಗಮ ಸೇರಿದಂತೆ 7 ವಿವಿಧ ನಿಗಮಗಳ ಮೂಲಕ ಗಂಗಾ ಕಲ್ಯಾಣ ಯೋಜನೆಯಡಿ ಒಟ್ಟು 17000 ಕೊಳವೆ ಬಾವಿಗಳನ್ನು ಕೊರೆಯಲು ಹಣವನ್ನು ರೈತರ ಖಾತೆಗೆ ನೇರವಾಗಿ ವರ್ಗಾಯಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

ಅವರು ಅನಾರೋಗ್ಯದ ಕಾರಣ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು , ಅಲ್ಲಿದಂದಲೇ ಇಂದು ಸಮಾಜ ಕಲ್ಯಾಣ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಕುರಿತಂತೆ ವೀಡಿಯೋ ಕಾನ್ಫ್ರೆನ್ಸ್ ಮೂಲಕ ನಡೆಸಿದ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ.ಜಾತಿ ಮತು ಪಂಗಡದ ರೈತರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿಗಳನ್ನು 2022-23 ನೇ ಸಾಲು ಸೇರಿದಂತೆ ಬಾಕಿ ಉಳಿದ ಹಿಂದಿನ ಸಾಲಿನಲ್ಲಿ ಆಯ್ಕೆಯಾದ ಒಟ್ಟು 17000 ಕ್ಕೂ ಹೆಚ್ಚು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ 1115 ಕೋಟಿ ರೂ ಗಳನ್ನು ವರ್ಗಾವಣೆಗೊಳಿಸಲಾಗುತ್ತಿದೆ ಇದಕ್ಕೆ ಅಗತ್ಯವಿರುವ ಡಿಬಿಟಿ ತಂತ್ರಾAಶವನ್ನು ಇಲಾಖೆವತಿಯಿಂದ ಸಿದ್ದಪಡಿಸಿ ಇ ರೂಪಿ ಮೂಲಕ ಪಾವತಿಸಲಾಗುವುದು ಎಂದರು.

ಫಲಾನುಭವಿಗಳು ಇಲಾಖೆವತಿಯಿಂದ ನೊಂದಾಯಿತ ಸಂಸ್ಥೆಗಳ ಮೂಲಕ ಕೊಳವೆ ಬಾವಿಗಳನ್ನು ಕೊರೆಸಲು ಹಾಗೂ ತಮಗೆ ಅನುಕೂಲವಾಗುವ ಪಂಪ್ಸೆಟ್ ಗಳನ್ನು ಖರೀದಿ ಮಾಡಬಹುದಾಗಿದ್ದು, ಇದರಿಂದಾಗಿ ಯೋಜನೆಯ ಅನುಷ್ಠಾನದ ವಿಳಂಬತೆಯನ್ನು ತಡೆಯಲು ಹಾಗೂ ಪಾರದರ್ಶಕತೆಗೆ ಒತ್ತು ನೀಡಿದಂತಾಗುತ್ತದೆ ಎಂದರು.
ಈಗಾಗಲೇ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಪಟ್ಟಿಯನ್ನು ಜಿಲ್ಲೆಗೆ ವರ್ಗಾಯಿಸಲಾಗಿದ್ದು, ಸಮಿತಿಯು ಅರ್ಹ ಫಲಾನುಭವಿಗಳನ್ನು ನವೆಂಬರ್ ಆಂತ್ಯದ ಒಳಗೆ ಆಯ್ಕೆ ಮಾಡಲಿದೆ ಎಂದರು.

ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಬೆಳಗಾವಿ, ಕಲಬುರುಗಿ, ಧಾರವಾಡ, ದ.ಕನ್ನಡ ಮೈಸೂರು ಜಿಲ್ಲಾ ಕೇಂದ್ರಗಳಲ್ಲಿ ವಿದ್ಯಾರ್ಥಿನಿಲಯಗಳಿಗೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಿದ್ದು ವಿದ್ಯಾರ್ಥಿನಿಲಯಗಳ ಕೊರತೆ ಹಿನ್ನಲೆಯಲ್ಲಿ ದೀನ ದಯಾಳ್ ಉಪಾಧ್ಯಾಯ ಸೌಹಾರ್ದತಾ ವಿದ್ಯಾರ್ಥಿ ನಿಲಯಗಳನ್ನು ಬಾಡಿಗೆ ಕಟ್ಟಡಗಳಲ್ಲಿ ಈಗಾಗಲೇ ಪ್ರಾರಂಭಿಸಲಾಗಿದೆ. ಇವುಗಳಿಗೆ ಪ.ಜಾತಿ., ಪ.ಪಂಗಡ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತ ಒಳಗೊಂಡ ಎಲ್ಲಾ ಸಮುದಾಯಗಳಿಗೆ ಅವಕಾಶ ಕಲ್ಪಿಸಿದೆ ಇದಕ್ಕೆ ಅಗತ್ಯವಿರುವ ಸ್ವಂತ ಕಟ್ಟಡ ನಿರ್ಮಾಣವನ್ನು ಶೀಘ್ರದಲ್ಲಿಯೇ ನಿರ್ಮಿಸಲಾಗುವುದು ಎಂದರು.

ಸoವಿಧಾನ ಶಿಲ್ಪಿ  ಡಾ.ಬಿ.ಆರ್.ಅಂಬೇಡ್ಕರ್ ಅವರು ಕರ್ನಾಟಕಕ್ಕೆ ಭೇಟಿ ನೀಡಿರುವ ಹಲವು ಸ್ಥಳಗಳನ್ನು ಗುರುತಿಸಿ ಅಭಿವೃದ್ದಿಪಡಿಸಲು ಸರ್ಕಾರ ಈಗಾಗಲೇ ಘೋಷಿಸಿದ್ದು,ಅವರು ಭೇಟಿ ನೀಡಿರುವ ಸ್ಥಳಗಳಾದ ಬೆಳಗಾವಿ ,ನಿಪ್ಪಾಣಿ, ಚಿಕ್ಕೋಡಿ, ವಿಜಯಪುರ, ಬೆಂಗಳೂರಿನ ಸದಾಶಿವ ನಗರ ಹಾಗೂ ಫೇಜರ್ ಟೌನ್ , ಹೊಳೆನರಸೀಪುರದ ರೈಲ್ವೆ ನಿಲ್ದಾಣ, ಹಾಸನ , ಕೋಲಾರದ ಕೆ.ಜಿಎಫ್, ಕಲಬುರ್ಗಿಯ ಚಿತ್ತಾಪುರ ತಾಲೂಕಿನ ವಾಡಿ ರೈಲ್ವೆ ನಿಲ್ದಾಣ ಹಾಗೂ ಧಾರವಾಢ ನಗರಗಳನ್ನು ಗುರುತಿಸಿ ಅಭಿವೃದ್ದಿಪಡಿಸಲು 20 ಕೋಟಿ ರೂ ಗಳನ್ನು ಆಯಾ ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸಲಾಗಿದ್ದು,ಹೆಚ್ಚುವರಿ ಅನುದಾನದ ಅಗತ್ಯವಿದ್ದಲ್ಲಿ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು.

ಪ.ಜಾತಿ ಮತ್ತು ಪಂಗಡದ ಮಠಗಳ ಅಭಿವೃಧ್ದಿಗೆ ಮುಖ್ಯಮಂತ್ರಿಗಳು ಈಗಾಗಲೇ ವಿಶೇಷ ನೆರವನ್ನು ಘೋಷಿಸಿದ್ದು , ರಾಜ್ಯದ 12 ಮಠಗಳಿಗೆ 22 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ, ಈ ಮಠಗಳ ಆಭಿವೃದ್ಧಿ ಕಾರ್ಯಗಳನ್ನು ಶೀಘ್ರದಲ್ಲಿ ಕೈಗೊಳ್ಳಬೇಕು ಎಂದು ತಿಳಿಸಿದರು.

ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ ಐ.ಐ.ಎಂ.ಬಿ ಮೂಲಕ 300 ಮಹಿಳಾ ಪದವೀಧರರಿಗೆ ಉದ್ಯಮ ಶೀಲತಾ ತರಬೇತಿ ನೀಡಲಾಗುತ್ತಿದೆ. ಇದರಿಂದ ಅವರು ಸ್ವಂತ ಉದ್ಯಮ ಕೈಗೊಳ್ಳಲು ಅನುಕೂಲವಾಗಲಿದೆ ಎಂದರು.
ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ 14 ಲಕ್ಷ ವಿದ್ಯಾರ್ಥಿಗಳಿಗೆ 615.5 ಕೋಟಿ ವಿದ್ಯಾರ್ಥಿವೇತನ ಮಂಜೂರು ಮಾಡಲಾಗಿದೆ ಎಂದ ಅವರು ಮಹಿಳೆಯರಲ್ಲಿ ಉದ್ಯಮ ಶೀಲತೆಯನ್ನು ಉತ್ತೇಜಿಸಲು ಇಲಾಖಾ ಕಾರ್ಯಕ್ರಮದಡಿಯಲ್ಲಿ ಎಲ್ಲಾ ಅಭಿವೃದ್ದಿ ನಿಗಮಗಳ ಸ್ವಯಂ ಉದ್ಯೋಗ ಹಾಗೂ ಇತರೆ ಕಾರ್ಯಕ್ರಮಗಳ ಗುರಿಯಲ್ಲಿ ಶೇ.25 ರಷ್ಟು ಪ.ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಕಾಯ್ದಿರಿಸಲಾಗಿದೆ ಎಂದರು.

ಇಲಾಖೆ ವ್ಯಾಪ್ತಿಯ ವಿವಿಧ ಅಭಿವೃಧ್ದಿ ನಿಗಮಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಪ್ರಸಕ್ತ ಆಯವ್ಯಯದಲ್ಲಿ 580 ಕೋಟಿ ಅನುದಾನವನ್ನು ಒದಗಿಸಲಾಗಿತ್ತು ಇದರ ಜೊತೆಗೆ ಹೆಚ್ಚುವರಿಯಾಗಿ ಪೂರಕ 410 ಕೋಟಿ ಅನುದಾನವನ್ನು ಒದಗಿಸಲಾಗಿದೆ ಒಟ್ಟಾರೆ 990 ಕೋಟಿ ರೂ ನೀಡಲಾಗಿದೆ ಎಂದರು.
ವಸತಿರಹಿತ ಪ.ಜಾತಿ ಮತ್ತು ಪಂಗಡದ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ ರಾಜೀವ್ ಗಾಂಧೀ ವಸತಿ ನಿಗಮದ ಮೂಲಕ ಆದ್ಯತೆಯ ಮೇಲೆ ಮನೆ ನಿರ್ಮಾಣಕ್ಕೆ 4277 ಅರ್ಜಿಗಳನ್ನು ಜಿಲ್ಲಾ ಮಟ್ಟದ ಸಮಿತಿಗಳು ಆಯ್ಕೆ ಮಾಡಿದ್ದು, ಈ ಎಲ್ಲಾ ಫಲಾನುಭವಿಗಳಿಗೆ ಶೀಘ್ರದಲ್ಲಿ ಮನೆ ಮಂಜೂರಾತಿ ಪತ್ರ ನೀಡಲಾಗುವುದು ಎಂದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್, ಆಯುಕ್ತ ರಾಕೇಶ್, ಹಿಂದುಗಳಿದ ವರ್ಗಗಳ ಅಭಿವೃದ್ದಿ ಇಲಾಖೆ ಆಯುಕ್ತ ದಯಾನಂದ್ ಹಾಗೂ 7 ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!