ಬಿಲ್ಲವ ಈಡಿಗ ಸಮಾಜಾಭಿವೃದ್ದಿಗೆ “ಕೋಶ” ರಚನೆ ಕುರಿತಂತೆ ಸರ್ಕಾರದ ನಿಲುವು ಮತ್ತು ಸವಲತ್ತುಗಳ ಸ್ಪಷ್ಟತೆ ಅಗತ್ಯವಿದೆ

ಬಿಲ್ಲವ ಈಡಿಗ ಸೇರಿದಂತೆ 26 ಪಂಗಡಗಳನ್ನು ಒಳಗೊಂಡಿರುವ ಸಮುದಾಯದ ಬಹುಕಾಲದ ಬೇಡಿಕೆಯಾದ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ರಚನೆಯ ಬದಲಾಗಿ ಪ್ರಸ್ತುತ ಸರ್ಕಾರವು ಕೋಶವೊಂದನ್ನು ರಚಿಸುವ ಬಗ್ಗೆ ಆದೇಶವನ್ನು ಹೊರಡಿಸಿದೆ.ಈ ಕುರಿತು ಸಮಸ್ತ ಸಮಾಜಬಾಂಧವರಲ್ಲಿ ಗೊಂದಲವಿದೆ.ಯಾವುದೇ ಸಮಾಜಕ್ಕಿಲ್ಲದ ಕೋಶ ನಮ್ಮ ಸಮುದಾಯಕ್ಕೆ ಅನುಷ್ಠಾನಕ್ಕೆ ಬರುವುದಾದರೆ ನಿಗಮದ ಮುಖಾಂತರ ಪೂರೈಕೆಯಾಗುವ ಎಲ್ಲಾ ಸವಲತ್ತುಗಳನ್ನು ನೀಡಬೇಕೆಂದು ನಮ್ಮ ಒತ್ತಾಯವಾಗಿದೆ.
“ಕೋಶ” ಕ್ಕೆ ಸಮಾಜದ ಯೋಗಕ್ಷೇಮ ಕುರಿತಾಗಿ ಸ್ವತಂತ್ರ ಅಧಿಕಾರ ಮಾನ್ಯ ಮಾಡಲಾಗುತ್ತದೆಯೆ,ಅನುದಾನ ಯಾವ ಪ್ರಮಾಣದಲ್ಲಿ ನೀಡುತ್ತಾರೆ.ಸ್ವಾಯತ್ತತೆ ಇದೆಯಾ ಹೀಗೆ ಏನೆಲ್ಲಾ ವಿಶೇಷಗಳಿರುತ್ತದೆ ಎನ್ನುವುದರ ಕುರಿತಾಗಿ ಸರ್ಕಾರ ಸ್ಪಷ್ಟ ಪಡಿಸಬೇಕು. ನಾವು ಈ ಹಿಂದೆ ಬ್ರಹ್ಮಾವರದಲ್ಲಿ ಬಿಲ್ಲವ ಸಮಾವೇಶ ನಡೆಸಿದಾಗ ನಿಗಮದ ಬೇಡಿಕೆಯನ್ನು ಪ್ರಮುಖವಾಗಿ ಮಂಡಿಸಿದ್ದೆವು.ಆ ನಂತರದಲ್ಲಿಯೂ ಬೇರೆ ಬೇರೆ ಸಂದರ್ಭದಲ್ಲಿ ಸಮಾಜದ ಹಾಗೂ ಇತರೆಲ್ಲಾ ಜನಪ್ರತಿನಿಧಿಗಳಿಗೆ ನಿಗಮ ರಚನೆಯ ಮನವಿ ನೀಡಿದ್ದೆವು.ಇಡೀ ರಾಜ್ಯ ವ್ಯಾಪ್ತಿಯಲ್ಲಿ ಪ್ರತಿಭಟನಾ ರೂಪದಲ್ಲಿ ಮನವಿ ಸಲ್ಲಿಕೆಯಾಗಿತ್ತು.
ನಿಗಮಕ್ಕಾದರೆ ನಮ್ಮ ಸಮುದಾಯದವರೆ ಅಧ್ಯಕ್ಷರಾಗಿರುತ್ತಾರೆ.ಒಂದು ಸ್ವಾಯತ್ತ ಸಂಸ್ಥೆಯಾಗಿ ಕಾನೂನಿನ ಬದ್ಧತೆಯೊಂದಿಗೆ ಇರುತ್ತದೆ. ಮತ್ತು ಇದಕ್ಕೆ ಕಾನೂನಿನ ರಕ್ಷಣೆಯೂ ಇದೆ. ಈಡಿಗ ಬಿಲ್ಲವರು ಕೇಳಿದ್ದು ನಿಗಮವೇ ಹೊರತು ಕೋಶವಲ್ಲ.
ಸರ್ಕಾರ ಸಮಾಜದ ಹಿತದ ಕುರಿತಾಗಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ನಾವೂ ಅಭಿನಂದಿಸಬಯಸುತ್ತೇವೆ.ಆದರೆ ಇದ್ಯಾವುದೂ ಕೇವಲ ರಾಜಕೀಯ ಒಲೈಕೆ ಅಥವಾ ಮತಬ್ಯಾಂಕ್‌ಗೋಸ್ಕರ ನೀಡುವ ಸೌಲಭ್ಯಗಳೆನಿಸಬಾರದು.
ನಮ್ಮ ಸಮಾಜದಲ್ಲಿ ಅನೇಕ ಸಂಘಟನೆಗಳು ಹಾಗೂ ಸ್ವಾಮೀಜಿಗಳು ಇದ್ದಾರೆ.ಇವೆರೆಲ್ಲರನ್ನು ಸೂಕ್ತವಾಗಿ ಸಮಾಲೋಚಿಸಿಕೊಂಡು ಸರ್ಕಾರ ವ್ಯವಸ್ಥಿತವಾದ ನಿಗಮ ಅಥವಾ ಅದೇ ಮಾದರಿಯ ಕೋಶವನ್ನು ಮಂಜೂರುಗೊಳಿಸಿದರೆ ನಾವೂ ಕೂಡ ಸ್ವಾಗತಿಸುತ್ತೇವೆ.ಆದುದರಿಂದ ಅತಿ ಅಗತ್ಯವಾಗಿ ಸರ್ಕಾರ ಕೋಶ ಮತ್ತು ನಿಗಮ ಕುರಿತಾದ ವ್ಯತ್ಯಾಸ ,ಸವಲತ್ತುಗಳನ್ನು ಸ್ಪಷ್ಟಪಡಿಸಬೇಕೆಂದು ಬಯಸುತ್ತೇವೆ. ಎಂದು ಪ್ರವೀಣ್ ಎಂ ಪೂಜಾರಿ ಅಧ್ಯಕ್ಷರು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ) ಪ್ರಕಟನೆಯಲ್ಲಿ ತಿಳಿಸಿದ್ದಾರೆ.