“ಲವ್ ಜಿಹಾದ್ ನಿಯಂತ್ರಿಸಲು ಭಜರಂಗದಳ ಸಮರ್ಥವಾಗಿದೆ’ʼ

ಕಾರ್ಕಳ: ಭಯೋತ್ಪಾದನೆ, ಮತಾಂತರ ಹಾಗೂ ಲವ್ ಜಿಹಾದ್‌ನಂತಹ ಸಾಮಾಜಿಕ ಪಿಡುಗುಗಳನ್ನು ಸರಕಾರ ಹಾಗೂ ಪೊಲೀಸರು ನಿಯಂತ್ರಿಸದಿದ್ದಲ್ಲಿ ಬಜರಂಗದಳವೇ ಬೀದಿಗಿಳಿದು ಮತಾಂತರವನ್ನು ಮಟ್ಟಹಾಕಲು ಸಮರ್ಥವಾಗಿದೆ ಎಂದು ಬಜರಂಗದಳದ ಪ್ರಾಂತ ಸಂಯೋಜಕ ಸುನಿಲ್ ಕೆ ಆರ್ ಎಚ್ಚರಿಸಿದ್ದಾರೆ.
ಅವರು ಕಾರ್ಕಳದ ಹೋಟೆಲ್ ಪ್ರಕಾಶ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಾರ್ಕಳದಲ್ಲಿ ಮುಸ್ಲಿಂ ಬಸ್ ಚಾಲಕನೋರ್ವ 30ಕ್ಕೂ ಹೆಚ್ಚು ಹಿಂದೂ ಯುವತಿಯರ ಮೊಬೈಲ್‌ಗೆ ಅಶ್ಲೀಲ ಸಂದೇಶಗಳನ್ನು ರವಾನಿಸಿ, ಬ್ಲಾಕ್ ಮೇಲ್ ಮಾಡುತ್ತಿರುವ ವಿಚಾರದ ಕುರಿತಂತೆ ಮಾತನಾಡಿ, ಪೊಲೀಸರು ಆರೋಪಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಹಿಂದೂ ಹೆಣ್ಣುಮಕ್ಕಳನ್ನು ಪ್ರೀತಿಯ ನಾಟಕವಾಡಿ ಅವರನ್ನು ದುರ್ಬಳಕೆ ಮಾಡಿಕೊಂಡು ಲವ್ ಜಿಹಾದ್ ಬಲೆಗೆ ಬೀಳಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು ಪೊಲೀಸರು ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು. ಲವ್ ಜಿಹಾದ್ ಒಂದು ವ್ಯವಸ್ಥಿತ ಷಡ್ಯಂತ್ರವಾಗಿದ್ದು ಇದರಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿವೆ, ಹಿಂದೂ ಹುಡುಗಿಯರನ್ನು ಪ್ರೀತಿಸಿ ಮದುವೆಯಾಗುವ ನೆಪದಲ್ಲಿ ಮತಾಂತರ ಮಾಡಿ ಅವರನ್ನು ಭಯೋತ್ಪಾದನೆ ಹಾಗೂ ದೇಶ ದ್ರೋಹಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಲವ್ ಜಿಹಾದ್ ಕರಾಳತೆಯು ದೇಶ ವ್ಯಾಪಿಯಾಗಿ ಹಬ್ಬಿಕೊಂಡಿದೆ. ಇಂತಹ ಕೃತ್ಯಗಳಿಗೆ ಮುಸ್ಲಿಂ ಸಂಘಟನೆಗಳಿಂದ ಹಣಕಾಸಿನ ನೆರವು ಕೂಡ ಸಿಗುತ್ತಿದ್ದು ಇದು ಅತ್ಯಂತ ಗಂಭೀರ ವಿಚಾರವಾಗಿದೆ ಎಂದರು.
ಧರ್ಮ ಹಾಗೂ ಸಂಸ್ಕೃತಿಯ ವಿಚಾರದಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ಭಜನೆ, ಸತ್ಸಂಗ ಮುಂತಾದ ಧಾರ್ಮಿಕ ಸಂಸ್ಕಾರ ನೀಡುವ ಕೆಲಸವನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಮಾಡುತ್ತಿದೆ. ಹಿಂದೂ ಹೆಣ್ಣುಮಕ್ಕಳು ಲವ್ ಜಿಹಾದ್ ನಂತಹ ದುರುಳರ ಬಲೆಗೆ ಬೀಳದೆ ಎಚ್ಚರಿಕೆ ವಹಿಸಬೇಕೆಂದು ಸುನಿಲ್ ಕೆ ಆರ್ ಹೇಳಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಅಶೋಕ್ ಪಾಲಡ್ಕ, ಜಿಲ್ಲಾ ಜತೆ ಕಾರ್ಯದರ್ಶಿ ಸುಧೀರ್ ನಿಟ್ಟೆ, ಜಿಲ್ಲಾ ಬಜರಂಗದಳ ಸಹ ಸಂಚಾಲಕ ಚೇತನ್ ಪೇರಲ್ಕೆ, ಗೋರಕ್ಷ ಪ್ರಮುಖ ಸುನಿಲ್ ನಿಟ್ಟೆ, ಕಾರ್ಕಳ ತಾಲೂಕು ಬಜರಂಗದಳ ಸಂಚಾಲಕ ಮನೋಜ್, ವಿ. ಹಿಂ. ಪ ಕಾರ್ಯದರ್ಶಿ ಪ್ರಸಾದ್ ಉಪಸ್ಥಿತರಿದ್ದರು.