ವಿದ್ಯಾರ್ಥಿನಿಗೆ ಚಿರತೆ ದಾಳಿ : ಯುವತಿ ಸಾವು.
ಮೈಸೂರು : ಮೈಸೂರು ಜಿಲ್ಲೆಯಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು, ತಿ.ನರಸೀಪುರ ತಾಲೂಕಿನ ಎಸ್. ಕೆಬ್ಬೆಹುಂಡಿ ಗ್ರಾಮದ ವಿದ್ಯಾರ್ಥಿನಿಯೊಬ್ಬಳು ಚಿರತೆ ದಾಳಿಗೆ ಬಲಿಯಾಗಿ ಮೃತಪಟ್ಟ ಘಟನೆ ನಡೆದಿದೆ.
22 ವರ್ಷದ ಮೇಘನಾ ಚಿರತೆ ದಾಳಿಗೆ ಮೃತಪಟ್ಟ ಯುವತಿ, ಗುರುವಾರ ಸಂಜೆ ಮನೆ ಹಿಂಭಾಗದಲ್ಲಿದ್ದ ಶೌಚಾಲಯಕ್ಕೆ ಹೋಗಲು ಹೊರ ಬಂದ ಮೇಘನಾ ಮೇಲೆ ಚಿರತೆ ದಾಳಿ ಮಾಡಿದೆ. ಮುಖ ಹಾಗೂ ಕತ್ತಿನ ಭಾಗವನ್ನು ಕಚ್ಚಿ ಗಾಯಗೊಳಿಸಿದೆ ಎನ್ನಲಾಗಿದೆ.
ಚಿರತೆ ದಾಳಿಗೊಳಗಾದ ಮೇಘನಾ ಚೀರಾಟದ ಸದ್ದಿಗೆ ಪೋಷಕರು ಓಡಿಬಂದಿದ್ದಾರೆ. ತಕ್ಷಣ ಚಿರತೆ ಪರಾರಿಯಾಗಿದೆ. ಬಳಿಕ ಮೇಘನಾ ಅವರನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೇಘನಾ ಅವರು ತಿ.ನರಸೀಪುರ ಸರಕಾರಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದರು. ಘಟನೆ ಖಂಡಿಸಿ ಗ್ರಾಮಸ್ಥರು ಧರಣಿ ನಡೆಸಿದರು. ಶಾಸಕ ಅಶ್ವಿನ್ ಕುಮಾರ್ ಕೂಡ ಪ್ರತಿಭಟನೆಗೆ ಗ್ರಾಮಸ್ಥರ ಸಾಥ್ ನೀಡಿದರು.
ಮೈಸೂರು ಜಿಲ್ಲೆಯಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು, ಕಳೆದ ಆರು ತಿಂಗಳಲ್ಲಿ 20ಕ್ಕೂ ಹೆಚ್ಚು ಚಿರತೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ ಎಂದು ಮಾಹಿತಿ ತಿಳಿದು ಬಂದಿದೆ.