ಉಡುಪಿ: ಒತ್ತಿನೆಣೆ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜೈಲಿನಲ್ಲಿಯೇ ಆತ್ಮಹತ್ಯೆ

ಉಡುಪಿ : ಒತ್ತಿನೆಣೆ ಸಮೀಪದ ಹೇನಬೇರು ರಸ್ತೆಯಲ್ಲಿ ಕಾರು ಸಹಿತ ವ್ಯಕ್ತಿಯನ್ನು ಸುಟ್ಟು ಕೊಲೆಗೈದ ಪ್ರಕರಣದ ಪ್ರಮುಖ ಆರೋಪಿ, ಕಾರ್ಕಳ ತಾಲೂಕಿನ ಮಾಳ ಗ್ರಾಮದ ಪೇರಡ್ಕ ನಿವಾಸಿ ಸದಾನಂದ ಶೇರಿಗಾರ್(52) ಎಂಬಾತ ರವಿವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಹಿರಿಯಡ್ಕ ಅಂಜಾರಿನಲ್ಲಿರುವ ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ವಿಚಾರಣಾಧೀನ ಕೈದಿಯಾಗಿರುವ ಈತ, ಜೈಲಿನ 20 ಮಂದಿ ಕೈದಿಗಳಿದ್ದ ಕೊಠಡಿಯಲ್ಲಿಯೇ ಪಂಚೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಇತರ ಕೈದಿಗಳು ಈತನನ್ನು ಆಸ್ಪತ್ರೆಗೆ ಸಾಗಿಸಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಆತ ದಾರಿ ಮಧ್ಯೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಪ್ರಕರಣವೊಂದರಲ್ಲಿ ಶಿಕ್ಷೆ ಆಗುವ ಭಯದಿಂದ ಸದಾನಂದ ಶೇರಿಗಾರ್, ತನ್ನದೇ ಕಾರಿನಲ್ಲಿ ಆತ್ಮಹತ್ಯೆಗೆ ಶರಣಾದಂತೆ ನಾಟಕ ಸೃಷ್ಟಿ ಮಾಡಿ ಸಂಚು ಮಾಡಿದ್ದು, ಅದಕ್ಕಾಗಿ ತನ್ನ ಪ್ರೇಯಸಿ ಶಿಲ್ಪಾ ಜೊತೆ ಸೇರಿ ಕಾರ್ಕಳ ಮೂಲದ ಆನಂದ ದೇವಾಡಿಗ ಎಂಬವರಿಗೆ ನಿದ್ರೆ ಮಾತ್ರೆ ಬೆರೆಸಿದ ಮದ್ಯ ನೀಡಿ ಪ್ರಜ್ಞೆ ತಪ್ಪಿಸಿದ್ದರು.
ಬಳಿಕ ಆರೋಪಿಗಳು ಕಾರಿನಲ್ಲಿ ಕಾರ್ಕಳದಿಂದ ಬೈಂದೂರು ಶಿರೂರು ಸಮೀಪದ ಹೇನಬೇರು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದಿದ್ದರು. ಅಲ್ಲಿ ಜು.12ರ ನಸುಕಿನ ವೇಳೆ ಕಾರಿಗೆ ಪೆಟ್ರೋಲ್ ಹಾಕಿ ಆನಂದ ದೇವಾಡಿಗ ಸಹಿತ ಕಾರನ್ನು ಸುಟ್ಟು ಕೊಲೆ ಮಾಡಿದ್ದರು. ಹಿಂದೆ ಖಾಸಗಿ ಸರ್ವೇಯರ್ ಆಗಿ ಕೆಲಸ ಮಾಡಿಕೊಂಡಿದ್ದ ಸದಾನಂದ ಶೇರಿಗಾರ್ ಬಳಿಕ ಕಲ್ಲುಕೋರೆ ನಡೆಸುತ್ತಿದ್ದನು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಇವರಿಬ್ಬರು ಸೇರಿದಂತೆ ಆರೋಪಿಗಳಿಗೆ ಸಹಕರಿಸಿದ ಆರೋಪದಡಿ ಕಾರ್ಕಳ ಪಚ್ಚಲಾಡಿ ಸೂಡ ನಿವಾಸಿಗಳಾದ ಸತೀಶ್ ಆರ್. ದೇವಾಡಿಗ, ನಿತಿನ್ ದೇವಾಡಿಗ ಎಂಬವರನ್ನು ಬಂಧಿಸಲಾಗಿತ್ತು. ಇವರೆಲ್ಲರು ನ್ಯಾಯಾಂಗ ಬಂಧನದಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದರು