ಕರಾವಳಿ

ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆಶಿ ಉಗ್ರ ಪರ ವಕಾಲತ್ತು ಕಾಂಗ್ರೆಸ್ಸಿನ ಅಧ:ಪತನಕ್ಕೆ ಹಿಡಿದ ಕೈಗನ್ನಡಿ: ಕುಯಿಲಾಡಿ ಸುರೇಶ್ ನಾಯಕ್

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನಿಶ್ಚಿತವಾಗಿ ಹೀನಾಯ ಸೋಲನ್ನನುಭವಿಸಲಿರುವ ಸ್ಪಷ್ಟ ಚಿತ್ರಣವನ್ನರಿತು ಕಂಗೆಟ್ಟಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಉಗ್ರನನ್ನು ಸಮರ್ಥಿಸಿಕೊಳ್ಳುವ ಕೀಳು ಮಟ್ಟಕ್ಕೆ ಇಳಿದಿರುವುದು ಕಾಂಗ್ರೆಸ್ಸಿನ ಅಧ:ಪತನಕ್ಕೆ ಹಿಡಿದ ಕೈಗನ್ನಡಿಯಂತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಈ ಹಿಂದೆ 2018ರಲ್ಲಿ, ಕಾಶ್ಮೀರದಲ್ಲಿ ಕಾಂಗ್ರೆಸ್ ಗೆದ್ದರೆ ಜೈಲಿನಲ್ಲಿರುವ ಉಗ್ರರನ್ನು ಬಿಡುಗಡೆಗೊಳಿಸುವ ಜೊತೆಗೆ ಉಗ್ರರಿಗೆ 1 ಕೋಟಿ ರೂ. ಪರಿಹಾರ ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು. ಅದೇ ರೀತಿಯ ವರಸೆಯನ್ನು ಮುಂದುವರಿಸಿ, ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣದ ಆರೋಪಿಗಳನ್ನು ‘ದೆ ಆರ್ ಮೈ ಬ್ರದರ್ಸ್’ ಎಂದಿದ್ದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಒಂದೇ ವರ್ಗವನ್ನು ಓಲೈಸುವ ಭರದಲ್ಲಿ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಭಯೋತ್ಪಾದಕನ ಪರ ವಹಿಸಿ ಮಾತನಾಡಿರುವುದು ಕಾಂಗ್ರೆಸ್ಸಿನ ಉಗ್ರ ಪ್ರೇಮ ಮತ್ತು ದೇಶವಿರೋಧಿ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ರಾಜ್ಯದ ಎಲ್ಲ ವರ್ಗದ ಜನತೆ ಖಂಡಿಸಿದ್ದರೂ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮಾತ್ರ ಉಗ್ರರ ಪರ ವಕಾಲತ್ತು ವಹಿಸಿ, ರಾಜ್ಯದ ಆಂತರಿಕ ಭದ್ರತೆಗೆ ಅಪಾಯಕಾರಿ ಎನಿಸಿರುವುದು ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತಿದೆ.

ಡಿಕೆಶಿಯವರ ಪ್ರಕಾರ ಮುಂಬೈ ಮತ್ತು ಪುಲ್ವಾಮಾ ದಾಳಿಯಂತೆ ಜನತೆ ಹಾಗೂ ಯೋಧರು ಬಾಂಬ್ ಸ್ಪೋಟದಲ್ಲಿ ಪ್ರಾಣ ತೆತ್ತರೆ ಮಾತ್ರ ಅದು ಭಯೋತ್ಪಾದಕ ಕೃತ್ಯವೆನಿಸುತ್ತದೆಯೆ? ಯಾರು ಭಯೋತ್ಪಾದಕರು, ಯಾರು ದೇಶದ್ರೋಹಿಗಳು ಎಂಬುದನ್ನು ತನಿಖಾ ಸಂಸ್ಥೆಗಳು ಡಿಕೆಶಿಯವರಿಂದ ತಿಳಿದುಕೊಳ್ಳಬೇಕೆ? ಅಷ್ಟಕ್ಕೂ ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣ ನಡೆದು ಸುಮಾರು 25 ದಿನಗಳ ಬಳಿಕ ಡಿಕೆಶಿಯವರಿಗೆ ಜ್ಞಾನೋದಯವಾಗಿರುವುದೇ ವಿಪರ್ಯಾಸವೆನಿಸಿದೆ.

ನಿರಂತರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಾ ಬಂದಿರುವ ಕಾಂಗ್ರೆಸ್ ಕೇವಲ ಅಲ್ಪಸಂಖ್ಯಾತ ಮತಗಳ ದುರಾಸೆಯಿಂದ ಒಂದೇ ವರ್ಗವನ್ನು ಓಲೈಸುವ ಪರಿಪಾಠದ ಜೊತೆಗೆ ಉದ್ದೇಶಪೂರ್ವಕವಾಗಿಯೇ ಉಗ್ರರ ಪರ ನಿಂತಿರುವುದು ದೇಶದ ಆಂತರಿಕ ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ನಡೆಸಿದ ಉಗ್ರ ಶಾರೀಕ್ ಪರ ಮೃದು ಧೋರಣೆ ವಹಿಸಿ, ದೇಶದ ತನಿಖಾ ಸಂಸ್ಥೆಗಳು ಹಾಗೂ ಭದ್ರತಾ ವ್ಯವಸ್ಥೆಯನ್ನು ಕಡೆಗಣಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉಗ್ರ ಪ್ರೇಮ ಖಂಡನೀಯ. ರಾಜ್ಯದ ಜನತೆ ಕಾಂಗ್ರೆಸ್ ನ ಈ ಎಲ್ಲ ವಿಲಕ್ಷಣ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಮುಂಬರಲಿರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!