ಮೀನುಗಾರರ ಬೇಡಿಕೆ ಈಡೇರಿಕೆಗೆ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮನವಿ
ಬೆಳಗಾವಿ: ಇಲ್ಲಿ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲಿ ಭಾಗಿಯಾಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮೀನುಗಾರರ ನಿಯೋಗದೊಂದಿಗೆ ಭೇಟಿ ಮಾಡಿದ ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಪರಿಹರಿಸಲು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ನಾಡಾ ದೋಣಿಯವರಿಗೆ ವರ್ಷದ 10 ತಿಂಗಳು ಸೀಮೆಎಣ್ಣೆ ನೀಡಬೇಕು. ಆದರೆ ಕಳೆದ 5 ತಿಂಗಳಲ್ಲಿ ಕೇವಲ ಆಗಸ್ಟ್ ತಿಂಗಳಲ್ಲಿ ಮಾತ್ರ ಸೀಮೆಎಣ್ಣೆ ವಿತರಿಸಲಾಗಿದೆ. ಮೀನುಗಾರರಿಗೆ ನೀಡುವ ಖುಣ ಪರಿಹಾರ ನಿಧಿಗೆ ಹಾಗೂ ನಾಡಾ ದೋಣಿ ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ 300 ಕೋಟಿ ರೂ. ಹಣವನ್ನು ಈ ಬಾರಿಯ ಬಜೆಟ್ ನಲ್ಲಿ ಕಾಯ್ದಿರಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವಂತೆ ಮನವಿ ಮಾಡಿದ್ದಾರೆ.
ಗಂಗೊಳ್ಳಿ ಜೆಟ್ಟಿ ದುರಸ್ತಿಗೆ ಆಗ್ರಹ:
ಗಂಗೊಳ್ಳಿ ಮೀನುಗಾರಿಕಾ ಜೆಟ್ಟಿಗೆ ಮಂಜೂರಾಗಿರುವ 12 ಕೋಟಿ ರೂ.ಗಳಲ್ಲಿ 11.23 ಕೋಟಿ ಹಣ ಪಡೆದುಕೊಂಡಿದ್ದರೂ, ಶೇ.30 ರಷ್ಟು ಮಾತ್ರ ಕಾಮಗಾರಿ ಆಗಿದೆ. ಜೆಟ್ಟಿ ಕುಸಿತ ಪ್ರಕರಣದ ತನಿಖೆಯನ್ನು ಖಾಸಗಿ ಕಂಪೆನಿಗೆ ನೀಡಲಾಗಿದೆ. ಕುಸಿದಿರುವ ಜೆಟ್ಟಿ ಪುನರ್ ನಿರ್ಮಾಣ ಕಾಮಗಾರಿಯೂ ನಡೆಯುತ್ತಿಲ್ಲ. ಗಂಗೊಳ್ಳಿ ಬಂದರಿನ ಅವ್ಯವಸ್ಥೆಯಿಂದಾಗಿ ಮೀನುಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಸಾವು-ನೋವು ಆಗುತ್ತಿದೆ. 2 ವರ್ಷಗಳಿಂದ ಸಂಕಷ್ಟ ಪರಿಹಾರ ನಿಧಿಯೂ ಬಿಡುಗಡೆಯಾಗುತ್ತಿಲ್ಲ ಎನ್ನುವುದನ್ನು ಸಿದ್ದರಾಮಯ್ಯ ಅವರ ಗಮನಕ್ಕೆ ತಂದ ಪೂಜಾರಿ ಅವರು ಅಧಿವೇಶನದಲ್ಲಿ ಆದ್ಯತೆ ನೆಲೆಯಲ್ಲಿ ಸರ್ಕಾರದ ಗಮನಕ್ಕೆ ಮೀನುಗಾರರ ಸಮಸ್ಯೆಗಳನ್ನು ತರುವಂತೆ ಮನವಿ ಮಾಡಿದ್ದಾರೆ.
ಇದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ ಅವರು ಶುಕ್ರವಾರ ನೋಟಿಸ್ ನೀಡಿ ಈ ಬಗ್ಗೆ ಚರ್ಚೆ ನಡೆಸಲು ಅವಕಾಶ ಕೋರುವುದಾಗಿ ಹಾಗೂ ಸರ್ಕಾರ ಮುಖ್ಯಸ್ಥರ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ.
ಗಂಗೊಳ್ಳಿ ನಾಡ ದೋಣಿ ವಲಯ ಸಂಘಟನೆಯ ಅಧ್ಯಕ್ಷರಾದ ಯಶವಂತ್ ಖಾರ್ವಿ ಮೀನುಗಾರ ಮುಖಂಡರಾದ ಗೋಪಾಲ್ ಖಾರ್ವಿ, ಹರೀಶ್ ಖಾರ್ವಿ, ಗಣಪತಿ ಖಾರ್ವಿ, ಮೊಗವೀರ ಸಮುದಾಯದ ಪ್ರಮುಖರಾದ ಹರೀಶ್ ತೋಳಾರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅರವಿಂದ ಪೂಜಾರಿ ಪಡುಕೋಣೆ, ಮಂಜುನಾಥ ಪೂಜಾರಿ ಕಟ್ ಬೇಲ್ತೂರು ಮುಂತಾದವರಿದ್ದರು.