ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶ
ಬೆಂಗಳೂರು,ಜ.12- ಕೊನೆಗೂ ಕನ್ನಡಿಗರ ಆಕ್ರೋಶಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಜ.26ರ ಗಣರಾಜ್ಯೋತ್ಸವ ದಂದು ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿದೆ.
ಈ ಹಿಂದೆ ತಾಂತ್ರಿಕ ಕಾರಣಗಳನ್ನು ನೀಡಿ ಕರ್ನಾಟಕದ ಸ್ತಬ್ಧ ಚಿತ್ರವನ್ನು ತಿರಸ್ಕರಿಸಲಾಗಿತ್ತು. ಈ ಬಗ್ಗೆ ವ್ಯಾಪಕ ಆಕ್ರೋಶ ಎಲ್ಲೆಡೆ ವ್ಯಕ್ತವಾಗಿತ್ತು. ಇದೀಗ ಸತತ 14ನೇ ಬಾರಿಗೆ ಜ.26ರ ಗಣರಾಜ್ಯೋತ್ಸವದಂದು ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ಕರ್ನಾಟಕದ ನಾರಿಶಕ್ತಿ ಸ್ತಬ್ಧ ಚಿತ್ರ ಪ್ರದರ್ಶನವಾಗಲಿದೆ.
ಇದೀಗ ಸಮಿತಿಯು ಕರ್ನಾಟಕದ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಇಲಾಖೆಯ ಅೀಧಿನ ಕಾರ್ಯದರ್ಶಿ ಅಶೋಕ್‍ಪಾಂಡೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ಬರೆದಿರುವ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ವರ್ಷದ ಗಣರಾಜ್ಯೋತ್ಸವದ ಪರೇಡ್‍ನಲ್ಲಿ ಬೇರೆ ರಾಜ್ಯಗಳಿಗೆ ಅವಕಾಶ ನೀಡುವ ಕಾರಣಕ್ಕಾಗಿ ಕರ್ನಾಟಕದ ಮಾದರಿ ಸ್ತಬ್ಧ ಚಿತ್ರಕ್ಕೆ ಕೇಂದ್ರ ಅನುಮತಿ ನಿರಾಕರಿಸಿತ್ತು. ಕಳೆದ 13 ವರ್ಷಗಳಿಂದ ಕರ್ನಾಟಕದ ಸ್ತಬ್ಧ ಚಿತ್ರ ಗಣರಾಜ್ಯೋತ್ಸವದ ಪರೇಡ್‍ನಲ್ಲಿ ಇತ್ತು. ಆದ್ರೆ ಈ ಬಾರಿ ಅಂತಿಮ ಹಂತದಲ್ಲಿ ರಾಜ್ಯಗಳ ಆಯ್ಕೆಯಲ್ಲಿ ಕರ್ನಾಟಕಕ್ಕೆ ಅನುಮತಿ ನಿರಾಕರಿಸಲಾಗಿತ್ತು.
ಗಣರಾಜ್ಯೋತ್ಸವದ ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ಕರ್ನಾಟಕ ಕಳೆದ ಬಾರಿ ಎರಡನೇ ಸ್ಥಾನ ಪ್ರಶಸ್ತಿಯನ್ನು ಪಡೆದಿತ್ತು. ಈ ಬಾರಿ ಮಹಿಳಾ ಸಬಲೀಕರಣ ಥೀಮ್ ಇಟ್ಟುಕೊಂಡು ಸ್ತಬ್ಧ ಚಿತ್ರ ತಯಾರಿ ಮಾಡಲಾಗಿತ್ತು. ಸಾಲುಮರದ ತಿಮ್ಮಕ್ಕ, ಸೂಲಗಿತ್ತಿ ನರಸಮ್ಮರ ಸ್ತಬ್ಧ ಚಿತ್ರ ಅಂತಿಮಗೊಳಿಸಲಾಗಿತ್ತು. ಆದರೆ, ಕೇಂದ್ರದಿಂದ ಅನುಮತಿ ಸಿಕ್ಕಿಲ್ಲ. ಈ ಬಾರಿಯ ಗಣರಾಜ್ಯೋತ್ಸವದ ಸ್ತಬ್ಧ ಚಿತ್ರ ಪ್ರದರ್ಶನ ತಮಿಳುನಾಡು, ಕೇರಳ ಸೇರಿ ಒಟ್ಟು 13 ರಾಜ್ಯಗಳ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.
ಗುಜರಾತ್‍ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಏರೋಸ್ಪೇಸ್ ಸ್ಥಳಾಂತರ ಮಾಡಲು ಹೊರಟಿದ್ದರು. ಈಗ ರಾಜ್ಯಕ್ಕೆ ಅನ್ಯಾಯ ಆಗಿದೆ, ಇದನ್ನು ಸಹಿಸಲ್ಲ. ಕೇಂದ್ರದ ಮಂತ್ರಿಗಳು ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲದೆ ಹೋದರೆ ಸಂಸದರು, ಕೇಂದ್ರ ಸಚಿವರ ಮನೆಗೆ ಘೇರಾವ್ ಹಾಕುತ್ತೇವೆ ಎಂದು ಕನ್ನಡಿಗರು ಎಚ್ಚರಿಕೆ ನೀಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಂಬಂಧಟ್ಟವರ ಜತೆ ಚರ್ಚಿಸಿ ರಾಜ್ಯದ ಸ್ತಬ್ಧ ಚಿತ್ರವನ್ನು ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಲು ಪ್ರಯತ್ನ ನಡೆಸುತ್ತೇವೆ ಎಂದು ಹೇಳಿದ್ದರು.