ಕಾಂಗ್ರೆಸ್ಸಿನ ಸುಳ್ಳು ಭರವಸೆಗಳಿಗೆ ಮರುಳಾಗದಿರಿ: ಕುಯಿಲಾಡಿ
ರಾಜಸ್ಥಾನ ಮತ್ತು ಚತ್ತೀಸ್ಗಡ ರಾಜ್ಯಗಳಲ್ಲಿ ಅಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ನಿರುದ್ಯೋಗ ಬತ್ತೆ ನೀಡುವ ಭರವಸೆಯನ್ನು ಜಾರಿಗೊಳಿಸದೆ ಜನತೆಗೆ ಮೋಸಗೈದಿರುವ ಕಾಂಗ್ರೆಸ್ ಇದೀಗ ಕರ್ನಾಟಕದಲ್ಲಿ ನೀಡಿರುವ ಅಂತಹುದೇ ಪೊಳ್ಳು ಭರವಸೆಗಳಿಗೆ ಜನತೆ ಮರುಳಾಗಬಾರದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಅವರು ಬಿಜೆಪಿ ‘ವಿಜಯ ಸಂಕಲ್ಪ ಅಭಿಯಾನ’ದ ಅಂಗವಾಗಿ ಕಟಪಾಡಿ ಕೋಟೆ-ಮಟ್ಟು ಶಕ್ತಿಕೇಂದ್ರ ವ್ಯಾಪ್ತಿಯಲ್ಲಿ ಮನೆ ಮನೆ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬೂತ್ ಅಧ್ಯಕ್ಷರ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ವೀಕ್ಷಿಸಿ ಮಾತನಾಡಿದರು.
ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳಿಗಿಂತಲೂ ಹೆಚ್ಚಿನ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಬುದ್ಧ ಜನತೆ ಕರಪತ್ರದಲ್ಲಿರುವ ನೈಜ ವಿಚಾರಗಳನ್ನು ಮನದಟ್ಟು ಮಾಡಿಕೊಂಡು ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರಕಾರದ ಸಾಧನೆಗಳನ್ನು ಅರಿತು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಅವರು ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಒನ್ ರ್ಯಾಂಕ್ ಒನ್ ಪೆನ್ಶನ್, ಜಿಎಸ್ಟಿ, ನೋಟ್ ಬ್ಯಾನ್ ಮುಂತಾದ ಕಠಿಣ, ದಿಟ್ಟ ಕ್ರಮಗಳನ್ನು ಕೈಗೊಂಡ ಪರಿಣಾಮವಾಗಿ ದೇಶದ ಸೈನಿಕರಲ್ಲಿ ಆತ್ಮಸ್ಥೈರ್ಯ ಹೆಚ್ಚಿದೆ ಹಾಗೂ ದೇಶದ ಆರ್ಥಿಕ ದೃಢತೆ ವೃದ್ಧಿಯಾಗಿ ಭಾರತವು ಜಗತ್ತಿನ ಐದನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದರು.
ಜನಪ್ರಿಯ ಯೋಜನೆಗಳಾದ ಕಿಸಾನ್ ಸಮ್ಮಾನ್, ಭೇಟಿ ಪಡಾವೋ ಬೇಟಿ ಬಚಾವೋ, 12 ಕೋಟಿ ಶೌಚಾಲಯಗಳು, 44 ಕೋಟಿ ಜನಧನ್ ಖಾತೆಗಳು, 9 ಕೋಟಿ ಉಚಿತ ಅಡುಗೆ ಅನಿಲ ಸಂಪರ್ಕ, 8,500ಕ್ಕೂ ಮಿಕ್ಕಿ ಜನೌಷಧಿ ಕೇಂದ್ರಗಳು, 50 ಕೋಟಿಗೂ ಹೆಚ್ಚು ಬಡವರಿಗೆ ವರ್ಷಕ್ಕೆ 5 ಲಕ್ಷ ರೂಪಾಯಿ ಮಿತಿಯ ‘ಆಯುಷ್ಮಾನ್ ಭಾರತ್’ ಆರೋಗ್ಯ ಸೇವೆ, ‘ಗರೀಬ್ ಕಲ್ಯಾಣ್’ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಉಚಿತ ‘ಅನ್ನ ಯೋಜನೆ’, ಸುಸಜ್ಜಿತ ರಸ್ತೆ ಸಂಪರ್ಕ, ಸರ್ವರಿಗೂ ನೀರು, ಸರ್ವರಿಗೂ ಸೂರು, ಸರ್ವರಿಗೂ ವಿದ್ಯುತ್ ಮುಂತಾದ ಅತ್ಯಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳ ಬಗ್ಗೆ ಎಲ್ಲೆಡೆ ಜನತೆ ಮನತುಂಬಿ, ಮುಕ್ತಕಂಠದಿಂದ ಮಾತನಾಡುತ್ತಿದ್ದಾರೆ ಎಂದರು.
‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್; ಸಬ್ ಕಾ ವಿಶ್ವಾಸ್; ಸಬ್ ಕಾ ಪ್ರಯಾಸ್’ ಘೋಷ ವಾಕ್ಯದೊಂದಿಗೆ ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ಮಹತ್ವಪೂರ್ಣ ಹೆಜ್ಜೆಗಳೊಂದಿಗೆ ಐತಿಹಾಸಿಕ 370ನೇ ವಿಧಿ ರದ್ದತಿ, ಸಮಾನ ನಾಗರಿಕ ಸಂಹಿತೆ ಜಾರಿಗೆ ಒತ್ತು, ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಪಿಎಫ್ಐ ಸಹಿತ 9 ದೇಶ ವಿರೋಧಿ ಜಿಹಾದಿ ಸಂಘಟನೆಗಳನ್ನು 5 ವರ್ಷಗಳ ಕಾಲ ನಿಷೇಧಿಸಿರುವುದು, ರಾಮ ಜನ್ಮಭೂಮಿ ವಿವಾದ ಸುಖಾಂತ್ಯ, ಟ್ರಿಪಲ್ ತಲಾಖ್ ರದ್ದತಿ, ವಿಶ್ವದಲ್ಲೇ ಯಶಸ್ವಿ ಕೋವಿಡ್ ನಿರ್ವಹಣೆ, ಅತ್ಯದ್ಭುತ ಸ್ವಂತ ವಿದೇಶಾಂಗ ನೀತಿ, ಬಾಂಗ್ಲಾ ಭಾರತ ಗಡಿ ವಿವಾದ ಅಂತ್ಯ, ಒಂದು ದೇಶ ಒಂದು ತೆರಿಗೆ, ಒಂದು ದೇಶ ಒಂದು ರೇಷನ್ ಕಾರ್ಡ್, ಪಾರ್ಲಿಮೆಂಟ್ ವಿಸ್ತಾ ಯೋಜನೆ, ಕಾಶಿ ಕಾರಿಡಾರ್, ಉಜ್ಜಯಿನಿಯ ಮಹಾಕಾಲ್ ಕಾರಿಡಾರ್ ಲೋಕಾರ್ಪಣೆ, ರೈಲ್ವೆ ಎಲೆಕ್ಟ್ರಿಫಿಕೇಷನ್, ಭಾರತೀಯ ಸೇನೆಗೆ ಏರ್ ಟ್ರಾನ್ಸ್ಪೋರ್ಟರ್ ಉತ್ಪಾದನಾ ಘಟಕ, ನೇವಿ ಏರ್ ಕ್ರಾಫ್ಟ್ ಕ್ಯಾರಿಯರ್ ಲೋಕಾರ್ಪಣೆ, ಅಯೋಧ್ಯೆಯ ಶ್ರೀರಾಮ ಮಂದಿರ, ಕಾಶಿ ಶ್ರೀ ವಿಶ್ವನಾಥ ಮಂದಿರ, ಗುಜರಾತಿನ ಶ್ರೀ ಸೋಮನಾಥೇಶ್ವರ, ಬದರಿ ಕೇದಾರನಾಥದಂತಹ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರಗಳ ಪುನರುತ್ಥಾನಕ್ಕೆ ವಿಶೇಷ ಒತ್ತು, ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣ, ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣ, ದೇಶದ ಗಡಿಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ, ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಟ್ಯಾಚು ಆಫ್ ಯುನಿಟಿ ಪ್ರತಿಮೆ ನಿರ್ಮಾಣ, ದೆಹಲಿಯಲ್ಲಿ ಕರ್ತವ್ಯ ಪಥ ನಿರ್ಮಾಣ ಸಹಿತ ಸುಭಾಷ್ ಚಂದ್ರ ಬೋಸ್ ಪುತ್ತಳಿ ಅನಾವರಣದಂತಹ ನೂರಾರು ಉಲ್ಲೇಖನೀಯ ಸಾಧನೆಗಳೊಂದಿಗೆ ವಿಶ್ವ ನಾಯಕರೆನಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳು ಜನ ಮಾನಸದಲ್ಲಿ ಹೊಸ ಭರವಸೆ ಮೂಡಿಸಿವೆ ಎಂದು ಅವರು ತಿಳಿಸಿದರು.
ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ವಿದ್ಯಾಸಿರಿ, ಬೆಳಕು, ನಮ್ಮ ಕ್ಲಿನಿಕ್, ಯಶಸ್ವಿನಿ ಮರು ಜಾರಿಗೆ ಕ್ರಮ, ಹಾಲು ಉತ್ಪಾದಕರ ಅನುಕೂಲಕ್ಕೆ ‘ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್’ ಮುಂತಾದ ಜನಪ್ರಿಯ ಯೋಜನೆಗಳ ಸಹಿತ ಐತಿಹಾಸಿಕ ಮತಾಂತರ ನಿಷೇಧ ಕಾಯ್ದೆ ಜಾರಿ, ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ, ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ, 60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಮಾಸಾಶನ ಮಂಜೂರು, ಹಿಂದುಳಿದ ವರ್ಗಗಳ 26 ಸಮುದಾಯಗಳಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಸ್ಥಾಪಿಸಲ್ಪಟ್ಟ ‘ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ಕೋಶ’ವನ್ನು ‘ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ’ವನ್ನಾಗಿ ಪರಿವರ್ತಿಸಲು ಅಗತ್ಯ ಕ್ರಮ, ಯಾತ್ರಿಕ ಸ್ನೇಹಿ ಪ್ರವಾಸೋದ್ಯಮ ನೀತಿ ನಿರೂಪಣೆ, ‘ದೀನದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ’ ಯೋಜನೆಯಡಿ 5 ಜಿಲ್ಲೆಗಳಲ್ಲಿ ತಲಾ 1,000 ಸಾಮರ್ಥ್ಯದ ವಿದ್ಯಾರ್ಥಿ ನಿಲಯ ಸಮುಚ್ವಯಗಳ ನಿರ್ಮಾಣಕ್ಕೆ ಚಾಲನೆ, ಕಾಶಿ ಯಾತ್ರಿಕರಿಗೆ ರೂ.5,000 ಪ್ರಯಾಣ ಸಬ್ಸಿಡಿ, ‘ಕುಟೀರ ಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ಸರಬರಾಜು 75 ಯುನಿಟಗಳಿಗೆ ಏರಿಕೆ, 11,133 ಮಂದಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಿರುವುದು ಮುಂತಾದ ಅಭಿವೃದ್ಧಿ ಶೀಲ ಕಾರ್ಯ ಸಾಧನೆಗಳ ಮುಂಚೂಣಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಸಾಧನೆಗಳ ಬಗ್ಗೆ ಮಾತನಾಡುತ್ತದೆ ವಿನಹ ವಿನಾಶದ ಅಂಚಿನಲ್ಲಿರುವ ಭ್ರಷ್ಟ ಕಾಂಗ್ರೆಸ್ಸಿನಂತೆ ಸುಳ್ಳು ಭರವಸೆಗಳನ್ನು ನೀಡಲಾರದು ಎಂಬುದನ್ನು ರಾಜ್ಯದ ಜನತೆ ಈಗಾಗಲೇ ಮನಗಂಡಿದ್ದಾರೆ.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಗ್ಯಾಸ್ ಸಂಪರ್ಕಕ್ಕೆ ಜನತೆ ಪಟ್ಟ ಬವಣೆ, ರಸ್ತೆಗಳ ದುಸ್ಥಿತಿ, ರೈತರ ಆತ್ಮಹತ್ಯೆ, ಕಳಪೆ ಬೀಜ ಮತ್ತು ರಸಗೊಬ್ಬರ ಪೂರೈಕೆ, ಹಿಂದೂ ಕಾರ್ಯಕರ್ತರ ಕಗ್ಗೊಲೆ, ಮುಸ್ಲಿಂ ತುಷ್ಟೀಕರಣ, ಸ್ವಜನ ಪಕ್ಷಪಾತ, ಲೋಕಾಯುಕ್ತಕ್ಕೆ ಎಳ್ಳು ನೀರು, ಮಿತಿ ಮೀರಿದ ಭ್ರಷ್ಟಾಚಾರಕ್ಕೆ ಪೂರಕವಾಗಿ ‘ಕಾಂಗ್ರೆಸಿಗರು ಮೂರು ತಲೆಮಾರಿಗೆ ಬೇಕಾಗುವಷ್ಟು ಮಾಡಿ ಇಟ್ಟಿದ್ದೇವೆ’ ಎಂಬ ಸ್ವತಃ ಮಾಜಿ ಸ್ಪೀಕರ್, ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ರವರ ಹೇಳಿಕೆ, ಈ ಎಲ್ಲಾ ನೈಜ ವಿದ್ಯಮಾನಗಳು ಹಸಿ ಹಸಿಯಾಗಿರುವಾಗ ಇನ್ನೊಮ್ಮೆ ಕರ್ನಾಟಕದ ಜನತೆ ಕಾಂಗ್ರೆಸ್ಸಿನ ಮಕ್ಮಲ್ ಟೋಪಿ ಹಾಕಿಸಿಕೊಳ್ಳಲು ಸರ್ವಥಾ ತಯಾರಿಲ್ಲ ಎಂಬುದು ಜನಜನಿತವಾಗಿದೆ ಎಂದರು.
‘ವಿಜಯ ಸಂಕಲ್ಪ ಅಭಿಯಾನ’ದ ಮೂಲಕ ಈಗಾಗಲೇ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸರಕಾರದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ವಿವರಿಸಿ ಜನತೆಯ ನಾಡಿ ಮಿಡಿತವನ್ನು ಅರಿತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತತ್ವದ ಕೇಂದ್ರ ಸರಕಾರ, ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರಗಳ ಜನಪರ ಆಡಳಿತ ಹಾಗೂ ಉದಾತ್ತ ಯೋಜನೆಗಳ ಬಗ್ಗೆ ಜನತೆಗೆ ಸಂಪೂರ್ಣ ತೃಪ್ತಿ ಇದೆ ಎನ್ನುವ ಸಕಾರಾತ್ಮಕ ಪೂರಕ ಅಂಶ ಸರ್ವವ್ಯಾಪಿ ಪ್ರಚಲಿತವಾಗಿದೆ. ಆದುದರಿಂದ ಮಗದೊಮ್ಮೆ ಉಡುಪಿ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳನ್ನು ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ಭರ್ಜರಿಯಾಗಿ ಗೆಲ್ಲುವ ಜೊತೆಗೆ ರಾಜ್ಯದಲ್ಲಿ ಮಗದೊಮ್ಮೆ ಜನಪರ, ಅಭಿವೃದ್ಧಿ ಪರ ಬಿಜೆಪಿ ಸರಕಾರ ಆಡಳಿತದ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ. ಕಾಂಗ್ರೆಸ್ಸಿನ ನಾಟಕೀಯ, ಬೂಟಾಟಿಕೆಯ ಡೋಂಗಿ ರಾಜಕಾರಣಕ್ಕೆ ಜನತೆ ಎಂದಿಗೂ ಬಲಿಯಾಗಲಾರರು ಎಂದು ಕುಯಿಲಾಡಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಶಕ್ತಿ ಕೇಂದ್ರದ ಅಧ್ಯಕ್ಷ ಹರ್ಷಿತ್ ಪೂಜಾರಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ರಾಜೇಶ್ ಅಂಬಾಡಿ, ಗ್ರಾಮ ಪಂಚಾಯತ್ ಸದಸ್ಯರಾದ ರತ್ನಾಕರ್ ಕೋಟ್ಯಾನ್, ಪ್ರೇಮ ಕುಂದರ್, ಬಿಜೆಪಿ ಕಾಪು ಮಂಡಲ ಒಬಿಸಿ ಮೋರ್ಚಾದ ಪ್ರವೀಣ್ ಸೇರಿಗಾರ್, ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ವಸಂತಿ ಪೂಜಾರಿ, ವಿವಿಧ ಸ್ತರದ ಪದಾಧಿಕಾರಿಗಳಾದ ಇಂದಿರಾ ಪೂಜಾರಿ ಅಂಬಾಡಿ, ಲಕ್ಷ್ಮೀಶ ಅಂಬಾಡಿ, ಗುರುರಾಜ್ ಜಿ.ಎಸ್ ಮಟ್ಟು, ಪ್ರವೀಣ್ ಪೂಜಾರಿ, ಪ್ರಸಾದ್ ಆಚಾರ್ಯ, ನಿತೇಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.