ಸ್ಕೀಮ್ ಹೆಸರಿನಲ್ಲಿ ಗ್ರಾಹಕರಿಗೆ ಮಹಿಳೆಯಿಂದ ವಂಚನೆ
ಕುಂದಾಪುರ: ಅಧಿಕ ಬಡ್ಡಿ ನೀಡುವ ನೆಪದಲ್ಲಿ ನಾಗರೀಕರಿಂದ ಕೋಟಿ ರೂ. ಗೂ ಅಧಿಕ ಹಣ ಸಂಗ್ರಹಿಸಿದ ಮಹಿಳೆ ಊರು ಬಿಟ್ಟು ಪರಾರಿಯಾದ ಘಟನೆ ಕುಂದಾಪುರದ ಹಕ್ಲಾಡಿ ಗ್ರಾಮದ ಕುಂದಬಾರಂದಾಡಿಯಲ್ಲಿ ನಡೆದಿದೆ.
ಹಕ್ಲಾಡಿ ಗ್ರಾಮದ ಪದ್ಮಾ ಹೆಗ್ಡೆ ಎಂಬಾಕೆ ಕೊಲ್ಲೂರು ಮೂಕಾಂಬಿಕಾ ಪದ್ಮಕೃಷ್ಣ ಮಹಿಳಾ ಕಲ್ಯಾಣ ಯೋಜನೆಯಲ್ಲಿ ಆಲೂರು ಹಾಗೂ ಹಕ್ಲಾಡಿ ಗ್ರಾಮದ ನೂರಾರು ಮಹಿಳೆಯರಿಂದ ಚೀಟಿ ಹೆಸರಿನಲ್ಲಿ 1. 7 ಕೋಟಿ ರೂ. ಗೂ ಅಧಿಕ ಹಣ ಸಂಗ್ರಹಿಸಿ ಕಚೇರಿ, ಬಾಡಿಗೆ ಮನೆ ಖಾಲಿ ಮಾಡಿ ಪರಾರಿಯಾಗಿದ್ದಾಳೆ.
ಉದ್ಯೋಗ ಖಾತ್ರಿ ಯೋಜನೆ, ಕೂಲಿ ಹಾಗೂ ಬೀಡಿ ಕಟ್ಟುವ ಮಹಿಳೆಯರು, ಪುರುಷರೂ ಚೀಟಿಗೆ ಹಣ ಕಟ್ಟಿದ್ದಾರೆ. ಈಕೆ ಕೊಲ್ಲೂರು ನೂಜಾಡಿ ಹೊಡ್ಡುಬೈಲು ಹಾಗೂ ಆಲೂರಲ್ಲಿ ಕಚೇರಿ ತೆರೆದಿದ್ದಳು. ನಿಗದಿತ ಮೊತ್ತವನ್ನು ಕಂತುಗಳ ಲೆಕ್ಕದಲ್ಲಿ ಕಟ್ಟಿದರೆ ಕೊನೆಗೆ ಒಟ್ಟಾಗುವ ಮೊತ್ತಕ್ಕಿಂತ ಒಂದೂವರೆ ಪಟ್ಟು ಹಣ ನೀಡುವುದಾಗಿ ಈಕೆ ನಂಬಿಸಿದ್ದಳು. 500 ರೂ. ನಂತೆ 50 ಕಂತು ಕಟ್ಟಿದರೆ 34 ಸಾವಿರ ರೂ. , 1 ಲಕ್ಷ ರೂ. ಗಳನ್ನು ಒಂದು ವರ್ಷ ಠೇವಣಿ ಇಟ್ಟರೆ 1. 60 ಲಕ್ಷ ರೂ. , ಒಬ್ಬ ಗ್ರಾಹಕರನ್ನು ಸೇರ್ಪಡೆ ಮಾಡಿದರೆ 100 ರೂ. ಕಮಿಷನ್, ಹೀಗೆ ವಿವಿಧ ರೀತಿ ಆಮಿಷ ಒಡ್ಡಿ 131 ಗ್ರಾಹಕರನ್ನು ಸೇರ್ಪಡೆಗೊಳಿಸಿದ್ದಳು. ಬಗ್ವಾಡಿಯ ಕಚೇರಿಯಲ್ಲಿ ಪದ್ಮಾ ಹೆಗ್ಡೆ, ಸೆಲ್ವರಾಜ, ಪುತ್ರ ದಿಶಾಂತ್ ಹೆಗ್ಡೆ, ಪುತ್ರಿ ಸುಹಾನಿ ಹೆಗ್ಡೆ ಹಣ ಸ್ವೀಕರಿಸಿ ಕಾರ್ಡ್ಗೆ ಸಹಿ ಹಾಕುತ್ತಿದ್ದರು. ಇದೀಗ ವಂಚಕಿ ಕೋಟಿ ರೂ. ಗೂ ಅಧಿಕ ಹಣದೊಂದಿಗೆ ಪರಾರಿಯಾಗಿದ್ದು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ರತ್ನಾ ಎಂಬುವವರು ದೂರು ನೀಡಿದ್ದಾರೆ.