ಕರಾಟೆ ಮಾಸ್ಟರ್ ನಿಂದ ಬಾಲಕಿಗೆ ಕಿರುಕುಳ ಪ್ರಕರಣ : ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ.
ಉಡುಪಿ :ನಗರದಲ್ಲಿ ಕರಾಟೆ ತರಗತಿಯಲ್ಲಿ ನಾಲ್ಕು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಗೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪೋಕ್ಸೊ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯವು 10ವರ್ಷ ಜೈಲುಶಿಕ್ಷೆ ಮತ್ತು ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ ಒಂದು ವರ್ಷ ಹೆಚ್ಚುವರಿ ಸಾದಾ ಸಜೆ ವಿಧಿಸಿ ಆದೇಶಿಸಿದೆ ಎಂದು ತಿಳಿದು ಬಂದಿದೆ.
2020ರ ಸೆ.27ರಂದು ಬಾಲಕಿಯ ತಾಯಿಗೆ ಕರೆ ಮಾಡಿದ ಆರೋಪಿಯು ಈ ದಿನ ತರಗತಿ ಇದ್ದು, ಬಾಲಕಿಯನ್ನು ಕಳುಹಿಸಿಕೊಂಡುವಂತೆ ಕೋರಿ ಕೊಂಡಿದ್ದನು. ಅದರಂತೆ ಬಾಲಕಿಯ ತಾಯಿ ತರಗತಿಗೆ ಹೋಗುವಂತೆ ಬಾಲಕಿಗೆ ತಿಳಿಸಿದ್ದರು. ಆದರೆ ಬಾಲಕಿ ತರಗತಿಗೆ ಹೋಗಲು ಒಪ್ಪದೆ ಅಳುತ್ತಿದ್ದಳು. ಆಗ ತಾಯಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದ್ದು, ಬಾಲಕಿ ತಾಯಿ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾಪು ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ತನಿಖೆ ನಡೆಸಿ ಆರೋಪಿ ವಿರುದ್ಧ ದೋಷರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆರೋಪಿಗೆ ಪೊಕ್ಸೋ ಕಾಯ್ದೆಯಡಿ 10 ವರ್ಷ ಜೈಲು, 22 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ ಒಂದು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕು.
ದಂಡದ ಮೊತ್ತದಲ್ಲಿ 17,000 ರೂ. ನೊಂದ ಬಾಲಕಿಗೆ ಪರಿಹಾರ ಮತ್ತು ರೂ.5000 ಸರ್ಕರಕ್ಕೆ ಪಾವತಿಸುವಂತೆ ಸೂಚಿಸಿದ್ದಾರೆ. ನೊಂದ ಬಾಲಕಿಗೆ ಸರ್ಕಾರದಿಂದ ಪ್ರತ್ಯೇಕವಾಗಿ ರೂ.1 ಲಕ್ಷ ಪರಿಹಾರ ನೀಡಲು ಸಹ ಆದೇಶಿಸಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ಉಡುಪಿ ಪೋಕ್ಸೊ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದ ಮಂಡಿಸಿದ್ದರು.