ಕರಾವಳಿ

ಪ್ಲಾಸ್ಟಿಕ್ ತ್ಯಾಜ್ಯದಿಂದ ನಿರ್ಮಿಸಿದ ರಸ್ತೆ : ಯಶಸ್ವಿಯಾದ ಪ್ರಯೋಗ

ಉಡುಪಿ : ಸಾರ್ವಜನಿಕರ ದೈನಂದಿನ ಜೀವನದಲ್ಲಿ ಹಾಸುಹೊಕ್ಕಿರುವ ಪ್ಲಾಸ್ಟಿಕ್ ನ ಬಳಕೆಯ ನಂತರ, ಅದರ ತ್ಯಾಜ್ಯ ವಿಲೇವಾರಿ ಸಮಸ್ಯೆ ಎಲ್ಲೆಡೆ ಕಂಡುಬರುತ್ತಿದೆ. ಪ್ಲಾಸ್ಟಿಕ್ ನಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಬೇಕಾದ ಬೃಹತ್ ಸಮಸ್ಯೆಯೂ ನಮ್ಮ ಮುಂದಿದೆ. ಪ್ಲಾಸ್ಟಿಕ್ ನ್ನು ಒಂದು ತ್ಯಾಜ್ಯವೆಂದು ಪರಿಗಣಿಸುವ ಬದಲಿಗೆ ಅದನ್ನು ಸೂಕ್ತ ರೀತಿಯಲ್ಲಿ ಮರುಬಳಕೆ ಮಾಡಿದರೆ ಅದು ಒಂದು ಸಂಪನ್ಮೂಲವಾಗುತ್ತದೆ ಎಂಬುದಕ್ಕೆ ಉಡುಪಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ನಿರ್ಮಿಸಿದ ರಸ್ತೆ ಸಾಕ್ಷಿಯಾಗಿದೆ.

ಪ್ಲಾಸ್ಟಿಕ್ ತ್ಯಾಜ್ಯದ ಮರುಬಳಕೆ ಕುರಿತಂತೆ 2019 ರ ಡಿಸೆಂಬರ್ 10 ರಂದು ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಅಡಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಾಣ ಮಾಡುವ ಕಾರ್ಯಾಗಾರವನ್ನು ಉಡುಪಿ ಜಿಲ್ಲಾ ಪಂಚಾಯತ್ ನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತ ಹಾಗೂ ಪ್ಲಾಸ್ಟಿಕ್ ಮ್ಯಾನ್ ಖ್ಯಾತಿ ಪಡೆದ ತಮಿಳುನಾಡಿನ ಡಾ.ವಾಸುದೇವನ್ ಇವರು ಜಿಲ್ಲೆಯ ವಿವಿಧ ಇಲಾಖೆ ಹಾಗೂ ಸಂಸ್ಥೆಗಳ ಇಂಜಿನಿಯರ್ ಗಳು ಮತ್ತು ಅಧಿಕಾರಿಗಳಿಗೆ ತರಬೇತಿ ನೀಡಿದ್ದರು.

ಉಡುಪಿ ಜಿಲ್ಲೆಯ SLRM ಕೇಂದ್ರಗಳಲ್ಲಿ ಶೇಖರಣೆಯಾಗಿದ್ದ ಪ್ಲಾಸ್ಟಿಕ್ ಗಳನ್ನು ವಿಲೇವಾರಿ ಮಾಡುವುದು ಸವಾಲಾಗಿದ್ದು, ಉತ್ತಮ ಗುಣಮಟ್ಟದ ಪ್ಲಾಸ್ಟಿಕ್ ಗಳಿಗೆ ಸ್ಥಳೀಯವಾಗಿ ಬೇಡಿಕೆ ಇದ್ದು,ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್, Multi layered plastic (MLP), Theramocol, foams ಮುಂತಾದವುಗಳಿಗೆ ಯಾವುದೇ ಬೇಡಿಕೆ ಇಲ್ಲದೇ ಇವುಗಳನ್ನು ವಿಲೇವಾರಿ ಮಾಡುವುದು ಕಷ್ಟಸಾಧ್ಯವಾಗಿತ್ತು.

ಇಂತಹ ವ್ಯರ್ಥ ಪ್ಲಾಸ್ಟಿಕ್ ಗಳನ್ನು ರಸ್ತೆ ನಿರ್ಮಾಣಕ್ಕೆ ಮರುಬಳಕೆ ಮಾಡುವ ಮೂಲಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸಬಹುದು ಎಂದು ಡಾ. ವಾಸುದೇವನ್ ಮಾಹಿತಿ ನೀಡಿ, 1 ಕಿ.ಮಿ ರಸ್ತೆ ಗೆ ಸುಮಾರು 100 KG ವ್ಯರ್ಥ ಪ್ಲಾಸ್ಟಿಕ್ ಅನ್ನು ಬಳಕೆ ಮಾಡುವ ಮೂಲಕ ಬಿಟ್ಯುಮನ್ (ಡಾಂಬರ್) ಉಳಿತಾಯ ಮಾಡಬಹುದು ಎಂದು ಹೇಳಿದ್ದರು.

ತರಬೇತಿಯ ನಂತರ ಪ್ರಾಯೋಗಿಕವಾಗಿ ಇಂತಹ ವ್ಯರ್ಥ ಪ್ಲಾಸ್ಟಿಕ್ ಗಳನ್ನು ಮರುಬಳಕೆ ಮಾಡುವ ಉದ್ದೇಶದಿಂದ, ಅದೇ ದಿನ ಜಿಲ್ಲೆಯಲ್ಲಿ ಮೊದಲ ಬಾರಿಗೆ ಉಡುಪಿ ಜಿಲ್ಲೆಯ ಅಲೆವೂರು ಗ್ರಾಮ ಪಂಚಾಯತ್ ವ್ಯಾಪಿಯಲ್ಲಿ ಪ್ರಾಯೋಗಿಕವಾಗಿ 300 ಮೀಟರ್ ಉದ್ದದ ರಸ್ತೆ ನಿರ್ಮಾಣ ಮಾಡುವ ಮೂಲಕ ಇದರ ಪ್ರಾತ್ಯಕ್ಷಿಕೆಯನ್ನು ಮಾಡಲಾಗಿತ್ತು.

ಅಂದು ವ್ಯರ್ಥ ಪ್ಲಾಸ್ಟಿಕ್ ನಿಂದ ನಿರ್ಮಿಸಿದ ಈ ರಸ್ತೆಗೆ ಪ್ರಸ್ತುತ 3 ವರ್ಷ ಕಳೆದರೂ ಕೂಡಾ , ಇಂದಿಗೂ ರಸ್ತೆಯಲ್ಲಿ ಒಂದೇ ಒಂದು ರಸ್ತೆಗುಂಡಿಗಳು ನಿರ್ಮಾಣವಾಗದೇ ಇದ್ದು, ಪ್ಲಾಸ್ಟಿಕ್ ಬಳಸಿ ನಿರ್ಮಾಣ ಮಾಡುವ ರಸ್ತೆ ಗುಣಮಟ್ಟದಿಂದ ಕೂಡಿದ್ದು, ಬಾಳಿಕೆ ಬರುತ್ತದೆಯೇ ಎಂದು ಅನುಮಾನ ವ್ಯಕ್ತಪಡಿಸಿದವರಿಗೆ ಸೂಕ್ತ ಉತ್ತರ ನೀಡುವಂತೆ,ರಸ್ತೆಯು ದೀರ್ಘ ಕಾಲ ಬಳಕೆ ಬರುವುದರ ಜೊತೆಗೆ ನಿರ್ವಹಣೆ ವೆಚ್ಚ ಕೂಡಾ ಕಡಿಮೆ ಎಂಬುದಕ್ಕೆ ಈ ರಸ್ತೆ ಸಾಕ್ಷಿಯಾಗಿದೆ.

ಅಲೆವೂರು ಮಾತ್ರವಲ್ಲದೇ ಜಿಲ್ಲೆಯ ಮರವಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಸಹ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಎರಡು ವರ್ಷಗಳ ಹಿಂದೆ 120 ಮೀ ಉದ್ದದ ರಸ್ತೆಯನ್ನು ವ್ಯರ್ಥ ಪ್ಲಾಸ್ಟಿಕ್ ಬಳಸಿ ನಿರ್ಮಿಸಲಾಗಿದ್ದು, ಅದೂ ಸಹ ಇಂದಿಗೂ ಉತ್ತಮ ಗುಣಮಟ್ಟದಿಂದ ಕೂಡಿದೆ.

ಪ್ಲಾಸ್ಟಿಕ್ ಬಳಸಿ ನಿರ್ಮಿಸಿದ ರಸ್ತೆಯು ಧೀರ್ಘ ಬಾಳಿಕೆ ಹಾಗೂ ಉತ್ತಮ ಗುಣಮಟ್ಟದಿಂದ ಕೂಡಿರಲಿದೆ ಎಂಬುದಕ್ಕೆ ಅಲೆವೂರು ನಲ್ಲಿ 3 ವರ್ಷದ ಹಿಂದೆ ನಿರ್ಮಿಸಿರುವ ರಸ್ತೆ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತ್ ಇಂಜಿನಿಯರಿAಗ್ ವಿಭಾಗ , ಕೆ.ಆರ್.ಐ.ಡಿ.ಎಲ್ ಸೇರಿದಂತೆ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಎಲ್ಲಾ ಇಲಾಖೆಗಳಲ್ಲಿನ ರಸ್ತೆ ಕಾಮಗಾರಿಗಳಲ್ಲಿ ಶೇ. 10 ರಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡ್ಡಾಯವಾಗಿ ಬಳಕೆ ಮಾಡುವ ಕುರಿತಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಇದಕ್ಕೆ ಅಗತ್ಯವಿರುವ ವ್ಯರ್ಥ ಪ್ಲಾಸ್ಟಿಕ್ ಸಂಗ್ರಹವು ವಂಡ್ಸೆ, ಶಂಕರನಾರಾಯಣ, ಹೆಬ್ರಿ ಹಾಗೂ ನಿಟ್ಟೆ ಗ್ರಾಮ ಪಂಚಾಯತ್ ಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ವ್ಯರ್ಥ ಪ್ಲಾಸ್ಟಿಕ್ ತ್ಯಾಜ್ಯದ ಸೂಕ್ತ ವಿಲೇವಾರಿ ಜೊತೆಗೆ ರಸ್ತೆ ನಿರ್ಮಾಣಕ್ಕೆ ತಗಲುವ ವೆಚ್ಚವೂ ಕಡಿಮೆಯಾಗಲಿದೆ.:ಪ್ರಸನ್ನ ಹೆಚ್. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯತ್.ಉಡುಪಿ

Related Articles

Leave a Reply

Your email address will not be published. Required fields are marked *

Back to top button
error: Content is protected !!