ಕರಾವಳಿ
ಜಿಲ್ಲೆಯ ಜನತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸವಲತ್ತು ವಿತರಣೆಯಲ್ಲಿ ಸಂಪೂರ್ಣ ಗುರಿ ಸಾಧನೆ: ಸಚಿವ ಎಸ್.ಅಂಗಾರ.
ಉಡುಪಿ, ಮಾರ್ಚ್ 10 : ಉಡುಪಿ ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಸವಲತ್ತುಗಳನ್ನು ಶೇ.98 ರಷ್ಟು ಫಲಾನುಭವಿಗಳಿಗೆ ತಲುಪಿಸುವ ಮೂಲಕ ಜಿಲ್ಲೆಯ ನಾಗರೀಕರ ಆರ್ಥಿಕ ಅಭಿವೃದ್ಧಿಗೆ ನೆರವು ನೀಡಲಾಗಿದ್ದು, ಮಾರ್ಚ್ ಮಾಹೆಯ ಒಳಗೆ ಸಂಪೂರ್ಣ ಗುರಿ ಸಾಧಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು.
ಅವರು ಇಂದು ಕಟಪಾಡಿಯಲ್ಲಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ನಡೆದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮಾತೃವಂದನಾ ಯೋಜನೆಯಡಿಯಲ್ಲಿ 38,915 ಫಲಾನುಭವಿಗಳಿಗೆ 17.14 ಕೋಟಿ ರೂ. ನೀಡಲಾಗಿದ್ದು, ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿಗೆ ಪ್ರತೀ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಇದುವರೆಗೆ 1,75,265 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿ 269 ಕೋಟಿ ರೂ. ವೆಚ್ಚ ಮಾಡಲಾಗಿದೆ. ಮೀನುಗಾರರ ಅನುಕೂಲಕ್ಕಾಗಿ 8030 ನಾಡದೋಣಿಗಳಿಗೆ 10 ತಿಂಗಳ ಕಾಲ ತಲಾ 300 ಲೀ. ಸೀಮೆಎಣ್ಣೆ ಹಾಗೂ ಯಾಂತ್ರೀಕೃತ ಬೋಟುಗಳಿಗೆ 2.5 ಲಕ್ಷ ಕಿ.ಲೋ. ಲೀಟರ್ ಡೀಸೆಲ್ ವಿತರಿಸಲಾಗಿದ್ದು, ಮೀನು ಉತ್ಪಾದನೆಯಲ್ಲಿ ರಾಜ್ಯವು ದೇಶದಲ್ಲೇ 3 ನೇ ಸ್ಥಾನ ಪಡೆದಿದೆ ಎಂದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಿದ್ದು, ಪ್ರತೀ ಮನೆಯಲ್ಲಿ ಶೌಚಾಲಯಗಳ ನಿರ್ಮಾಣ, ಮನೆ ಮನೆಗೆ ಶುದ್ಧ ಕುಡಿಯವ ನೀರು ಸೌಲಭ್ಯ, ಕೋವಿಡ್-19 ಅವಧಿಯಲ್ಲಿ 240 ಕೋಟಿ ಗೂ ಅಧಿಕ ಉಚಿತ ಲಸಿಕೆ ವಿತರಣೆ, ಪಿಎಂ ಗರೀಬ್ ಯೋಜನೆಯಡಿ ಉಚಿತ ಪಡಿತರ ವಿತರಣೆ, ದೀನ್ ದಯಾಳ್ ಯೋಜನೆಯಡಿ ವಿದ್ಯುತ್ ಸಂಪರ್ಕ, ಉಜ್ವಲ ಗ್ಯಾಸ್ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ, ಜನೌಷಧಿ ಕೇಂದ್ರಗಳ ಮೂಲಕ ಅತ್ಯಂತ ಕಡಿಮೆ ದರದಲ್ಲಿ ಔಷಧಗಳ ಪೂರೈಕೆ ಹಾಗೂ ವಸತಿ ಸೌಲಭ್ಯಗಳನ್ನು ಒದಗಿಸುವ ಮೂಲಕ ಎಲ್ಲಾ ಸಮುದಾಯದ ಜನತೆಯ ಅಭಿವೃದ್ಧಿಗೆ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಪಡೆಯುವಂತೆ ತಿಳಿಸಿದರು.
ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನೀಲ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ನಾಗರೀಕರಿಗೆ ಉತ್ತಮ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಜಿಲ್ಲೆಯಲ್ಲಿ 7475 ಸಂಜೀವಿನಿ ಸ್ವ-ಸಹಾಯ ಗುಂಪುಗಳಿಗೆ 51 ಕೋಟಿ ರೂ. ಗಳನ್ನು ವಿವಿಧ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ನೀಡಲಾಗಿದೆ. ಪಿಎಂ ಕಿಸಾನ್ ಯೋಜನೆಯಡಿ ಜಿಲ್ಲೆಯ 1,53,000 ರೈತರಿಗೆ ರೂ. 10,000 ಗಳನ್ನು ನೀಡಲಾಗಿದೆ. 4 ಹೊಸ ತಾಲೂಕುಗಳಲ್ಲಿ ನೂತನ ತಾಲೂಕು ಆಡಳಿತ ಸೌಧಗಳನ್ನು ನಿರ್ಮಿಸಿ ಆಡಳಿತ ಯಂತ್ರವನ್ನು ಚುರುಕುಗೊಳಿಸಲಾಗಿದೆ. ಪಶ್ಚಿಮ ವಾಹಿನಿ ಯೋಜನೆಯ ಮೂಲಕ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ಅಂತರ್ಜಲ ವೃದ್ಧಿಸುವ ಮೂಲಕ ಕೃಷಿ ಚಟುವಟಿಕೆಗಳಿಗೆ ನೆರವು ನೀಡಲಾಗಿದೆ. ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಬಗೆಹರಿಸಿ ಜಿಲ್ಲೆಯಲ್ಲಿ 35,000 ಎಕ್ರೆ ಜಮೀನನ್ನು ಕಂದಾಯ ಇಲಾಖೆಗೆ ನೀಡುವ ಮೂಲಕ ಹಲವು ಮಂದಿಗೆ ಹಕ್ಕುಪತ್ರ ವಿತರಿಸಲು ಸಾಧ್ಯವಾಗಿದೆ. ವಿದ್ಯಾನಿಧಿ, ಬೆಳಕು ಯೋಜನೆ, ಮನೆ ಬಾಗಿಲಿಗೆ ಪಿಂಚಣಿ, ಗ್ರಾಮ ಒನ್ ಕೇಂದ್ರಗಳ ಆರಂಭ ಮುಂತಾದ ಹಲವು ಕಾರ್ಯಕ್ರಮಗಳ ಮೂಲಕ ಸರ್ಕಾರದ ಹಲವು ಯೋಜನೆಗಳ ಪ್ರಯೋಜನವನ್ನು ಜನರಿಗೆ ತಲುಪಿಸಲಾಗಿದೆ ಎಂದರು.
ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ, ಉಡುಪಿ ಶಾಸಕ ರಘುಪತಿ ಭಟ್, ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ, ದಿ ಮೈಸೂರು ಎಲೆಕ್ಟಿçÃಕಲ್ ಇಂಡಸ್ಟಿçÃಸ್ ಲಿಮಿಟೆಡ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಎಸ್ ಆಚಾರ್ಯ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಯತೀಶ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಎ.ಎಸ್ಪಿ ಸಿದ್ದಲಿಂಗಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಸ್ವಾಗತಿಸಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ ನಿರೂಪಿಸಿದರು.