ನಾರಾಯಣ ಗುರು ಅಭಿವೃದ್ಧಿ ನಿಗಮ ಕುರಿತು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲಿ: ಪ್ರವೀಣ್ ಎಂ ಪೂಜಾರಿ
ಸಮಸ್ತ ಈಡಿಗ ಬಿಲ್ಲವ ಸಮಾಜವು ಸಮಗ್ರ ಅಭಿವೃದ್ಧಿಯ ಸಲುವಾಗಿ ಸೂಕ್ತ ಅನುದಾನದ ನಿಗದಿಯೊಂದಿಗೆ ನಾರಾಯಣ ಗುರು ಅಭಿವೃದ್ಧಿ ನಿಗಮ ಕುರಿತಂತೆ ಬಹುಕಾಲದಿಂದಲೂ ಬೇಡಿಕೆಯಿಡುತ್ತಾ ಬಂದಿದೆ.ಕಳೆದ ಬಾರಿಯ ಸರಕಾರ ಕೊನೆಕ್ಷಣದಲ್ಲಿ ಒಮ್ಮೆ ಕೋಶವೆಂದು, ನಂತರ ನಿಗಮವೆಂದು ಘೋಷಣೆಯನ್ನಷ್ಟೆ ಮಾಡಿದೆ.ಈ ಸಂದರ್ಭದಲ್ಲಿ ವ್ಯವಸ್ಥಿತ ನಿಗಮ ರಚನೆಯ ಕುರಿತು ಪ್ರಬಲವಾದ ಚಿಂತನೆ ಹೊಂದಿದ್ದೇವೆಂದು ಮತ್ತು ತಮ್ಮ ಕರಾವಳಿ ಪ್ರಣಾಳಿಕೆಯಲ್ಲೆ ನಿಗಮಕ್ಕೆ ವಾರ್ಷಿಕ 250 ಕೋಟಿಯಂತೆ ಐದು ವರ್ಷಕ್ಕೆ 1250 ಕೋಟಿ ರೂಪಾಯಿ ಅನುದಾನ ಘೋಷಣೆಯನ್ನು ಕೂಡ ಮಾಡಿದ ಪ್ರಸ್ತುತ ಸರ್ಕಾರದ ಈ ಬಜೆಟ್‌ನಲ್ಲಿ ಅದ್ಯಾವುದರ ಸುದ್ದಿಯೆ ಇಲ್ಲದಿರುವುದು ಪ್ರಶ್ನಾರ್ಹವಾಗಿದೆ.ಯಾವುದೇ ಪಕ್ಷವನ್ನು ಪ್ರತಿನಿಧಿಸುವ ಸರ್ಕಾರವಾಗಲಿ ಬಿಲ್ಲವರಿಗೆ ಕೇವಲ ಅಮಿಷಗಳನ್ನು ಪ್ರಕಟಿಸಿ ಓಟ್ ಬ್ಯಾಂಕ್‌ಗೋಸ್ಕರ ಬಳಸಿಕೊಳ್ಳುವ ಜಾಣತನವನ್ನು ಸಾಬೀತುಪಡಿಸುತ್ತಿದೆ ವಿನಹ ನೈಜವಾಗಿ ಯಾವುದೇ ಸವಲತ್ತುಗಳನ್ನು ನೀಡಲು ಮುಂದಾಗುತ್ತಿಲ್ಲ.ನಮ್ಮ ಸಮಾಜ ಇಂತಹ ವಿಷಯಗಳ ಕುರಿತು ಜಾಗೃತಗೊಳ್ಳಬೇಕಾಗಿರುವುದು ಅತ್ಯಂತ ಅವಶ್ಯವಾಗಿದೆ.ನಾವು ಮತ್ತೆ ಸಮಾವೇಶದಂತಹ ಸಂಘಟಿತ ಪ್ರಯತ್ನಗಳಿಗೆ ಮುಂದಾಗುವ ಮುನ್ನ ಸರ್ಕಾರ ನಿಗಮವನ್ನು ಸೂಕ್ತ ಅನುದಾನದೊಂದಿಗೆ ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುವಂತೆ ಬೇಡಿಕೆಯಿಡುತ್ತಿದ್ದೇವೆಂದು ಉಡುಪಿ ಜಿಲ್ಲಾ ಯುವ ವೇದಿಕೆ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.