ಉಡುಪಿ ನಾರಾಯಣ ಗುರು ಜಯಂತಿ ಆಚರಣೆಯಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ : ಪ್ರವೀಣ್ ಎಂ ಪೂಜಾರಿ
ಬ್ರಹ್ಮಶ್ರೀ ನಾರಾಯಣ ಗುರುಗಳ 169 ನೇ ಜನ್ಮ ದಿನಾಚರಣೆಯು ಸರ್ಕಾರಿ ಕಾರ್ಯಕ್ರಮವಾಗಿ ಉಡುಪಿ ಜಿಲ್ಲಾಡಳಿತ ವತಿಯಿಂದ ಬನ್ನಂಜೆ ನಾರಾಯಣ ಗುರು ಆಡಿಟೋರಿಯಂನಲ್ಲಿ ಜರಗಿತು. ಈ ಸಂದರ್ಭದಲ್ಲಿ ಖುದ್ದು ಜಿಲ್ಲಾಧಿಕಾರಿ,ಜಿಪಂ ಸಿಇಒ ಅನುಪಸ್ಥಿತಿ ಇದ್ದರು. ಜಿಲ್ಲಾ ಉಸ್ತುವಾರಿ ಸಚಿವರೂ ಇರಲಿಲ್ಲ. ಉಡುಪಿ,ಕಾಪು ವಿಧಾನಸಭಾ ಕ್ಷೇತ್ರದ ಶಾಸಕರು, ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೊರತುಪಡಿಸಿ ಪ್ರೋಟೋಕಾಲ್ ಪ್ರಕಾರ ಇತರ ಶಾಸಕರುಗಳು ಮತ್ತು ಜನಪ್ರತಿನಿಧಿಗಳು ಕೂಡ ಭಾಗವಹಿಸಲಿಲ್ಲ. ಕಾರ್ಯಕ್ರಮದಲ್ಲಿ ತೀರಾ ಕಡಿಮೆ ಸಂಖ್ಯೆಯ ಸಭಾಸದರಿದ್ದರು. ಇವೆಲ್ಲವನ್ನು ಗಮನಿಸಿದಾಗ ಗುರು ಜಯಂತಿ ಕೇವಲ ಸರ್ಕಾರಿ ಕಾರ್ಯಕ್ರಮವಾಗಿ ನೀರಸ ಮಟ್ಟದಲ್ಲಿ ಜರಗಿರುವುದು ಸ್ಪಷ್ಟವಾಗುತ್ತದೆ. ವಿಶೇಷವಾಗಿ ಯುವಜನತೆಗೆ ಮತ್ತು ಜನಸಾಮಾನ್ಯರಿಗೆ ಗುರುಗಳ ಸಂದೇಶ ತಲುಪಿಸುವ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದ್ದು ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಉತ್ತಮ ತಯಾರಿ ನಡೆಸಬೇಕೆಂದು ಆಶಿಸುತ್ತೇವೆ. ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ,ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸುವುದು ಸೇರಿದಂತೆ ಸಾಕಷ್ಟು ಪ್ರಚಾರದೊಂದಿಗೆ ಅರ್ಥಪೂರ್ಣ ಆಚರಣೆಗೆ ಒತ್ತುನೀಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ಅನುಷ್ಠಾನಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಜಿಲ್ಲಾಡಳಿತ ಕಾಳಜಿ ವಹಿಸಬೇಕೆಂದು ಕಳಕಳಿಯಿಂದ ವಿನಂತಿಸುತ್ತೇವೆಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದರು.