ಶ್ರೀನಾರಾಯಣ ಗುರು ಅಭಿವೃದ್ದಿ ನಿಗಮ ಅನುದಾನ: ಮತ್ತೆ ನೆನೆಗುದಿಗೆ !
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರಕಾರವು ತನ್ನ ಪಕ್ಷದ ಚುನಾವಣಾ ಪ್ರಣಾವಳಿಕೆಯಲ್ಲಿ ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅನುದಾನವನ್ನು ತಮ್ಮ ಸರಕಾರ ಆಡಳಿತಕ್ಕೆ ಬಂದರೆ ನೀಡುವುದಾಗಿ ಭರವಸೆಯನ್ನು ನೀಡಿದ್ದು ಸರಕಾರ ಆಡಳಿತಕ್ಕೆ ಬಂದು 2 ಬಜೆಟನ್ನು ಮಂಡಿಸಿದಾಗ್ಯೂ ಯಾವುದೇ ಅನುದಾನವನ್ನು ನೀಡದೆ ಸಮಸ್ತ ಬಿಲ್ಲವ/ಈಡಿಗ ಸಮಾಜಕ್ಕೆ ವಂಚಿಸಿದೆ.
ಈ ರೀತಿಯ ದೋರಣೆಯು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಸಮಾಜದ ಅಭಿವೃದ್ಧಿ ಹಾಗೂ ಶ್ರೀ ನಾರಾಯಣ ಗುರುಗಳ ತತ್ವಾಚಾರಗಳ ಅನುಷ್ಠಾನ ಗೊಳಿಸಲು ಬುನಾದಿಯೇ ಹಾಕಲಾಗದಂತಾಗಿದೆ. ಬಿಲ್ಲವ/ಈಡಿಗ ಹಿಂದುಳಿದ ಸಮಾಜದ ಅಭಿವೃದ್ಧಿಗೆ ಅನುದಾನದ ಭರವಸೆಯನ್ನು ನೀಡಿದ ಸರಕಾರ ಕೇವಲ ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ ಎಂದು ನಿರೂಪಿಸಿದೆ.
ಹಿಂದಿನ ಮತ್ತು ಈಗಿನ ಸರಕಾರ ಬಿಲ್ಲವ/ಈಡಿಗ ಸಮುದಾಯದ ಸಮಾಜಕ್ಕೆ ಕೇವಲ ಚುನಾನಣಾ ಸಮಯದಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಪ್ರತಿ ಬಜೆಟ್ನಲ್ಲೂ ಶ್ರೀನಾರಾಯಣ ಗುರು ಅಭಿವೃದ್ದಿ ನಿಗಮಕ್ಕೆ ಯಾವುದೇ ಅನುದಾನವನ್ನು ನೀಡದೆ ಪಂಗನಾಮ ಹಾಕುವುದು ಸಾಮಾನ್ಯವಾಗಿದೆ. ಈಗಿನ ಆಡಳಿತ ವಿರೋಧ ಪಕ್ಷದವರು ತಮ್ಮ ಸರಕಾರ ಆಡಳಿತದಲ್ಲಿದ್ದಾಗ ಅನುದಾನ ನೀಡದೆ ಈಗ ವಿರೋಧ ಪಕ್ಷದಲ್ಲಿ ಕುಳಿತುಕೊಂಡು ಆಡಳಿತ ಸರಕಾರವು ಅನುದಾನ ನೀಡಿಲ್ಲ ಎಂದು ದೂಷಿಸುವುದು ಹಾಗೆಯೇ ಇವರಿಬ್ಬರ ಕೆಸರಾಟದಲ್ಲಿ ಹಿಂದುಳಿದ ವರ್ಗವಾದ ಬಿಲ್ಲವ/ಈಡಿಗರ ಅಭಿವೃದ್ಧಿಯ ಕನಸು ಕನಸಾಗಿಯೇ ಉಳಿಯಿತು. ಬಿಲ್ಲವ/ಈಡಿಗ ಸಮುದಾಯ ಇದಕ್ಕೆ ಸರಿಯಾದ ಉತ್ತರವನ್ನು ಚುನಾವಣಾ ಸಮಯದಲ್ಲಿ ನೀಡಿ ಎಚ್ಚರ ತಪ್ಪಿದ ರಾಜಕೀಯ ನಾಯಕರಿಗೆ ಎಚ್ಚರಿಸಬೇಕಾಗಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ) ಉಡುಪಿ ಅಧ್ಯಕ್ಷರಾದ ಪ್ರವೀಣ್ ಎಮ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.