ಕುಂದಾಪುರ: ಪತ್ರಿಕೋದ್ಯಮದಲ್ಲಿ ನೀತಿಸಂಹಿತೆಗಳನ್ನು ಪಾಲಿಸುವುದು ಅತಿ ಮುಖ್ಯ ಎಂದು ಹಿರಿಯ ಪತ್ರಕರ್ತ ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್ ಶೆಣೈ ಹೇಳಿದರು.
ಅವರು ಆಗಸ್ಟ್ 25ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ, ಪತ್ರಿಕೋದ್ಯಮ ವಿಭಾಗ ಮತ್ತು ರೇಡಿಯೋ ಕುಂದಾಪ್ರ ೮೯.೬ ಎಫ್.ಎಮ್ ಇವರು ಜಂಟಿಯಾಗಿ ಆಯೋಜಿಸಿದ್ದ *ತಿಂಗಳ ಅತಿಥಿ ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪತ್ರಿಕೋದ್ಯಮ ಇಂದು ತುಂಬಾ ಬೆಳೆದಿದೆ. ಮುದ್ರಣ ತಂತ್ರಜ್ಞಾನದಿಂದ ಆರಂಭಿಸಿ ಇಂದು ಕಂಪ್ಯೂಟರ್ ತಂತ್ರಜ್ಞಾನವನ್ನು ಬಳಸಿ ವಸ್ತು ವಿಷಯಗಳನ್ನು ಕ್ಷಣ ಕ್ಷಣಕ್ಕೂ ಮಾಹಿತಿಯನ್ನು ನೀಡುವವರೆಗೆ ಬೆಳೆದಿದೆ. ಅಂತರ್ಜಾಲವನ್ನು ಬಳಸಿಕೊಂಡು ವಿಷಯಗಳನ್ನು ಪಸರಿಸುವಲ್ಲಿ ಸಾಮಾಜಿಕ ಮಾಧ್ಯಮಗಳು ಮೇಲುಗೈ ಸಾಧಿಸುತ್ತಿದೆ. ಹೀಗಿರುವಾಗ ನಾವು ವಿಷಯಗಳನ್ನು ನೀಡುವಲ್ಲಿನ ಧಾವಂತವೋ ಅಥವಾ ಪ್ರಚಾರಕ್ಕಾಗಿ ಸುದ್ದಿಯನ್ನು ನೀಡಬಾರದು. ಆದರೆ ಸುದ್ದಿಯನ್ನು ಸಾರ್ವಜನಿಕರಿಗೆ ಕೊಡುವಾಗ ಕೂಲಂಕಷವಾಗಿ ಗಮನಿಸಿ ಪತ್ರಿಕೋದ್ಯಮದ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತಿ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಬರವಣಿಗೆಯ ನಮ್ಮಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ಬರೆಯಬೇಕು ಎಂಬ ಹಠ ನಮ್ಮಲ್ಲಿ ಮೊದಲು ಹುಟ್ಟಬೇಕು. ಅದಕ್ಕೆ ಪೂರಕವಾಗದ ತಯಾರಿಯು ಅತ್ಯಗತ್ಯ. ಡಾ. ಶಿವರಾಮ ಕಾರಂತರಿಂದ ಆರಂಭವಾದ ಕುಂದಾಪುರದ ಮೊದಲ ಪತ್ರಿಕೆ ವಸಂತ ದ ಕುರಿತು, ಕುಂದಾಪುರದ ಪ್ರಸಿದ್ಧ ಪತ್ರಕರ್ತ ಕೋಂ.ಮ ಕಾರಂತ, ವಡ್ಡರ್ಸೆ ರಘುರಾಮ ಶೆಟ್ಟಿಯವರ ಕುರಿತು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಮಲತಾ ನಾಯ್ಕ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸುಜನಾ ಕಾರ್ಯಕ್ರಮ ನಿರೂಪಿಸಿದರು. ಧೃತಿ. ಡಿ.ಗೌಡ ಸ್ವಾಗತಿಸಿದರು. ರಿಶಿರಾಜ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೀರ್ತಿ ಪಟಗಾರ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮ ಸಂಯೋಜಕ ರಜ್ವಲ್ ಶೆಟ್ಟಿ ವಂದಿಸಿದರು.














