
ಉಡುಪಿ: ಜಿಲ್ಲೆಯಲ್ಲಿ ಜುಲೈ 1ರಿಂದ ಹಂತ ಹಂತವಾಗಿ ಸಿಟಿ ಹಾಗೂ ಸರ್ವೀಸ್ ಬಸ್ ಸಂಚಾರ ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ನಡೆದ ಶಾಸಕರು, ಅಧಿಕಾರಿಗಳು, ಬಸ್ ಮಾಲೀಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಜಿಲ್ಲೆಯಲ್ಲಿ ಬಸ್ ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಶೇ. 25ರಷ್ಟು ಟಿಕೆಟ್ ದರ ಹೆಚ್ಚಳ:
ಡೀಸೆಲ್ ದರ ಏರಿಕೆ ಹಾಗೂ ಶೇ. 50 ಆಸನ ಭರ್ತಿಗೆ ಅವಕಾಶ ಇರುವುದರಿಂದ ಸಾರಿಗೆ ಇಲಾಖೆ ಹೊರಡಿಸಿದ ನೊಟಿಫಿಕೇಶನ್ ಪ್ರಕಾರ ಸೆಸ್ ವಿಧಿಸಲು ಅವಕಾಶವಿದೆ. ಅದರಂತೆ ಶೇ.25ರಷ್ಟು ಟಿಕೆಟ್ ದರ ಹೆಚ್ಚಿಸಲಾಗುವುದು ಎಂದು ಖಾಸಗಿ ಬಸ್ ಮಾಲೀಕರ ಸಂಘದ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ ಗಂಗಾಧರ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್‌ಚಂದ್ರ, ಬಸ್ ಮಾಲೀಕರ ಸಂಘದ ಪದಾಧಿಕಾರಿಗಳಾದ ಕುಯ್ಲಡಿ ಸುರೇಶ್ ನಾಯಕ್, ಸದಾನಂದ ಛಾತ್ರ, ಪ್ರಸಾದ್ ಬಲ್ಲಾಳ್, ಶಿವರಾಮ ಶೆಟ್ಟಿ, ಸಂದೀಪ್ ಉಪಸ್ಥಿತರಿದ್ದರು.