
ಉಡುಪಿ : ಯಕ್ಷಗಾನ ಕಲಾವಿದ ಗುಣವಂತೆ ಕೃಷ್ಣ ಭಂಡಾರಿ(60 ವರ್ಷ) ಅನಾರೋಗ್ಯದಿಂದ ಸ್ವಗೃಹದಲ್ಲಿ ಶನಿವಾರ ರಾತ್ರಿ ನಿಧನರಾದರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಹದಿನೈದರ ಹರೆಯದಲ್ಲೆ ರಂಗ ಪ್ರವೇಶಿಸಿದ ಅವರು ಇಡಗುಂಜಿ, ಸಾಲಿಗ್ರಾಮ, ಪೆರ್ಡೂರು, ಕಮಲಶಿಲೆ, ಹಾಲಾಡಿ ಮೇಳಗಳಲ್ಲಿ ಕಲಾಸೇವೆಗೈದಿದ್ದರು. ಯಕ್ಷಗಾನದ ಎಲ್ಲಾ ಅಂಗಗಳನ್ನು ಬಲ್ಲ ಪರಿಪೂರ್ಣ ಕಲಾವಿದರಾಗಿದ್ದರು.
ಕೆರೆಮನೆ ಮೇಳದ ಭಾಗವತರಾಗಿ ಕೆರೆಮನೆ ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೆರೆಮನೆ ಶಂಭು ಹೆಗಡೆ ಸೇರಿದಂತೆ ಹಲವು ಕಲಾವಿದರೊಂದಿಗೆ ಇವರು ಭಾಗವತರಾಗಿ ರಂಗಭೂಮಿಯಲ್ಲಿ ದುಡಿದಿದ್ದರು.
ಕೆರೆಮನೆ ಮೇಳದ ಭಾಗವತರಾಗಿ ಸ್ಪೇನ್ , ಫ್ರಾನ್ಸ್ ಸೇರಿದಂತೆ ಐರೋಪ್ಯ ರಾಷ್ಟ್ರಗಳಲ್ಲೂ ಭಾಗವತಿಕೆ ನೀಡಿದ್ದರು.
ಇವರ ಕಲಾ ಸಾಧನೆಗೆ ರಾಜ್ಯ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪುರಸ್ಕಾರಗಳು ಸಂದಿವೆ.
ಯಕ್ಷಗಾನ ಗುರುಗಳಾಗಿ ಅನೇಕ ಕಡೆ ತರಗತಿಗಳನ್ನು ನಡೆಸುತ್ತಿದ್ದರು. ಹವ್ಯಾಸಿ ಸಂಘದ ಸದಸ್ಯರಿಗೆ ತರಬೇತಿ ನೀಡಿ ಪ್ರದರ್ಶನ ಏರ್ಪಡಿಸುತ್ತಿದ್ದರು. ಅವರ ನಿಧನಕ್ಕೆ ಉಡುಪಿಯ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.