ಕರಾವಳಿ

ವಿಶಾಲಾ ಗಾಣಿಗ ಕೊಲೆಯ ಹಿಂದಿನ ರಹಸ್ಯ ಕೊನೆಗೂ ಭೇದಿಸಿದ ಪೊಲೀಸ್

ಉಡುಪಿ : ವಿಶಾಲ ಗಾಣಿಗ ಕೊಲೆ ಪ್ರಕರಣದ ಕುರಿತು ಸುದ್ದಿಗೋಷ್ಠಿಯಲ್ಲಿ ಉಡುಪಿ ಎಸ್ಪಿ ವಿಷ್ಣುವರ್ಧನ್‌ ಮಾತನಾಡಿ, ಸುಪಾರಿ ಕಿಲ್ಲರ್‌ ಗಳನ್ನು ತನ್ನ ಗೆಳೆಯರೆಂದು ಪರಿಚಯಿಸಿ ಅವರ ಮೂಲಕ ಪತ್ನಿ ವಿಶಾಲ ಗಾಣಿಗನನ್ನು ಪತಿ ರಾಮಕೃಷ್ಣ ಕೊಲೆ ಮಾಡಿಸಿದ್ದಾನೆ. ಪತಿ ಮತ್ತು ಪತ್ನಿಯ ನಡುವಿನ ವೈಮನಸ್ಸೇ ಕೊಲೆಗೆ ಕಾರಣವಾಗಿದೆ ಎಂದು ತಿಳಿಸಿದರು .

ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿದ ಎಸ್ಪಿ ವಿಷ್ಣುವರ್ಧನ್‌, ರಾಮಕೃಷ್ಣ ಗಾಣಿಗನನ್ನು ಈಗಾಗಲೇ ಬಂಧಿಸಿ ಜುಲೈ 23 ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿದ್ದು, ಇನ್ನೋರ್ವ ಆರೋಪಿ ಉತ್ತರ ಪ್ರದೇಶದ ಸ್ವಾಮಿನಾಥ ನಿಶಾದ (38) ನನ್ನು ಗೋರಖ್ಪುರದಲ್ಲಿ ಬಂಧಿಸಿ ಉಡುಪಿಗೆ ಕರೆತರಲಾಗಿದೆ. ಇದರೊಂದಿಗೆ ಇನ್ನೋರ್ವ ಆರೋಪಿಯ ಬಗ್ಗೆ ಮಾಹಿತಿ ಲಭಿಸಿದ್ದು ಆದಷ್ಟೂ ಬೇಗ ಬಂಧಿಸಲಾಗುವುದೆಂದರು.

ಆರೋಪಿಗಳ ಪತ್ತೆಗೆ ವಿಶೇಷ ತಂಡದ ಅಧಿಕಾರಿಗಳಾದ ಮಂಜುನಾಥ ಪಿ.ಐ ಮಣಿಪಾಲ, ಶರಣ ಗೌಡ, ಸಿಪಿಐ ಮಲ್ಪೆ, ಮಧು ಪಿ.ಎಸ್.ಐ ಕಾರ್ಕಳ ಮತ್ತು ಮಣಿಪಾಲ ಪಿ.ಎಸ್.ಐ ರಾಜಶೇಖರ ವಂದಲಿ ಇವರುಗಳು ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಯತ್ನ ನಡೆಸಿದ್ದು, ನಂತರ ಬೇರೆ ರಾಜ್ಯಗಳಿಗೂ ತೆರಳಿದ್ದಾರೆ. ಬಳಿಕ ಮಹತ್ವದ ಸುಳಿವಿನ ಆಧಾರದಲ್ಲಿ ಉತ್ತರ ಪ್ರದೇಶದ ಗೋರಖ್ಪುರಕ್ಕೆ ತೆರಳಿ ಅಲ್ಲಿನ ಎಸ್.ಎಸ್.ಪಿ. ದಿನೇಶ್ ಕುಮಾರ್ ಐ.ಪಿ.ಎಸ್ ಹಾಗೂ ಅವರ SWAT ತಂಡದ ಸಹಭಾಗಿತ್ವದಲ್ಲಿ ಸಂಶಯಿತ ಆರೋಪಿ ಶ್ರೀ ಸ್ವಾಮಿನಾಥ ನಿಶಾದ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮೃತ ವಿಶಾಲಾರ ಗಂಡ ರಾಮಕೃಷ್ಣ ಪತ್ನಿಯ ಕೊಲೆಗೆ ಸುಪಾರಿ ನೀಡಿರುವುದು ತಿಳಿದುಬಂದಿದೆ. ಬಳಿಕ ಆರೋಪಿ ರಾಮಕೃಷ್ಣನನ್ನು ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಶ್ರೀ ಅನಂತ ಪದ್ಮನಾಭ ಹಾಗೂ ಶ್ರೀ ಗುರುನಾಥ ಬಿ ಹಾದಿಮನಿ, ಪಿ.ಎಸ್.ಐ ರವರ ತಂಡವು ಜುಲೈ 19 ರಂದು ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ವಶಕ್ಕೆ ಪಡೆದಿದ್ದಾರೆ.

ಬಳಿಕ ವಿಚಾರಿಸಿದಾಗ ಕಳೆದ 6 ತಿಂಗಳಿನಿಂದ ಪತ್ನಿಯ ಕೊಲೆಗೆ ದುಬೈಯಲ್ಲಿ ಕುಳಿತು ಸಂಚು ರೂಪಿಸಿ ಸುಪಾರಿ ಹಂತಕರಿಗೆ ಸುಮಾರು 2 ಲಕ್ಷಕ್ಕಿಂತ ಮಿಕ್ಕಿ ಹಣ ನೀಡಿ ಜುಲೈ 12 ರಂದು ಹಂತಕರನ್ನು ಮನೆಗೆ ಕಳುಹಿಸಿ ಕೊಲೆ ಮಾಡಿಸಿದ ವಿಚಾರ ತನಿಖೆಯಿಂದ ತಿಳಿದುಬಂದಿದೆ. ಈ ಮೊದಲು ಮಾರ್ಚ್‌ ತಿಂಗಳಲ್ಲಿ ಊರಿಗೆ ಬಂದಿದ್ದ ರಾಮಕೃಷ್ಣ ಸುಪಾರಿ ಹಂತಕರನ್ನು ತನ್ನ ಕುಮ್ರಗೋಡಿನ ಮನೆಗೆ ಕರೆಯಿಸಿಕೊಂಡು

 

ಗೆಳೆಯರೆಂದು ಹೆಂಡತಿಗೆ ಪರಿಚಯಿಸಿದ್ದನು. ಬಳಿಕ ಯಾವುದೇ ರೀತಿಯ ಸಂಶಯ ಬರದಂತೆ ನೋಡಿಕೊಳ್ಳುವ ಸಲುವಾಗಿ ಪತ್ನಿಗೆ ಮತ್ತು ಆರೋಪಿಗಳಿಗೆ ಇಂಟರ್‌ ನೆಟ್‌ ಮೂಲಕ ಕಾಲ್‌ ಮಾಡುತ್ತಿದ್ದನು. ಅಲ್ಲದೆ ಈ ಮೊದಲು ಒಮ್ಮೆ ಒರ್ವ ಗೆಳೆಯನ ಮೂಲಕ ಪಾರ್ಸೆಲ್‌ ಕಳುಹಿಸಿದ್ದನು. ಅದರಂತೆ ಜುಲೈ 12 ರಂದು ಕೂಡ ಮನೆಗೆ ತನ್ನ ಗೆಳೆಯರು ಬರಲಿದ್ದಾರೆ ಎಂದು ತಿಳಿಸಿದ್ದ ರಾಮಕೃಷ್ಣ, ಗಂಗೊಳ್ಳಿಗೆ ತೆರಳಿದ್ದ ಪತ್ನಿಯನ್ನು ಒಬ್ಬಂಟಿಯಾಗಿ ವಾಪಾಸಾಗುವಂತೆ ಸೂಚಿಸಿದ್ದನು.

ಅದರಂತೆ ವಾಪಾಸಾದ ಪತ್ನಿ ಕುಮ್ರಗೋಡಿನ ಮನೆಗೆ ತಲುಪಿರುವುದು ಖಾತ್ರಿ ಮಾಡಿದ ಬಳಿಕ ಹಂತಕರು ಮನೆಗೆ ತೆರಳಿ ವಯರ್‌ ಉಪಯೋಗಿಸಿ ಕೊಲೆ ಮಾಡಿದ್ದಾರೆ. ಫ್ಲ್ಯಾಟ್‌ ನಲ್ಲಿ ಯಾವುದೇ ಸಿಸಿಟಿವಿ ಕ್ಯಾಮರಾ ವ್ಯವಸ್ಥೆ ಇಲ್ಲದೆ ಇರುವುದು ತನಿಖೆಗೆ ಹಿನ್ನಡೆಯಾದರೂ ಬಳಿಕ ಜಿಲ್ಲೆಯ ವಿವಿಧ ಕಡೆಗಳ ಸಿಸಿಟಿವಿ ಕ್ಯಾಮರಾ ಹಾಗೂ ಪೊರೆನ್ಸಿಕ್‌ ತಂಡದ ಸತತ ತನಿಖೆಯ ಮೂಲಕ ಆರೋಪಿಯನ್ನು ಬಂಧಿಲಾಗಿದೆ.

ಇನ್ನೋರ್ವ ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಉಡುಪಿ ಎಸ್ಪಿ ವಿಷ್ಣುವರ್ಧನ್‌ ಮಾಹಿತಿ ನೀಡಿದ್ದಾರೆ.

ಕೊಲೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಈ ಕೊಲೆ ಪ್ರಕರಣವನ್ನು ಭೇದಿಸಲು 5 ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಸುಧಾಕರ ಎಸ್. ನಾಯ್ಕರವರ ನಿರ್ದೇಶನದಂತೆ ಬ್ರಹ್ಮಾವರ ಸಿಪಿಐ ಪದ್ಮನಾಭ ಮತ್ತು ಪಿ.ಎಸ್.ಐ ರವರಾದ ಗುರುನಾಥ ಬಿ. ಹಾದಿಮನಿರವರ ತಂಡ, ಮಣಿಪಾಲ ಪಿ.ಐ ಮಂಜುನಾಥ ಮತ್ತು ಪಿ.ಎಸ್.ಐ ರವರಾದ ರಾಜಶೇಖರ ವಂದಲಿ, ಶರಣಗೌಡ, ಸಿಪಿಐ, ಮಲ್ಪೆ ವೃತ್ತ ಮತ್ತು ಪಿ.ಎಸ್.ಐ ರವರಾದ ಮಧು ಸಂಪತ್‌ಕುಮಾರ್ ಎ. ಸಿಪಿಐ ಕಾರ್ಕಳ ಮತ್ತು ಪಿ.ಎಸ್.ಐ. ರವರಾದ ರಾಘವೇಂದ್ರ ಸಿ ಮತ್ತು ಶ್ರೀಧರ್ ನಾಯ್ಕ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಆರ್.ಡಿ.ಪಿ.ಯ ತಾಂತ್ರಿಕ ತಂಡ ಒಳಗೊಂಡಂತೆ ಒಟ್ಟು 5 ವಿಶೇಷ ತಂಡಗಳ ಮೂಲಕ ಆರೋಪಿಗಳ ಪತ್ತೆಹಚ್ಚಲಾಗಿದೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker