
2005ರಲ್ಲಿ ಭಾರತ ಸರಕಾರ ಮಾಹಿತಿ ಹಕ್ಕು ಕಾಯಿದೆಯನ್ನು ಜ್ಯಾರಿಗೆ ತರುವುದರೊಂದಿಗೆ ಅದುವರೆಗೆ ಸರಕಾರಿ ರಹಸ್ಯಗಳ ಅಧಿನಿಯಮ 1923ರಡಿ ಸರಕಾರಿ ದಾಖಲೆಗಳು ಸಾರ್ವಜನಿಕರಿಗೆ ಬಹಿರಂಗ ಪಡಿಸಲು ಇದ್ದ ನಿರ್ಭಂದವನ್ನು ತೊಡೆದು ಹಾಕಿ ಕ್ರಾಂತಿಕಾರಿ ಹೆಜ್ಜೆ ಇರಿಸಿದಂತಾಗಿದೆ. 2005ರಲ್ಲಿ ಅಂದಿನ ಕೇಂದ್ರ ಸರಕಾರ ಇಡೀ ದೇಶಕ್ಕೆ ಅನ್ವಯಿಸುವ (ಆಗ ಜಮ್ಮು-ಕಾಶ್ಮೀರ ಹೊರತು) ಮಾಹಿತಿ ಹಕ್ಕು ಕಾಯ್ದೆಯನ್ನು ಜ್ಯಾರಿಗೆ ತರುವ ಮೊದಲು 1997ರಲ್ಲಿ ತಮಿಳುನಾಡು ಹಾಗೂ 2000ರಲ್ಲಿ ಕರ್ನಾಟಕ ಸರಕಾರಗಳು ಇಂತಹುದೇ ಕಾಯಿದೆಯನ್ನು ಜ್ಯಾರಿಗೊಳಿಸಿದಾಗ ಇದು ವಿಶ್ವದಲ್ಲಿ ಮೊತ್ತ ಮೊದಲ ಮತ್ತು ವಿಶಿಷ್ಠ ರೀತಿಯ ಕಾಯಿದೆ ಎಂಬುದಾಗಿ ಪ್ರಚಾರ ಮಾಡಲಾಗಿತ್ತು. ವಾಸ್ತವದಲ್ಲಿ ವಿಶ್ವದಲ್ಲಿ ಇಂತಹದೊಂದು ಕಾಯಿದೆ ಜ್ಯಾರಿಗೆ ಬಂದದ್ದು ಸ್ವೀಡನ್ ದೇಶದಲ್ಲಿ, 1766ರಲ್ಲಿ. ಅಲ್ಲಿಂದೀಚೆಗೆ ಇಂತಹ ಕಾಯಿದೆ ಸುಮಾರು 100ಕ್ಕೂ ಹೆಚ್ಚಿನ ದೇಶಗಳಲ್ಲಿ ಜ್ಯಾರಿಯಲ್ಲಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುವೆಂದು ಪರಿಗಣಿಲ್ಪಡುವ ಪ್ರಜೆಗಳಿಗೆ ತಮ್ಮನ್ನಾಳುವವರ ಚಟುವಟಿಕೆಗಳು ಪಾರದರ್ಶಕವಾಗಿ ಇರಬೇಕೆಂಬ ಉದ್ದೇಶದಿಂದ ಸರಕಾರದ ಚಟುವಟಿಕೆಗಳ ಮಾಹಿತಿ ಪಡೆಯಲು ಪ್ರಜೆಗಳಿಗೆ ಅವಕಾಶ ನೀಡಿದ ಮಹತ್ವಾಕಾಂಕ್ಷಿ ಕಾಯಿದೆ ಇದು. ಆದರೆ ಬಹುತೇಕ ಸಂದರ್ಭದಲ್ಲಿ ಇದುವೇ ರಾಜಕೀಯ ಜಿದ್ದಾ ಜಿದ್ದಿಗೆ ವೇದಿಕೆ ಒದಗಿಸಿರುವುದು ಮಾತ್ರ ಖೇದಕರ. ಆಂತರಿಕ ಮತ್ತು ಅಂತರಾಷ್ಟ್ರೀಯ ಭದ್ರತಾ ವಿಷಯ ಸೇರಿದಂತೆ ಕೆಲವು ಸೂಕ್ಷ್ಮ ವಿಭಾಗಗಳಿಗೆ ಸಂಬಂಧಿಸಿದ ಮಾಹಿತಿ ಹೊರತು ಪಡಿಸಿ, ಸರಕಾರಿ ರಹಸ್ಯಗಳ ಅಧಿನಿಯಮವನ್ನು ತಾತ್ವಿಕವಾಗಿ ಬದಲಾಯಿಸಿದ ಈ ಕ್ರಾಂತಿಕಾರಿ ಕಾಯಿದೆಯಿಂದ ಮಹತ್ವದ ಬದಲಾವಣೆ ನಿರೀಕ್ಷಿಸಲಾಗಿತ್ತು. ಇದರಿಂದ ಬಹಳಷ್ಟು ಭ್ರಷ್ಟಾಚಾರ ಪ್ರಕರಣಗಳು ಬಯಲಿಗೆ ಬಂದದ್ದೇನೋ ಸರಿ. ಆದರೆ ಮೂಲ ಉದ್ದೇಶ ವಿಫಲವಾಗಿ ರಾಜಕೀಯ ಸಂಘರ್ಷಕ್ಕೆ ಉಪಯೋಗಿಸಲ್ಪಟ್ಟ ಉದಾಹರಣೆಗಳೂ ಸಾಕಷ್ಟಿವೆ. ರಾಜಕಾರಣಿಗಳು ಸರಕಾರಿ ಕಚೇರಿಗಳಲ್ಲಿ ತಮ್ಮ ಪರವಾಗಿ ಇರುವ ಸಿಬ್ಬಂದಿಗಳು ಒದಗಿಸುವ ಅನಧಿಕೃತ ಮಾಹಿತಿ ಆಧರಿಸಿ ಅರ್ಜಿ ಹಾಕಿ ಪಡೆಯುವ ಮಾಹಿತಿಯನ್ನು ತಮಗಾಗದವರ ವಿರುದ್ಧ ಅಸ್ತ್ರವಾಗಿ ಉಪಯೋಗಿಸಿರುವುದೇ ಹೆಚ್ಚು. ಈ ಕಾಯಿದೆಯ ಮೂಲ ಉದ್ದೇಶವನ್ನು ತಮ್ಮ-ತಮ್ಮ ಮೂಗಿನ ನೇರಕ್ಕೆ ತಿರುಚುವಲ್ಲಿ ಸ್ಥಾಪಿತ ಹಿತಾಸಕ್ತಿಯ ಕೆಲ ಖಾಸಗಿ ವ್ಯಕ್ತಿಗಳು ಮತ್ತು ಅಧಿಕಾರಿ ವರ್ಗ ಸಮಾನ ಮನಸ್ಥಿತಿ ಹೊಂದಿರುವುದೂ ಅಷ್ಟೇ ಸತ್ಯ.
ಈ ಕಾನೂನಿನ ಮೇಲ್ಪದರದಲ್ಲಿ ಗೋಚರಿಸದ ಕೆಲವು ವಿಷಯಗಳನ್ನಿಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಕಾನೂನಿನ ಮೂಲ ಆಶಯವನ್ನು ತಿರುಚಿ “ಮಾಹಿತಿ ಹಕ್ಕು ಕಾರ್ಯಕರ್ತರು” ಎಂಬುದಾಗಿ ಬಿಂಬಿಸಿಕೊಂಡು ಅದನ್ನೇ ಪೂರ್ಣಾವಧಿ ಉದ್ಯೋಗವನ್ನಾಗಿಸಿಕೊಂಡವರ ಉದಾಹರಣೆಗಳು ಒಂದೆಡೆಯಾದರೆ, ಕಾಯಿದೆಯಲ್ಲಿ ಇರುವ ಸೂಕ್ಷ್ಮ ‘ವಿನಾಯಿತಿ’ಗಳನ್ನು ತಿರುಚಿ ವ್ಯಾಖ್ಯಾನಿಸಿ, ಅಧಿಕಾರಿಗಳು ಮಾಹಿತಿ ನಿರಾಕರಿಸಿದ ಪ್ರಕರಣಗಳು ಇನ್ನೊಂದೆಡೆ.
ಸುಮಾರು ನಾಲ್ಕು ದಶಕಗಳ ನನ್ನ ಸರಕಾರಿ ಸೇವೆಯಲ್ಲಿ ಓರ್ವ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಎದುರಿಸಿದ ಕೆಲವು ವಿಲಕ್ಷಣ ಪ್ರಕರಣಗಳು ಹಾಗೂ ನಿವೃತ್ತಿ ನಂತರ ಮಾಹಿತಿ ಹಕ್ಕು ಕಾಯಿದೆಯಡಿ ಸ್ನೇಹಿತರಿಗೆ ಪತ್ರ ವ್ಯವಹಾರಕ್ಕೆ ಸಹಕರಿಸುವ ಹಂತದಲ್ಲಿ ಇಲಾಖೆಯ ಮಾಹಿತಿ ಅಧಿಕಾರಿಗಳು ಮಾಹಿತಿ ನೀಡಲು ನಿರಾಕರಿಸಲು ‘ರಂಗೋಲಿ ಕೆಳಗೆ ತೂರುವ’ ಬುದ್ದಿವಂತಿಕೆ ತೋರಿಸಿದ, ಆದರೆ ಸಾರ್ವಜನಿಕವಾಗಿ ಗೋಚರಿಸದ ಕೆಲವು ಆಯಾಮಗಳನ್ನು ತೆರೆದಿಡುವ ಪ್ರಯತ್ನ ಇಲ್ಲಿದೆ.
ಮಾಹಿತಿ ಅಪೇಕ್ಷಿಸಿ ಅಗಾಧ ನಿರೀಕ್ಷೆ ಇಟ್ಟುಕೊಂಡು ಅರ್ಜಿ ಸಲ್ಲಿಸುವ ಹೆಚ್ಚಿನ ನಾಗರಿಕರು ಅದನ್ನು ಒಳ್ಳೆಯ ಉದ್ದೇಶದಿಂದ ಕೋರುತ್ತಾರಾದರೂ ಕಾನೂನಿನ ಸಣ್ಣ ಪುಟ್ಟ ಲೋಪದೋಷಗಳ ಲಾಭ ಪಡೆದು “ಮಾಹಿತಿ ಹಕ್ಕು ಕಾರ್ಯಕರ್ತರ” ಸೋಗಿನಲ್ಲಿ ಅದನ್ನೇ ಪೂರ್ಣಕಾಲೀನ ಉದ್ಯೋಗವಾಗಿಸಿಕೊಂಡವರ ಸಂಖ್ಯೆ ದೊಡ್ಡದೇ ಇದೆ. ಅಂತವರ ಕಾರ್ಯವೈಖರಿಯ ಕೆಲವು ತುಣುಕುಗಳು:
ಯಾವುದೇ ನಾಗರಿಕ ತನಗೆ ಅಗತ್ಯವಿರುವ ಮಾಹಿತಿಯನ್ನು ಲಿಖಿತ ಅರ್ಜಿ ಸಲ್ಲಿಸುವ ಮೂಲಕ ಪಡೆಯಬಹುದು ಹಾಗೂ ಅಂತಹ ಕೋರಿಕೆ ಸ್ವೀಕರಿಸಿದ 30 ದಿನಗಳ ಒಳಗೆ (ರಜಾ ದಿನಗಳು ಸೇರಿ) ಅರ್ಜಿದಾರರಿಗೆ ಒದಗಿಸುವುದು ಪ್ರತಿಯೊಬ್ಬ ಸಾರ್ವಜನಿಕ ಮಾಹಿತಿ ಅಧಿಕಾರಿಯ ಕರ್ತವ್ಯವಾಗುತ್ತದೆ. ಈ ರೀತಿ 30 ದಿನಗಳಲ್ಲಿ ಒದಗಿಸದಿದ್ದಲ್ಲಿ, ಅಥವಾ ತಿರಸ್ಕರಿಸಿದಲ್ಲಿ, ಅಥವಾ ಅಪೂರ್ಣ-ಅಸಮರ್ಪಕ ಮಾಹಿತಿ ಒದಗಿಸಲಾಗಿದೆ ಎಂದನ್ನಿಸಿದರೆ, ಅರ್ಜಿದಾರರು ಮೇಲ್ಮನವಿ ಸಲ್ಲಿಸಬಹುದು, ಮೊದಲನೇ ಮೇಲ್ಮನವಿ ಪ್ರಾಧಿಕಾರ ವಿಚಾರಣೆ ನಡೆಸಿ, ಮಾಹಿತಿ ಅಧಿಕಾರಿಯು ಮಾಹಿತಿ ಒದಗಿಸದಿರುವುದು ಸರಿ ಅಥವಾ ತಪ್ಪು ಎಂಬ ಬಗ್ಗೆ ಸೂಕ್ತ ಆದೇಶ ನೀಡಬಹುದು. ಎರಡನೇ ಹಂತದಲ್ಲಿ ರಾಜ್ಯ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಮಾಹಿತಿ ಆಯೋಗದ ವಿಚಾರಣೆ ನಂತರ ಮಾಹಿತಿ ನೀಡದಿರುವುದು ತಪ್ಪು ಎಂಬ ನಿರ್ಧಾರಕ್ಕೆ ಬಂದರೆ ಮಾಹಿತಿ ಒದಗಿಸಲು ಆದೇಶ ನೀಡುವುದರ ಜತೆಗೆ ಅಂತಹ ಸಾರ್ವಜನಿಕ ಮಾಹಿತಿ ಅಧಿಕಾರಿಯ ವೇತನದಿಂದ ಕಡಿತ ಮಾಡಿ ಗರಿಷ್ಠ 25000/-ದಷ್ಟು ದಂಡ ವಿಧಿಸಬಹುದಾಗಿದೆ. (ಈ ದಂಡದ ಹಣ ಅರ್ಜಿದಾರರಿಗೆ ಸಿಗುವುದಿಲ್ಲ, ಸರಕಾರಕ್ಕೆ) ಆದರೆ ಕೆಲವು ‘ಕಾರ್ಯಕರ್ತರು’ ತಮಗೆ ಮೇಲ್ಮನವಿ ಸಲ್ಲಿಸಲು ಅನಗತ್ಯ ವೆಚ್ಚವಾಗಿದೆ ಎಂಬ ಮೊಂಡು ವಾದ ಮಂಡಿಸಿ ‘ಪರಿಹಾರ’ ರೂಪದಲ್ಲಿ ಒಂದಷ್ಟು ಸಂಪಾದನೆ ಮಾಡುವ ಚಾಲಾಕಿಗಳೂ ಇದ್ದಾರೆ. ಆದರೆ ನಿಜವಾಗಿ ತೊಂದರೆಗೆ ಈಡಾಗುವವರು ಕಿಸೆಯಿಂದ ಖರ್ಚು ಮಾಡಿ ಸುಸ್ತಾಗುತ್ತಾರೆ.
ಪ್ರಾಮಾಣಿಕವಾಗಿ ಮಾಹಿತಿ ಅಗತ್ಯವಿರುವವರು ಅಂತಿಮ ಹಂತದವರೆಗೆ ಈ ಪ್ರಕ್ರಿಯೆಯ ಬೆನ್ನು ಹತ್ತುತ್ತಾರೆ. ಆದರೆ ಕಾರ್ಯಕರ್ತರ ಸೋಗಿನಲ್ಲಿ ಕಾರ್ಯಾಚರಿಸುವವರ ಉದ್ದೇಶ ಮಾಹಿತಿ ಪಡೆಯುವುದಲ್ಲ. ಆ ನೆಪದಲ್ಲಿ ಒಂದಿಷ್ಟು ಸಂಪಾದನೆ ಮಾಡುವುದು. ಹೇಗನ್ನುತ್ತೀರಾ, ಮುಂದೆ ಓದಿ.
ಆದರೆ ಬಹಳಷ್ಟು ಸಂದರ್ಭದಲ್ಲಿ ಈ ಕಾನೂನನ್ನು ದುರುಪಯೋಗ ಪಡಿಸಿಕೊಂಡ ಉದಾಹರಣೆ ಇದೆ. ಲೋಕಾಯುಕ್ತ ಕಾಯಿದೆಯಲ್ಲಿ ಇರುವಂತೆ ಶಿಕ್ಷೆಗೆ ಅವಕಾಶ ಇದ್ದರೆ ಸುಳ್ಳು ಅರ್ಜಿ ಸಲ್ಲಿಸಿ ಸತಾಯಿಸುವ ಪ್ರವೃತ್ತಿ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬರಲು ಸಹಕಾರಿಯಾದೀತೇನೋ. ಕಾನೂನಿನಲ್ಲಿ ಶಿಕ್ಷೆ ವಿಧಿಸುವ ಅವಕಾಶ ಬಂದರೂ ಅದನ್ನು ಎದುರಿಸಲು ಕೆಲವು ‘ಬುದ್ದಿವಂತರು’ ಮೊದಲೇ ಸಿದ್ಧತೆ ಮಾಡಿಕೊಂಡಿರುತ್ತಾರೆ, ಹೇಗೆ ಗೊತ್ತೇ? ಹೀಗೆ ಸತಾಯಿಸುವ ಉದ್ದೇಶದಿಂದ ಅರ್ಜಿ ಸಲ್ಲಿಸುವವರು ಕಾಲ್ಪನಿಕ ವಿಳಾಸ ಕೊಡುತ್ತಾರೆ, ಏನಾದರೂ ಪತ್ರ ಕಳುಹಿಸಿದರೆ ಅದನ್ನು ಪಡೆದುಕೊಳ್ಳಲು ಅಂಚೆ ಇಲಾಖೆಯೊಂದಿಗೆ ಸೂಕ್ತ ಹೊಂದಾಣಿಕೆ ಮಾಡಿಕೊಂಡ ಪ್ರಕರಣವನ್ನೂ ನಾನು ಎದುರಿಸಿದ್ದೇನೆ. ಆದರೆ ಕಾನೂನು ಕ್ರಮವೇನಾದರೂ ಸಂಭವಿಸುವ ಲಕ್ಷಣ ಕಂಡುಬಂದರೆ ಅಂತಹ ಅರ್ಜಿದಾರರು ಏಕಾಏಕಿ ಮಾಯವಾಗಿ ಬಿಡುತ್ತಾರೆ! ಹೇಗಿದೆ ‘ಬುದ್ದಿವಂತಿಕೆ’?
ಮಾಹಿತಿ ಹಕ್ಕು ಕಾರ್ಯಕರ್ತರು ಎಂದು ಸ್ವಯಂ ಘೋಷಿತರು ಕೇಳುವ ಮಾಹಿತಿ ತುಂಬಾ ಹಳೆಯ ಅವಧಿಗೆ ಸಂಬಂಧಿಸಿದ ಮತ್ತು/ಅಥವಾ ಅಗಾಧ ಪ್ರಮಾಣದ ಅಥವಾ ಅಸ್ಪಷ್ಟ ರೂಪದ್ದಾಗಿರುತ್ತದೆ. ಅಲ್ಲದೆ ವಿವಾಹ ವಿಚ್ಛೇದನ ಪ್ರಕರಣದ ಉದ್ದೇಶದಿಂದ ಸರಕಾರಿ ನೌಕರರ/ಅಧಿಕಾರಿಗಳ ಆರೋಗ್ಯ ಸಂಬಂಧಿ ವಿಷಯಗಳೇ ಮುಂತಾದ ತೀರ ಖಾಸಗಿ ವಿಷಯಗಳನ್ನು ಕೋರುವುದಿದೆ. ಒಬ್ಬರಂತೂ ಪತ್ರಿಕೆಯಲ್ಲಿ ಮಾನಹಾನಿ ವರದಿ ಪ್ರಕಟಿಸುವ ಉದ್ದೇಶದಿಂದ ಭಾವಚಿತ್ರ ಕೇಳಿ ಅರ್ಜಿ ಸಲ್ಲಿಸಿದ್ದರು! ನಿಯಮಾವಳಿಗಳಲ್ಲಿ, ಇಂತಹ ಮಾಹಿತಿಗಳನ್ನು ನೀಡುವಲ್ಲಿ ಇರುವ ವಿನಾಯಿತಿ ಕುರಿತು ಮಾರ್ಗದರ್ಶಿ ಆದೇಶ, ಸುತ್ತೋಲೆಗಳನ್ನು ಆಗಿಂದಾಗ್ಗೆ ಹೊರಡಿಸಲಾಗುತ್ತದೆ. ಆದರೆ ತೀರಾ ಕೆಳಹಂತದ ಕಚೇರಿಗಳಲ್ಲಿ ಈ ಕುರಿತು ಸರಿಯಾದ ಮಾಹಿತಿ ಇರುವುದಿಲ್ಲ. ಇಂತಹ ಲೋಪಗಳ ಉಪಯೋಗ ಪಡೆದುಕೊಂಡು ಹಣ ಕೀಳಲು ಹಲವಾರು ತಂತ್ರಗಳನ್ನು ಹೆಣೆಯುತ್ತಾರೆ. ಇಂತಹ ‘ಅರ್ಜಿದಾರರು’ ಅರ್ಜಿ ಸಲ್ಲಿಸುವುದರ ಜತೆಗೆ ಆ ಬಗ್ಗೆ ಪೀತ ಪತ್ರಿಕೆಗಳಲ್ಲಿ ಅತಿ ರಂಜಿತ, ಮಾನಹಾನಿಕರ ವರದಿಗಳನ್ನು ಪ್ರಕಟಿಸುತ್ತಾರೆ. ದುರದೃಷ್ಟವಶಾತ್ ಸರಕಾರಿ ನೌಕರರಿಗೆ ಇಂತಹಾ ಬೆಳವಣಿಗೆಯನ್ನು ಪ್ರತಿಭಟಿಸಲು, ಅಥವಾ ಮಾನಹಾನಿ ಮೊಕದ್ದಮೆ ಹೂಡಲು ಸರಕಾರದ ಪೂರ್ವಾನುಮತಿ ಅಗತ್ಯವಿದೆ. (ಇದು ಸಿಗುವುದೇ ಇಲ್ಲ ಬಿಡಿ) ದಂಡ ವಿಧಿಸುವ, ಅದನ್ನು ಮಾಹಿತಿ ಅಧಿಕಾರಿಯವರ ವೇತನದಿಂದ ಕಡಿತಗೊಳಿಸುವ, ಆ ಬಗ್ಗೆ ಸೇವಾ ದಾಖಲೆಗಳಲ್ಲಿ ನಮೂದಿಸುವ ‘ಬೆದರು ಗೊಂಬೆಗೆ’ ಹೆದರಿ ಕಾನೂನಿನ ಸಮರ್ಪಕ ಪರಿಜ್ಞಾನವಿಲ್ಲದವರು, ಮುಂದಿನ ಬೆಳವಣಿಗೆಗಳಾದ ವಿಚಾರಣೆ, ದಂಡ ಮಾತ್ರವಲ್ಲದೆ ನಿಗದಿತ ಅವಧಿಯೊಳಗೆ ಮಾಹಿತಿ ಒದಗಿಸುವ ಒತ್ತಡ ಇತ್ಯಾದಿಗಳಿಗೆ ಹೆದರಿ ಅರ್ಜಿ ಹಾಕಿದವರೊಡನೆ “ಹೊಂದಾಣಿಕೆಗೆ” ಮುಂದಾಗುತ್ತಾರೆ! ಈ ಸ್ವಯಂ ಘೋಷಿತ ’ಕಾರ್ಯಕರ್ತರಿಗೆ’ ಬೇಕಾಗಿರುವುದು ಅದೇ.
ಇದಿಷ್ಟು ಒಂದು ಮುಖವಾದರೆ, ನಿಜವಾದ ಮಾಹಿತಿ ಬೇಕಾದ ಅರ್ಜಿದಾರರಿಗೆ ‘ಚಳ್ಳೆ ಹಣ್ಣು ತಿನ್ನಿಸುವ’ ಅಧಿಕಾರಶಾಹಿಯ ಚಾಣಾಕ್ಷ ನಡೆಗಳ ಕುರಿತಂತೆ ಕೆಲವು ಅನುಭವಗಳನ್ನು ಹೀಗೆ ಪಟ್ಟಿ ಮಾಡಬಹುದು.
●ಒಂದು ಪ್ರಕರಣದಲ್ಲಿ ಓರ್ವ ಉದ್ಯಮಿ ತಾನು ಮಾಡಿದ ಖರೀದಿ ಬಾಬ್ತು ನೀಡಿದ ಚೆಕ್ ಸಾಕಷ್ಟು ಶಿಲ್ಕು ಇಲ್ಲದ ಕಾರಣಕ್ಕೆ ಹಿಂದಿರುಗಿಸಲ್ಪಟ್ಟು ಕಾನೂನು ಕ್ರಮ ಕೈಗೊಳ್ಳುವ ಉದ್ದೇಶದಿಂದ ಸೂಕ್ತ ದಾಖಲೆ ಸಂಗ್ರಹಿಸುವುಕ್ಕೆ ಚೆಕ್ ನೀಡಿದ ವ್ಯಕ್ತಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಪಡೆಯಲು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ವಾಣಿಜ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ಹಕ್ಕು ಕಾಯಿದೆಯ ಪರಿಚ್ಛೇದ 11ನ್ನು ಉಲ್ಲೇಖಿಸಿ ಉತ್ತರಿಸಿದ್ದೇನೆಂದರೆ, ಸದ್ರಿ ಮಾಹಿತಿಯು ‘ಮೂರನೇ ವ್ಯಕ್ತಿಗೆ ಸಂಬಂದಿಸಿದ್ದು, ಯಾವ ವ್ಯಕ್ತಿಗೆ ಸಂಬಂದಿಸಿದ ಮಾಹಿತಿ ಕೇಳಲಾಗಿದೆಯೋ ಆ ವ್ಯಕ್ತಿಯ ಸಹಮತ ಕೇಳಿ ಪತ್ರ ಬರೆಯಲಾಗಿ, ಸದ್ರಿ ವ್ಯಕ್ತಿ ಮಾಹಿತಿ ನೀಡಲು ಅಸಮ್ಮತಿ ವ್ಯಕ್ತ ಪಡಿಸಿರುವುದರಿಂದ ಮಾಹಿತಿ ನೀಡಲಾಗದು’ ಹೇಗಿದೆ, ‘ಕೋಳಿ ಕೇಳಿ ಮಸಾಲೆ ಅರೆದ’ ಕಥೆ?
●2005ರಲ್ಲಿ ಜ್ಯಾರಿಗೆ ಬಂದ ಮಾಹಿತಿ ಹಕ್ಕು ಕಾಯಿದೆಯಡಿ ಸ್ವೀಕೃತವಾದ ಪ್ರಕರಣಗಳಿಗೆ ಸಂಬಂಧಿಸಿದ ತೀರ್ಪುಗಳು 2006ರಲ್ಲಿ ಬರಲಾರಂಬಿಸಿದ್ದು, ಮೊದಲೆರಡು ವರ್ಷಗಳ ತೀರ್ಪುಗಳು ಮಾಹಿತಿ ಆಯೋಗದ ಜಾಲತಾಣದಲ್ಲಿ ಲಭ್ಯವಿಲ್ಲ. ಕೆಲವು ತೀರ್ಪುಗಳ ಪ್ರತಿಗಳಿಗಾಗಿ ಆಯೋಗಕ್ಕೆ ನಿಯಮಾನುಸಾರ ಅರ್ಜಿ ಸಲ್ಲಿಸಲಾಯಿತು. ಮಾಹಿತಿ ಹಕ್ಕು ಕಾಯಿದೆಯ ಅನುಷ್ಠಾನಕ್ಕೆ ರಾಜ್ಯ ಮಟ್ಟದ ಸರ್ವೋಚ್ಚ ವೇದಿಕೆಯಾದ ರಾಜ್ಯ ಮಾಹಿತಿ ಆಯೋಗದ ಉತ್ತರ ಹೇಗಿತ್ತೆಂದರೆ, ಸದ್ರಿ ಮಾಹಿತಿಯು “ತುಂಬಾ ಹಳೆಯದಾಗಿರುವುದರಿಂದ ಹುಡುಕಿ ಒದಗಿಸಲಾಗುವುದು” ಈ ಉತ್ತರಕ್ಕೆ ವರ್ಷಗಳೇ ಕಳೆದರೂ, ಇನ್ನೂ ಹುಡುಕುತ್ತಲೇ ಇದ್ದಾರೆ, ಆಯೋಗದ ಅಧಿಕಾರಿಗಳು! ಉತ್ತರ ಮಾತ್ರ ಬಂದೇ ಇಲ್ಲ.
●ಇನ್ನು ವೆಚ್ಚವಂತೂ,”ಯಾರದೋ ದುಡ್ಡು….”ಎಂಬಂತೆ:ಬೀದರ್ ವೈದ್ಯಕೀಯ ಕಾಲೇಜಿನಿಂದ ಒಂದು ಪುಟದಲ್ಲಿ ಒದಗಿಸಬಹುದಾದಷ್ಟು ಅಂಕಿಅಂಶಗಳನ್ನು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಮೊದಲಿಗೆ ಮಿಂಚಂಚೆ ಮೂಲಕ ವಿನಂತಿಸಿದಾಗ ಯಾವುದೇ ಪ್ರತಿಕ್ರಿಯೆ ಬಾರದ ಕಾರಣಕ್ಕೆ ಲಿಖಿತವಾಗಿ ₹10/-ಶುಲ್ಕ, ನೋಂದಣಿ ಅಂಚೆ ಸುಮಾರು ₹.50/-ವೆಚ್ಚ ಮಾಡಿ ಅರ್ಜಿ ಸಲ್ಲಿಸಲಾಗಿತ್ತು. ಒಂದು ವಾರದಲ್ಲಿ ಸುಂದರವಾದ ಲಕೋಟೆಯಲ್ಲಿ ತ್ವರಿತ ಅಂಚೆ ಮೂಲಕ ಒಂದು ಪತ್ರ ಬಂತು. ಇದಕ್ಕೆ ಒಟ್ಟು ವೆಚ್ಚ ಸುಮಾರು ₹75/- ರಷ್ಟು ಆಗಿರಬಹುದು. ಆದರೆ ಅದರಲ್ಲಿ ಕೋರಿರುವ ಮಾಹಿತಿ ಇರಲಿಲ್ಲ. ಅದು ವೈದ್ಯಕೀಯ ಕಾಲೇಜಿನ ಇನ್ನೊಂದು ವಿಭಾಗಕ್ಕೆ ಅರ್ಜಿ ವರ್ಗಾಯಿಸಿದ ಮಾಹಿತಿಯ ಪ್ರತಿ. ಸುಮಾರು ಮೂರು ವಾರಗಳ ನಂತರ ಅದೇ ರೀತಿ ಸುಮಾರು ₹.75/- ವೆಚ್ಚ ಮಾಡಿ ಒಂದು ಪತ್ರ ಬಂತು. ಅದರಲ್ಲಿ ಮಾಹಿತಿ ಒದಗಿಸಲು ಶುಲ್ಕವನ್ನು ಡಿ.ಡಿ. ಮೂಲಕ ಪಾವತಿಸಲು ಬರೆಯಲಾಗಿತ್ತು. ಎಷ್ಟು? ಕೇವಲ ₹.2/-! ಮತ್ತೊಮ್ಮೆ, ಈ ₹.2/-ನ್ನು ಯಾವುದೇ ರೂಪದಲ್ಲಿ ಕಳುಹಿಸಲು ಕನಿಷ್ಠ ₹.50/-ವೆಚ್ಚವಾಗುವುದರಿಂದ ವಿವರ ಒದಗಿಸಿದರೆ ವಿದ್ಯುನ್ಮಾನ ವರ್ಗಾವಣೆ ಮಾಡುವುದಾಗಿ ಮಿಂಚಂಚೆ ಮೂಲಕ ಬರೆದರೆ, ಉತ್ತರವೇ ಇಲ್ಲ! ಹೇಗಿದೆ ಸರಕಾರಿ ವ್ಯವಸ್ಥೆ?
●ಸದರಿ ಕಾಯಿದೆಯ ಪರಿಚ್ಛೇದ 8ರಲ್ಲಿ ಕೆಲವೊಂದು ಸಂದರ್ಭಗಳಲ್ಲಿ ನಾಗರಿಕರು ಕೋರಿರುವ ಮಾಹಿತಿಯನ್ನು ನಿರಾಕರಿಸಲು ಅವಕಾಶವಿದೆ. ಪರಿಚ್ಛೇದ 8(ಜೆ)ಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗೆ, ಅರ್ಜಿದಾರರು ಕೋರಿರುವ ಮಾಹಿತಿಯನ್ನು ‘ಸಾರ್ವಜನಿಕ ಹಿತಾಸಕ್ತಿ ಇಲ್ಲವೆಂದು ಭಾವಿಸಿದರೆ, ಅಂತಹ ಅರ್ಜಿಗಳನ್ನು ನಿರಾಕರಿಸಬಹುದು’ ಎಂದು ವಿಧಿಸಲಾಗಿದೆ. ಈ ನಿಯಮವನ್ನು ತಿರುಚಿ, ಅರ್ಜಿದಾರರು ಸ್ವತಃ ಅವರಿಗೇ ನೇರವಾಗಿ ಸಂಬಂಧಿಸಿದ ಮಾಹಿತಿಯನ್ನು ಕೋರಿದರೂ ಅದರಲ್ಲಿ “ಸಾರ್ವಜನಿಕ ಹಿತಾಸಕ್ತಿ ಇಲ್ಲವೆಂದು ಮನಗಂಡಿದ್ದು ಸದ್ರಿ ಅರ್ಜಿ ತಿರಸ್ಕರಿಸಿದೆ” ಎಂದು ಹಿಂಬರಹ ನೀಡುತ್ತಾರೆ. ತಮಾಷೆಯಲ್ಲವೇ?
●ಇಷ್ಟಕ್ಕೇ ಮುಗಿಯುವುದಿಲ್ಲ. ಕಾಯಿದೆಯ ಪರಿಚ್ಛೇದ 8(ii) ಮತ್ತು (iii)ರಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದು ಮೇಲ್ಮನವಿ ಸಲ್ಲಿಸಲು ಇರುವ ಅವಧಿ ಮತ್ತು ಮೇಲ್ಮನವಿ ಪ್ರಾಧಿಕಾರದ ಹೆಸರು, ವಿಳಾಸ ಮುಂತಾದ ವಿವರ ತಿಳಿಸಬೇಕಾಗಿದೆ. ಹೀಗೆ ಅರ್ಜಿ ತಿರಸ್ಕರಿಸಲ್ಪಟ್ಟಾಗ ಒದಗಿಸುವ ವಿವರಗಳನುಸಾರ ಸಕ್ಷಮ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದರೆ ಮುಂದೆ ಸಾಗಬೇಕಾದ ಕಠಿಣ ಹಾದಿ ಹೇಗಿದೆ ನೋಡಿ-
●ಬಹಳಷ್ಟು ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಲ್ಪಡುವುದಿಲ್ಲ. ಆದರೂ ಈ ಕಾಯಿದೆಯಡಿ ಪ್ರಾಮಾಣಿಕವಾಗಿ ಮಾಹಿತಿಯ ಅಗತ್ಯವಿದ್ದು ಅರ್ಜಿ ಸಲ್ಲಿಸಿದವರು ನ್ಯಾಯ ಸಿಗುವ ಆಶಾವಾದದಿಂದ ಮೇಲ್ಮನವಿ ಸಲ್ಲಿಸುತ್ತಾರೆ. ಆದರೆ ಹೆಚ್ಚಿನ ಮೇಲ್ಮನವಿ ಪ್ರಕರಣಗಳ ಅರ್ಜಿದಾರರು ಅನೂಹ್ಯ ಸುಳಿಯಲ್ಲಿ ಸಿಕ್ಕಿ ನರಳುತ್ತಾರೆ; ಹೇಗೆಂದರೆ-
●ಈ ಮೇಲ್ಮನವಿ ಪ್ರಹಸನ ಒಂದೇ ಹಂತದಲ್ಲಿ ಮುಗಿಯುವುದಿಲ್ಲ. ನಿಗದಿ ಪಡಿಸಿದ ದಿನ ಮತ್ತು ಸಮಯದಲ್ಲಿ ಮೇಲ್ಮನವಿ ವಿಚಾರಣೆಯ ಅಧಿಕಾರಿಯ ಕಚೇರಿಗೆ ಅರ್ಜಿದಾರರು ಕ್ಲಪ್ತ ಸಮಯದಲ್ಲಿ ಹಾಜರಾದರೂ, ದಿನವಿಡೀ, ಕೆಲವೊಮ್ಮೆ ದಿನಗಟ್ಟಲೆ ಕಾಯುವ ಪರಿಸ್ಥಿತಿ ಸೃಷ್ಟಿಸುತ್ತಾರೆ. ಕಾದು ಕಾದು ಸುಸ್ತಾಗಿ ವಾಪಸ್ಸು ಹೋಗುವಂತಹ ಮನಸ್ಥಿತಿಗೆ ಅರ್ಜಿದಾರರನ್ನು ದೂಡುತ್ತಾರೆ. ಸಾಮಾನ್ಯವಾಗಿ ಇಂತಹ ವಿಚಾರಣೆಯನ್ನು ವಾರಾಂತ್ಯದಲ್ಲಿ ನಿಗದಿ ಪಡಿಸಲಾಗುತ್ತದೆ. ಆ ದಿನ ಯಾರಾದರೂ, ರಾಜಕಾರಣಿಗಳೋ, ಸಿನೇಮಾದವರೋ ನಿಧನರಾದರೆ ಮುಗಿದೇ ಹೋಯ್ತು. ಆ ದಿನ ರಜೆ, ಮರುದಿನ ಸಾರ್ವಜನಿಕ ರಜೆ. ಹೀಗಾಗಿ ಎರಡು ಮೂರು ದಿನ ಕಾಯುವ ಧೈರ್ಯ ಬಹುಶಃ ಯಾರೂ ಮಾಡಲಿಕ್ಕಿಲ್ಲ.
●ಮುಂದುವರಿದು ಈ ಪ್ರಕರಣವೇನಾದರೂ ಮಾಹಿತಿ ಆಯೋಗದ ಮೆಟ್ಟಿಲು ಹತ್ತಿದರೆ ಇಂತಹ ಪ್ರಹಸನ ವರ್ಷಗಳ ಕಾಲ ಎಳೆದು, ದೂರದ ಗುಲ್ಬರ್ಗ, ರಾಯಚೂರು, ಮಂಗಳೂರು ಮುಂತಾದ ಊರುಗಳಿಂದ ಬೆಂಗಳೂರಿಗೆ ಅಲೆದಾಟ, ಪ್ರಯಾಣ ವೆಚ್ಚ…… ಹೀಗೆ ಕೊನೆಯಿಲ್ಲದ ಜಂಜಾಟಗಳಿಗೆ ಬೇಸತ್ತು ಕೈಚೆಲ್ಲುವವರೇ ಹೆಚ್ಚು!
ಇವೆಲ್ಲವನ್ನು ಅವಲೋಕಿಸಿದರೆ ಬೆಟ್ಟದಷ್ಟು ನಿರೀಕ್ಷೆಗಳೊಂದಿಗೆ ಹುಟ್ಟಿದ ಮಾಹಿತಿ ಹಕ್ಕು ಕಾಯಿದೆಯ ಮೂಲ ಆಶಯ ವಿಫಲವಾಗಿದೆ ಎಂದೆನಿಸುವುದಿಲ್ಲವೇ?
★ಮೋಹನದಾಸ ಕಿಣಿ, ಕಾಪು