
ಶಿವಮೊಗ್ಗ ನಗರದ ಪ್ರಮುಖ ರಸ್ತೆಯ ಎಟಿಎಂ ಕೇಂದ್ರವೊಂದರಲ್ಲಿ ಕಳ್ಳತನ ನಡೆಸಲು ಯತ್ನ ನಡೆಸಲಾಗಿದೆ. ಎಟಿಎಂ ಮೆಷಿನ್ ಒಡೆದು ಹಾನಿಗೊಳಿಸಿ, ಹಣ ದೋಚಲು ಪ್ರಯತ್ನ ಮಾಡಿ ಬರಿಗೈಯಲ್ಲಿ ವಾಪಸ್ ಆಗಿದ್ದಾರೆ.
ನಗರದ ಬಿ. ಹೆಚ್. ರಸ್ತೆಯಲ್ಲಿ ಎಟಿಎಂ ಕೇಂದ್ರದಲ್ಲಿ ಕಳ್ಳರು ಎಟಿಎಂ ಮೆಷಿನ್ ಹಾನಿಗೊಳಿಸಿದ್ದಾರೆ. ಮೆಷಿನ್ ಒಡೆದು ಹಣ ದೋಚಲು ಪ್ರಯತ್ನಿಸಿದ್ದಾರೆ. ಕಳ್ಳರ ಕೃತ್ಯದಿಂದ ಎಟಿಎಂ ಮೆಷನ್ ಪೀಸ್ ಪೀಸ್ ಆಗಿದೆ
ಕಷ್ಟಪಟ್ಟು ಎಟಿಎಂ ಮೆಷಿನ್ ಒಡೆದರೂ ಕಳ್ಳರಿಗೆ ಹಣ ಸಿಕ್ಕಿಲ್ಲ. ಮೆಷಿನ್ನಲ್ಲಿದ್ದ ಹಣದ ಬಾಕ್ಸ್ ಒಡೆಯಲು ಸಾಧ್ಯವಾಗಿಲ್ಲ. ಹಾಗಾಗಿ ಎಟಿಎಂನ ಒಳಗಿದ್ದ ಹಣ ಭದ್ರವಾಗಿ ಉಳಿದುಕೊಂಡಿದೆ. ಶನಿವಾರ ರಾತ್ರಿ ಅಥವಾ ಭಾನುವಾರ ಘಟನೆ ಸಂಭವಿಸಿರುವ ಸಾಧ್ಯತೆ ಇದೆ.
ಸೋಮವಾರ ಬ್ಯಾಂಕ್ ಸಿಬ್ಬಂದಿಗಳು ಬಂದು ಪರಿಶೀಲನೆ ನಡೆಸಿದಾಗ ಕಳ್ಳತನ ಯತ್ನ ಪ್ರಕರಣ ಬೆಳಕಿಗೆ ಬಂದಿದೆ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.














