
ಮಂಗಳೂರು: ಮಲೈಕಾ ಸೊಸೈಟಿ ಹೆಸರನಲ್ಲಿ ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಹಣವನ್ನು ಠೇವಣಿ ರೂಪದಲ್ಲಿ ಪಡೆದು ಬಳಿಕ ಹಿಂತಿರುಗಿಸದೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಮಾದಕ ದ್ರವ್ಯ ಮತ್ತು ಅಪರಾಧ ವಿಭಾಗದ ಪೊಲೀಸರು ಮಂಗಳೂರು ಶಾಖೆಯ ವ್ಯವಸ್ಥಾಪಕರಾಗಿರುವ ರೀನಾ ಜೋಶ್ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಮುಂಬೈ, ಮಂಗಳೂರುಗಳಲ್ಲಿ ಮಲೈಕಾ ಸ್ಟೇಟ್ ಕೋ ಅಪರೇಟಿವ್ ಸೊಸೈಟಿ ಹಲವಾರ ಶಾಖೆಗಳನ್ನು ಹೊಂದಿದ್ದು ಹಿರಿಯ ನಾಗರಿಕರಿಗೆ ಅಕರ್ಷಕ ಬಡ್ಡಿ ನೀಡುವುದಾಗಿ ಹೇಳಿ ಸಾವಿರಾರು ಮಂದಿಯಿಂದ ಕೋಟ್ಯಂತರ ಹಣವನ್ನು ಹೂಡಿಕೆ ಮಾಡಿಸಿಕೊಳ್ಳಲಾಗಿತ್ತು. ಸೊಸೈಟಿಯ ಮುಖ್ಯಸ್ಥರ ಮಾತಿಗೆ ನಂಬಿ ಉನ್ನತ ಹುದ್ದೆಯಲ್ಲಿದ್ದವರರು ನಿವೃತ್ತಿಯಾದಾಗ ತಮ್ಮ ಹಣವನ್ನು ಈ ಸೊಸೈಟಿಯಲ್ಲಿ ಹೂಡಿಕೆ ಮಾಡಿದ್ದು, ಅದರ ಅವಧಿ ಮುಗಿದಾಗ ಹಣ ಹಿಂತಿರುಗಿಸುವಂತೆ ಕೇಳಿದಾಗ ಸ್ಪಂದನೆ ದೊರಕಿರಲಿಲ್ಲ. ಈ ನಡುವೆ ಮಂಗಳೂರಿನ ಬೆಂದೂರ್ ವೆಲ್ ನಲ್ಲಿರುವ ಶಾಖೆ ಬಾಗಿಲು ಹಾಕಿದ್ದು ಈ ಹಿನ್ನಲೆಯಲ್ಲಿ ಸಂಸ್ಥೆಯ ಸ್ಥಾಪಕರಾದ ಗಿಲ್ಬರ್ಟ್ ಬ್ಯಾಪ್ಟಿಸ್ಟ್ ಆತನ ಪತ್ನಿ ಮರ್ಲಿನ್ ಸೇರಿದಂತೆ ಆಡಳಿತ ಮಂಡಳಿಯ 12 ಮಂದಿ ವಿರುದ್ದ ಮಂಗಳೂರಿನ ಮಾದಕ ದ್ರವ್ಯ ಮತ್ತು ಅಪರಾಧ ವಿಭಾಗಕ್ಕೆ ಹಲವಾರು ಮಂದಿ ದೂರು ನೀಡಿದ್ದರು.
ದೂರಿನ ಅನ್ವಯ ಪೊಲೀಸರು ಮಂಗಳೂರು ಶಾಖೆಯ ವ್ಯವಸ್ಥಾಪಕರಾದ ರೀನಾ ಜೋಶ್ ಅವರನ್ನು ವಶಕ್ಕೆ ಪಡೆದು ಆಕೆಯಿಂದ ಮಾಹಿತಿ ಪಡೆಯುತ್ತಿದ್ದು ಕಚೇರಿಯಲ್ಲಿನ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.